'ಪದ್ಮಭೂಷಣ ಏಕೆ?: ಬಂಗಾಳವನ್ನೇ ಬಿಜೆಪಿಗೆ ಉಡುಗೊರೆಯಾಗಿ ನೀಡಿರುವ ಜ್ಞಾನೇಶ್ ಕುಮಾರ್‌ಗೆ 'ಭಾರತ ರತ್ನ' ನೀಡಿ; ಒಮರ್ ಅಬ್ದುಲ್ಲಾ

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ, ಭಾರತೀಯ ಚುನಾವಣಾ ಆಯೋಗವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
Omar Abdullah
ಒಮರ್ ಅಬ್ದುಲ್ಲಾ
Updated on: 

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತಾದ ಇತ್ತೀಚಿನ ವರದಿಗಳು ಹಾಗೂ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ವಿರುದ್ಧ ಹೆಚ್ಚುತ್ತಿರುವ ಟೀಕೆಗಳ ನಡುವೆ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಬೇಕು ಎಂದು ಮಂಗಳವಾರ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ, ಭಾರತೀಯ ಚುನಾವಣಾ ಆಯೋಗವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

'ವಿರೋಧ ಪಕ್ಷಗಳು ಚುನಾವಣಾ ಆಯೋಗದ (ECI) ವಿರುದ್ಧ ಇರುವುದಕ್ಕೆ ನಿರ್ದಿಷ್ಟ ಕಾರಣವಿದೆ... ಈ ಸಾಕ್ಷ್ಯಗಳನ್ನು ಯಾವುದೇ ರಾಜಕೀಯ ಪಕ್ಷವು ಮುಂದಿಟ್ಟಿಲ್ಲ, ಬದಲಾಗಿ ಒಂದು ಪತ್ರಿಕೆಯು ಬಹಿರಂಗಪಡಿಸಿದೆ' ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯೊಂದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು; ಆ ವರದಿ ಪ್ರಕಾರ, ತಮ್ಮ ಗಮನಕ್ಕೆ ಬಾರದೆ ಅಥವಾ ಶಿಫಾರಸು ಇಲ್ಲದೆ ಹೊರಡಿಸಲಾದ 'ಎಸ್‌ಐಆರ್' ಸಂಬಂಧಿತ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಮುಖ್ಯ ಚುನಾವಣಾ ಆಯುಕ್ತರಿಗೆ 'ಪದ್ಮಭೂಷಣ' ಪ್ರಶಸ್ತಿ ನೀಡುವ ಕುರಿತಾದ ಪ್ರಸ್ತಾಪದ ಬಗ್ಗೆ ಕೇಳಿದಾಗ, ಅಬ್ದುಲ್ಲಾ ಅವರು ವ್ಯಂಗ್ಯವಾಗಿ, ಕೇವಲ ಅದನ್ನೇ ಏಕೆ, 'ಭಾರತ ರತ್ನ'ವನ್ನೇ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.

Omar Abdullah
'ಪದ್ಮಭೂಷಣ ಸಣ್ಣ ವಿಷಯ, ಅವರನ್ನು ಪ್ರಧಾನಿಯನ್ನಾಗಿ ಮಾಡಿ': ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಹೇಳಿಕೆಗೆ ಕಾಂಗ್ರೆಸ್ ಲೇವಡಿ

'ಪದ್ಮಭೂಷಣಕ್ಕೆ ಏಕೆ ಸೀಮಿತವಾಗಬೇಕು? ಜ್ಞಾನೇಶ್ ಕುಮಾರ್ ಅವರಿಗೆ 'ಭಾರತ ರತ್ನ' ನೀಡಬೇಕು ಅಥವಾ ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಬೇಕು... ರಾಷ್ಟ್ರಪತಿ ಚುನಾವಣೆಗೆ ಇನ್ನು ಕೇವಲ ಎರಡು ವರ್ಷಗಳಷ್ಟೇ ಬಾಕಿ ಇವೆ... ಅವರು ಬಿಜೆಪಿಗೆ ಅಷ್ಟೊಂದು ಸೇವೆ ಸಲ್ಲಿಸಿದ್ದಾರೆ... ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಉಡುಗೊರೆಯಾಗಿ ನೀಡಿದ್ದಾರೆ' ಎಂದು ಒಮರ್ ಅಬ್ದುಲ್ಲಾ ಹೇಳಿದರು.

ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಅವರು ಇತ್ತೀಚೆಗೆ, ಜ್ಞಾನೇಶ್ ಕುಮಾರ್ ಅವರಿಗೆ 'ಕನಿಷ್ಠಪಕ್ಷ' ಪದ್ಮಭೂಷಣ ಪ್ರಶಸ್ತಿಯಾದರೂ ಸಿಗಬೇಕಿತ್ತು ಎಂದು ಹೇಳಿದ್ದಾರೆ; ಅಲ್ಲದೆ, ರಾಜ್ಯದಲ್ಲಿ ಹಿಂಸಾಚಾರ ಮುಕ್ತ ವಿಧಾನಸಭಾ ಚುನಾವಣೆಯನ್ನು ಖಾತ್ರಿಪಡಿಸಿದ ಹಾಗೂ ಅಕ್ರಮ ಬಾಂಗ್ಲಾದೇಶಿಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಅದನ್ನು 'ಶುದ್ಧೀಕರಿಸಿದ' ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.

'SIR' ಪ್ರಕ್ರಿಯೆಯ ಸಂದರ್ಭದಲ್ಲಿ ತಮ್ಮ ಹೆಸರಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ ವರದಿಗಳು ಹೊರಬಂದ ನಂತರ, ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ವಿವಾದ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಭಟ್ಟಾಚಾರ್ಯರು ಮುಖ್ಯ ಚುನಾವಣಾ ಆಯುಕ್ತರ (CEC) ಪರವಾಗಿ ಸಮರ್ಥನೆ ನೀಡಿದರು.

ಪದ್ಮಭೂಷಣವು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

'ಜ್ಞಾನೇಶ್ ಕುಮಾರ್ ಅವರಿಗೆ ಕನಿಷ್ಠಪಕ್ಷ 'ಪದ್ಮಭೂಷಣ' ಪ್ರಶಸ್ತಿಯನ್ನಾದರೂ ನೀಡಬೇಕು. ದೀರ್ಘಕಾಲದ ನಂತರ ಬೆದರಿಕೆ ತಂತ್ರಗಳಿಗೆ ಕಡಿವಾಣ ಬಿದ್ದಿರುವುದು, ಚುನಾವಣೆ ವೇಳೆ ಯಾವುದೇ ಹತ್ಯೆಗಳು ನಡೆಯದಿರುವುದು ಹಾಗೂ ಜನರು ತಮ್ಮ ಮತ ಚಲಾಯಿಸಲು ನಿಜವಾಗಿಯೂ ಅವಕಾಶ ಸಿಕ್ಕಿರುವುದು ಪಶ್ಚಿಮ ಬಂಗಾಳದ ಜನರಿಗೆ ಸಂತಸ ತಂದಿದೆ' ಎಂದು ಹೇಳಿದ್ದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com