ಕಾಶ್ಮೀರಿಗಳ ಅಸ್ತಿತ್ವ ಉಳಿಯಲು ಪಾಕಿಸ್ತಾನದ ಪ್ರಯತ್ನಗಳೇ ಕಾರಣ; ಭಾರತದ ಉದ್ದೇಶ ಸರಿ ಇಲ್ಲ: ಫಾರೂಕ್ ಅಬ್ದುಲ್ಲಾ!

ಕಾಶ್ಮೀರಿಗಳ ಧ್ವನಿ ಜಾಗತಿಕ ಮಟ್ಟದಲ್ಲಿ ಕೇಳಿಬರುವಂತೆ ಮಾಡುವಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳೇ ಕಾರಣ ಎಂದು ಅವರು ಪ್ರತಿಪಾದಿಸಿದ್ದಾರೆ.
Farooq Abdullah says Pakistan "protecting" Kashmiris; BJP leaders accuse him of treason
ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ!online desk
Updated on: 

ಶ್ರೀನಗರ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕಾಶ್ಮೀರಿಗಳ ವಿಷಯದಲ್ಲಿ ಭಾರತ ಸರ್ಕಾರದ ಉದ್ದೇಶಗಳು ಸರಿ ಇಲ್ಲ ಎಂದು ಹೇಳಿದ್ದು ಈಗ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಕಾಶ್ಮೀರಿಗಳ ಕುರಿತು ಮಾಜಿ ಮುಖ್ಯಮಂತ್ರಿ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು "ದೇಶದ್ರೋಹದ" ಮತ್ತು "ಪಾಕಿಸ್ತಾನ ಪರ" ಎಂದು ಹೇಳಿದೆ.

ಕಾಶ್ಮೀರಿಗಳ ಧ್ವನಿ ಜಾಗತಿಕ ಮಟ್ಟದಲ್ಲಿ ಕೇಳಿಬರುವಂತೆ ಮಾಡುವಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳೇ ಕಾರಣ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಬಿಜೆಪಿ, ಅಬ್ದುಲ್ಲಾ ಅವರ ಹೇಳಿಕೆಗಳು ಪಾಕಿಸ್ತಾನದ ಪರವಾಗಿವೆ ಮತ್ತು ದುರದೃಷ್ಟಕರ ಎಂದು ಟೀಕಿಸಿದೆ. ಕೆಲ ನಾಯಕರು ಅಬ್ದುಲ್ಲಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದು ಭಾರತದ ನಿಲುವಾಗಿದೆ. ಅಲ್ಲದೆ, ಪಾಕಿಸ್ತಾನ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಪೋಷಿಸಲು ಮತ್ತು ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದೆ.

ಫಾರೂಕ್ ಅಬ್ದುಲ್ಲಾ ಹೇಳಿದ್ದೇನು?

ಬಾರಾಮುಲ್ಲಾದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವೊಂದರಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಪಾಕಿಸ್ತಾನ ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರಿಗಳ ವಿಷಯವನ್ನು ಪ್ರಸ್ತಾಪಿಸುತ್ತಿರುವುದರಿಂದಲೇ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇನ್ನೂ ಒಂದು ಗುರುತು (ಅಸ್ತಿತ್ವ) ಉಳಿದುಕೊಂಡಿದೆ ಎಂದು ಹೇಳಿದ್ದಾರೆ.

"ಜಾಗತಿಕ ಒತ್ತಡದ ಕಾರಣದಿಂದಾಗಿ ಅವರು (ಭಾರತ ಸರ್ಕಾರ) ಇಂದು ಸುಮ್ಮನಿದ್ದಾರೆ. ನಮ್ಮ ನೆರೆಯ ರಾಷ್ಟ್ರವು ಎಲ್ಲೆಡೆ ಹೋಗಿ ಕಾಶ್ಮೀರ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹೇಳುತ್ತಿದೆ. ಅವರು ನಮ್ಮನ್ನು ರಕ್ಷಿಸುತ್ತಿದ್ದಾರೆ. ಇಲ್ಲದಿದ್ದರೆ, ಅವರ (ಭಾರತದ) ಉದ್ದೇಶಗಳು ಸರಿಯಿಲ್ಲ," ಎಂದು ಮಾಜಿ ಸಿಎಂ ಅಬ್ದುಲ್ಲಾ ಹೇಳಿದ್ದಾರೆ.

Farooq Abdullah says Pakistan "protecting" Kashmiris; BJP leaders accuse him of treason
ಪದ್ಮಭೂಷಣ ಏಕೆ? ಬಂಗಾಳವನ್ನೇ ಬಿಜೆಪಿಗೆ ಉಡುಗೊರೆಯಾಗಿ ನೀಡಿರುವ ಜ್ಞಾನೇಶ್ ಕುಮಾರ್‌ಗೆ 'ಭಾರತ ರತ್ನ' ನೀಡಿ: ಒಮರ್ ಅಬ್ದುಲ್ಲಾ

ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ತಮ್ಮ ತಂದೆಯ ಈ ಹೇಳಿಕೆಯ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗಡಿಯಾಚೆಗಿನ ಪರಿಸ್ಥಿತಿಯನ್ನು ಗಮನಿಸಿ: ಬಿಜೆಪಿ ಸಲಹೆ

ಅಬ್ದುಲ್ಲಾ ಅವರನ್ನು ಟೀಕಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ. ಸಿಂಗ್, ಈ ಹಿರಿಯ ಕಾಶ್ಮೀರಿ ರಾಜಕಾರಣಿ "ಗಡಿಯಾಚೆಗಿನ" ಪರಿಸ್ಥಿತಿಯನ್ನು ಗಮನಿಸಬೇಕು ಮತ್ತು ಅಲ್ಲಿನ ಕಾಶ್ಮೀರಿಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ನೋಡಬೇಕು ಎಂದು ಹೇಳಿದರು.

"ಇಲ್ಲಿ ಕಾಶ್ಮೀರ ಉತ್ತಮ ಸ್ಥಿತಿಯಲ್ಲಿದೆ, ಏಕೆಂದರೆ 370ನೇ ವಿಧಿಯನ್ನು ರದ್ದುಗೊಳಿಸಲಾಯಿತು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನಗೊಳಿಸಲಾಯಿತು. ಇದೇ ಕಾರಣಕ್ಕೆ ಪ್ರತಿ ವರ್ಷ ಎರಡು ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾಶ್ಮೀರವು ಆರ್ಥಿಕವಾಗಿಯೂ ಉತ್ತಮ ಸ್ಥಿತಿಯಲ್ಲಿರುವುದಕ್ಕೆ ಇದೇ ಕಾರಣ," ಎಂದು ಸಿಂಗ್ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ (IANS) ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯೆ ಯಾಮಿನಿ ಶರ್ಮಾ ಕೂಡ, ಅಬ್ದುಲ್ಲಾ ಅವರು ಪಾಕಿಸ್ತಾನದ ನಿಲುವನ್ನೇ ಪ್ರತಿಧ್ವನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ಜಮ್ಮು ಮತ್ತು ಕಾಶ್ಮೀರದ ಕುರಿತು ಫಾರೂಕ್ ಅಬ್ದುಲ್ಲಾ ನೀಡಿರುವ ಹೇಳಿಕೆಯು ಭಾರತೀಯ ಸಂವಿಧಾನಕ್ಕೆ ಹಾಗೂ ಜಮ್ಮು ಮತ್ತು ಕಾಶ್ಮೀರದ ದೇಶಭಕ್ತ ಜನರಿಗೆ ತೀವ್ರ ಅವಮಾನವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಕಣಿವೆಯಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಪಾಕಿಸ್ತಾನದ ವಕ್ತಾರರಂತೆ ವರ್ತಿಸುತ್ತಿದೆ," ಎಂದು ಅವರು ಹೇಳಿದರು.

ಅಬ್ದುಲ್ಲಾ ಅವರ ಹೇಳಿಕೆಯನ್ನು 'ಭಾರತ ವಿರೋಧಿ' ಮತ್ತು 'ಪಾಕಿಸ್ತಾನ ಪರ' ಎಂದು ಖಂಡಿಸಿದ ಬಿಜೆಪಿ ಶಾಸಕ ಯುಧ್ವೀರ್ ಸೇಥಿ, ಇದು ದೇಶದ್ರೋಹಕ್ಕೆ ಸಮಾನವಾಗಿದೆ ಎಂದು ಹೇಳಿದರು.

"ದೇಶದ ವಿರುದ್ಧ ಮಾತನಾಡುವವರು ದೇಶದ್ರೋಹದ ಪ್ರಕರಣವನ್ನು ಎದುರಿಸಲೇಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ರಕ್ತಪಾತವನ್ನು ಹರಡುವ ಹಿಂದೆ ಪಾಕಿಸ್ತಾನವಿದೆ ಎಂಬುದು ಜಗತ್ತಿಗೇ ತಿಳಿದಿದೆ. ಆದ್ದರಿಂದ, ಪಾಕಿಸ್ತಾನದ ಪರವಾಗಿ ನೀಡಲಾದ ಇಂತಹ ಹೇಳಿಕೆಗಳು ಖಂಡನೀಯ. ಇದಕ್ಕಾಗಿ ಫಾರೂಕ್ ಅಬ್ದುಲ್ಲಾ ಕ್ಷಮೆಯಾಚಿಸಬೇಕು," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com