TNIE Devi Awards: ಮಹಿಳೆಯರ ಧೈರ್ಯ, ದೃಢಸಂಕಲ್ಪಕ್ಕೆ ಗೌರವ, ಸನ್ಮಾನ: ಹೈದರಾಬಾದ್ ಕಾರ್ಯಕ್ರಮ

2014ರ ಡಿಸೆಂಬರ್‌ನಲ್ಲಿ ಆರಂಭವಾದ ದೇವಿ ಪ್ರಶಸ್ತಿ ಕಾರ್ಯಕ್ರಮದಡಿ ಇದುವರೆಗೆ 10 ರಾಜ್ಯಗಳಲ್ಲಿ 40 ಸಮಾರಂಭಗಳನ್ನು ಆಯೋಜಿಸಲಾಗಿದ್ದು, 480ಕ್ಕೂ ಹೆಚ್ಚು ಮಹಿಳಾ ಸಾಧಕಿಯರನ್ನು ಗೌರವಿಸಲಾಗಿದೆ.
Devi award winners
ಹೈದರಾಬಾದ್ ನಲ್ಲಿ ನಡೆದ ಸಮಾರಂಭದಲ್ಲಿ ದೇವಿ ಪ್ರಶಸ್ತಿ ಪುರಸ್ಕೃತರು
Updated on: 

ಹೈದರಾಬಾದ್: ಅಡೆತಡೆಗಳನ್ನು ಮೆಟ್ಟಿನಿಂತು ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಮಹಿಳೆಯರ ಧೈರ್ಯ, ದೃಢಸಂಕಲ್ಪ ಮತ್ತು ಸಾಧನೆಗಳನ್ನು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ 41ನೇ ಆವೃತ್ತಿಯ ‘ದೇವಿ ಪ್ರಶಸ್ತಿ’ ಸಮಾರಂಭದಲ್ಲಿ ಗೌರವಿಸಲಾಯಿತು.

ನಿನ್ನೆ ಶುಕ್ರವಾರ ಹೈದರಾಬಾದ್‌ನ ಖಾಸಗಿ ಹೊಟೇಲ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರೀಡೆ, ಆರೋಗ್ಯ ಸೇವೆ, ಪಾರಂಪರಿಕ ತಾಣಗಳ ಸಂರಕ್ಷಣೆ, ಶಿಕ್ಷಣ, ಸಿನಿಮಾ ಹಾಗೂ ಕಲಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ 10 ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.

2014ರ ಡಿಸೆಂಬರ್‌ನಲ್ಲಿ ಆರಂಭವಾದ ದೇವಿ ಪ್ರಶಸ್ತಿ ಕಾರ್ಯಕ್ರಮದಡಿ ಇದುವರೆಗೆ 10 ರಾಜ್ಯಗಳಲ್ಲಿ 40 ಸಮಾರಂಭಗಳನ್ನು ಆಯೋಜಿಸಲಾಗಿದ್ದು, 480ಕ್ಕೂ ಹೆಚ್ಚು ಮಹಿಳಾ ಸಾಧಕಿಯರನ್ನು ಗೌರವಿಸಲಾಗಿದೆ.

Devi award winners
Devi Awards 2025: ದೆಹಲಿಯಲ್ಲಿ 36 ನೇ ದೇವಿ ಪ್ರಶಸ್ತಿ ಪ್ರದಾನ; 12 ಮಂದಿ ಸಾಧಕಿಯರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ, ಈ ಮಹತ್ವದ ಉಪಕ್ರಮಕ್ಕಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯನ್ನು(The New Indian Express) ಅಭಿನಂದಿಸಿದರು. ಮಹಿಳಾ ಸಬಲೀಕರಣಕ್ಕೆ ಸಮಾನತೆ, ಸ್ವಾತಂತ್ರ್ಯ, ಸುರಕ್ಷತೆ ಮತ್ತು ಘನತೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಲಕ್ಷ್ಮಿ ಮೆನನ್ ಸಭಿಕರನ್ನು ಸ್ವಾಗತಿಸಿ, ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು.

ಸಂಸತ್ತಿನಲ್ಲಿದ್ದ ದಿನಗಳಿಂದಲೂ ತಮಗೆ ಪರಿಚಿತರಾಗಿರುವ ಪ್ರಭು ಚಾವ್ಲಾ ಅವರನ್ನು ಸ್ಮರಿಸಿದ ರಾಜ್ಯಪಾಲರು, ಸಮಾಜಕ್ಕೆ ಮಹಿಳೆಯರು ನೀಡುತ್ತಿರುವ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತಿರುವ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಜ್ಞಾನದ ದೇವತೆ, ಶಕ್ತಿಯ ದೇವತೆ ಹಾಗೂ ಸಾಮರ್ಥ್ಯದ ಪ್ರತೀಕವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ಮಹಿಳೆಯರ ಮೇಲಿನ ಗೌರವವು ಕೇವಲ ಸಾಂಕೇತಿಕ ಆಚರಣೆಗಳಿಗೆ ಸೀಮಿತವಾಗಬಾರದು. ಅದು ದೈನಂದಿನ ಜೀವನದಲ್ಲಿ ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಕಾರ್ಯರೂಪಕ್ಕೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಸಮಾನತೆ, ಸ್ವಾತಂತ್ರ್ಯ, ಸುರಕ್ಷತೆ ಮತ್ತು ಘನತೆ ದೊರೆತಾಗ ಮಾತ್ರ ಮಹಿಳೆಯರಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ. ಮಹಿಳಾ ಸಬಲೀಕರಣವು ಕೇವಲ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಾತ್ರವಲ್ಲ, ದೇಶದ ಅಭಿವೃದ್ಧಿಯ ದೃಷ್ಟಿಯಿಂದಲೂ ಅತ್ಯಂತ ಅಗತ್ಯವಾಗಿದೆ ಎಂದು ಶಿವಪ್ರತಾಪ್ ಶುಕ್ಲಾ ಪ್ರತಿಪಾದಿಸಿದರು.

Devi award winners
Devi Awards Bengaluru: ಕನಸು, ಶ್ರಮ, ಪ್ರಶಸ್ತಿ; ದೇವಿ ಅವಾರ್ಡ್ಸ್ ಪುರಸ್ಕೃತರ ಮನದಾಳದ ಮಾತುಗಳು!

ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸಲು ರಾಜ್ಯಪಾಲರ ಕರೆ

ಪ್ರಶಸ್ತಿ ಪುರಸ್ಕೃತರಲ್ಲಿ ಭಾರತದ ಮೊದಲ ಮಹಿಳಾ ಲೈನ್‌ಮನ್ ಬಬ್ಬೂರಿ ಶಿರೀಷಾ, ಶೂಟಿಂಗ್ ಕ್ರೀಡಾಪಟು ಇಶಾ ಸಿಂಗ್, ನೇತ್ರತಜ್ಞೆ ಡಾ. ಶಿರೀಷಾ ಸೆಂಥಿಲ್, ಹೈದರಾಬಾದ್‌ನ ಐತಿಹಾಸಿಕ ಪರಂಪರೆಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಪಾರಂಪರಿಕ ತಾಣಗಳ ಸಂರಕ್ಷಣಾ ಕಾರ್ಯಕರ್ತೆ ಪಿ. ಅನುರಾಧಾ ರೆಡ್ಡಿ ಹಾಗೂ ಶಿಕ್ಷಣ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಣತಜ್ಞೆ ಬೊಂಪೆಲ್ಲಿ ಭವಾನಿ ಸೇರಿದ್ದಾರೆ.

ಇವರೊಂದಿಗೆ ನಟಿ ಹಾಗೂ ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ, ವಾಸ್ತುಶಿಲ್ಪಿ ಮತ್ತು ಜಲಸಂರಕ್ಷಣಾ ಕಾರ್ಯಕರ್ತೆ ಕಲ್ಪನಾ ರಮೇಶ್, ಉದ್ಯಮಿ ವೈಶಾಲಿ ನಿಯೋಟಿಯಾ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ವಿದ್ಯಾ ರಾವ್ ಹಾಗೂ ಫ್ಯಾಷನ್ ವಿನ್ಯಾಸಕಿ ಯಕ್ಷಿ ದೀಪ್ತಿ ರೆಡ್ಡಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾಜಕ್ಕೆ ಮಹಿಳೆಯರು ನೀಡುತ್ತಿರುವ ಇಂತಹ ಮಹತ್ವದ ಕೊಡುಗೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ಹೇಳಿದರು.

ಮಾಧ್ಯಮಗಳ ಕೆಲಸ ಕೇವಲ ಸುದ್ದಿಗಳನ್ನು ನೀಡುವುದಷ್ಟೇ ಅಲ್ಲ. ಸಮಾಜದ ಸೇವೆ ಮಾಡುವುದು, ಜನರ ಹಿತಕ್ಕಾಗಿ ಶ್ರಮಿಸುವುದು ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದ ಉತ್ತಮ ಕಾರ್ಯಗಳನ್ನು ಕೈಗೊಳ್ಳುವುದೂ ಮಾಧ್ಯಮಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಆರ್ಥಿಕ ಒಳಗೊಳ್ಳುವಿಕೆ ಹಾಗೂ ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವ ಅಗತ್ಯವನ್ನು ಪ್ರಸ್ತಾಪಿಸಿದ ರಾಜ್ಯಪಾಲರು, ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಕರೆ ನೀಡಿದರು.

ಮಹಿಳೆಯರ ಪ್ರಗತಿಯು ಕೇವಲ ಅವರ ವೈಯಕ್ತಿಕ ಅಭಿವೃದ್ಧಿಗೆ ಸೀಮಿತವಾಗಿರುವುದಿಲ್ಲ. ಅದು ಕುಟುಂಬ, ಸಮುದಾಯ ಹಾಗೂ ಇಡೀ ದೇಶದ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com