

ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ಮತ್ತೆ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ಭುಗಿಲೆದಿದ್ದು, ಡೋಕ್ಲಾಂ, ಗಲ್ವಾನ್ ರೀತಿಯ ಸಂಘರ್ಷ ಏರ್ಪಡುತ್ತಿದೆ ಎಂದು ಹೇಳಲಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜೊತೆಗಿನ ಇತ್ತೀಚಿನ ಮುಖಾಮುಖಿಗಳ ಕುರಿತು ನೀಡಿರುವ ಹೇಳಿಕೆಗಳು ಈ ಸುದ್ದಿಗಳಿಗೆ ಇಂಬು ನೀಡಿವೆ.
ಇನ್ನು ಈ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ಚೀನಾ ಸೇನೆ ನಿಗದಿತ ಗಸ್ತು ಸಂಪ್ರದಾಯಗಳಿಂದ ಭಿನ್ನವಾಗಿ ನಡೆದುಕೊಂಡಾಗ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಆಗಾಗ್ಗೆ ಉದ್ವಿಗ್ನಗೊಳ್ಳುತ್ತದೆ ಎಂದು ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರರು, ಗಡಿ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ತಪ್ಪು ತಿಳಿವಳಿಕೆಗಳನ್ನು ನಿವಾರಿಸಲು ಎರಡೂ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ವ್ಯವಸ್ಥೆಗಳ ಮೂಲಕ ಮಾತುಕತೆ ಮುಂದುವರಿಸಿವೆ ಎಂದು ಹೇಳಿದ್ದಾರೆ.
"ನಿರ್ದಿಷ್ಟ ಘಟನೆಗಳ ಕುರಿತು ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಬಹುದು. ಈ ಹಿಂದೆ ನಾವು ತಿಳಿಸಿರುವಂತೆ, ಚೀನಾ ಸೇನೆ ನಿಗದಿತ ಗಸ್ತು ಮಾದರಿಗಳಿಂದ ಭಿನ್ನವಾಗಿ ನಡೆದುಕೊಂಡಾಗ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಆಗಾಗ್ಗೆ ಹದಗೆಡುತ್ತದೆ" ಎಂದು ವಕ್ತಾರರು ಹೇಳಿದ್ದಾರೆ.
ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಇರುವ ಬಾಕಿ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ತಪ್ಪು ಲೆಕ್ಕಾಚಾರ ಮತ್ತು ತಿಳಿವಳಿಕೆ ಕೊರತೆಯಿಂದ ಉಂಟಾಗಬಹುದಾದ ಸಂಘರ್ಷಗಳನ್ನು ತಪ್ಪಿಸಲು ಎರಡೂ ದೇಶಗಳು ಈಗಿರುವ ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳನ್ನು ಬಳಸುತ್ತಿವೆ ಎಂದೂ ಅವರು ತಿಳಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಉಭಯ ದೇಶಗಳ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗೆ ಅತ್ಯಗತ್ಯ ಎಂದು ವಿದೇಶಾಂಗ ಸಚಿವಾಲಯ ಒತ್ತಿಹೇಳಿದೆ.