'JD(U) ಕಥೆ ಮುಗಿದಿದೆ, ಮುಂದಿನ ಚುನಾವಣೆಯಲ್ಲಿ ಪಕ್ಷ 10-12 ಸ್ಥಾನಗಳಿಗೆ ಸೀಮಿತವಾಗಲಿದೆ': ಉಚ್ಚಾಟಿತ ಶಾಸಕ ಅನಂತ್ ಸಿಂಗ್

243 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಡಿ(ಯು) ಸದ್ಯ 84 ಶಾಸಕರನ್ನು ಹೊಂದಿದೆ. 88 ಸದಸ್ಯರನ್ನು ಹೊಂದಿರುವ ತನ್ನ ಮಿತ್ರಪಕ್ಷ ಬಿಜೆಪಿ ನಂತರ, ಇದು ರಾಜ್ಯದ ಎರಡನೇ ಅತಿದೊಡ್ಡ ಪಕ್ಷವಾಗಿದೆ.
Anant Singh
ಅನಂತ್ ಸಿಂಗ್
Updated on: 

ಜನತಾ ದಳ (ಯುನೈಟೆಡ್) ಪಕ್ಷದಿಂದ ಉಚ್ಚಾಟಿತರಾದ ಶಾಸಕ ಹಾಗೂ ಮೊಕಾಮಾದ ಪ್ರಭಾವಿ ನಾಯಕ ಅನಂತ್ ಸಿಂಗ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಕೇವಲ '10-12 ಸ್ಥಾನಗಳಿಗೆ' ಸೀಮಿತವಾಗಲಿದೆ ಎಂದು ಭಾನುವಾರ ಹೇಳಿದ್ದಾರೆ. ಅಲ್ಲದೆ, ತಾವು ಸ್ವಂತ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಸಾಧ್ಯತೆಯನ್ನೂ ಅವರು ಸೂಚಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಶನಿವಾರ ಜೆಡಿ(ಯು)ನಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆಗೊಂಡಿರುವ ಸಿಂಗ್, ತಮ್ಮ ವಿರುದ್ಧ ಕೈಗೊಂಡ ಶಿಸ್ತು ಕ್ರಮದ ಬಗ್ಗೆ ತಮಗೆ 'ಯಾವುದೇ ವಿಷಾದವಿಲ್ಲ'. ಅಲ್ಲದೆ, ಪಕ್ಷದ ಸದ್ಯದ ನಾಯಕತ್ವದ ಅಧಿಕಾರವನ್ನೇ ಪ್ರಶ್ನಿಸಿರುವ ಅವರು, ಈ ಪಕ್ಷವು ಮೂಲತಃ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸೇರಿದ್ದಾಗಿದ್ದರೂ, ಅವರನ್ನು ಪಕ್ಷದಿಂದ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರ ಅಡಿಯಲ್ಲಿ ಅದು ತನ್ನ ರಾಜಕೀಯ ವರ್ಚಸ್ಸನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಈ ಪಕ್ಷವು ನಿತೀಶ್ ಜಿ ಅವರದ್ದಾಗಿತ್ತು. ಈಗ ಅವರು (ಸಕ್ರಿಯ ಪಾತ್ರದಲ್ಲಿ) ಇಲ್ಲದಿರುವಾಗ, ಪಕ್ಷದಲ್ಲಿ ಉಳಿದಿದ್ದೇನು? ನನ್ನನ್ನು ಉಚ್ಚಾಟಿಸಿದ ನಾಯಕತ್ವದ ವಲಯದಲ್ಲಿರುವವರ ಪೈಕಿ, ನಿಜವಾಗಿಯೂ ಕೊಡುಗೆ ನೀಡಿದವರು ಯಾರು?. ಈಗ, ಅವರ ಸ್ಥಾನಗಳ ಸಂಖ್ಯೆ 10-12ಕ್ಕೆ ಕುಸಿಯಲಿದೆ... ನಾನೇಕೆ ಬೇರೆಡೆಗೆ ಹೋಗಲಿ? ನಾನೇ ಸ್ವಂತ ಪಕ್ಷವನ್ನು ಕಟ್ಟಿಕೊಳ್ಳುತ್ತೇನೆ. ಜೆಡಿ(ಯು) ಕಥೆ ಮುಗಿದುಹೋಗಿದೆ. ಚುನಾವಣೆ ನಡೆದಾಗ, ಎಲ್ಲವೂ ಸ್ಪಷ್ಟವಾಗಲಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

243 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಡಿ(ಯು) ಸದ್ಯ 84 ಶಾಸಕರನ್ನು ಹೊಂದಿದೆ. 88 ಸದಸ್ಯರನ್ನು ಹೊಂದಿರುವ ತನ್ನ ಮಿತ್ರಪಕ್ಷ ಬಿಜೆಪಿ ನಂತರ, ಇದು ರಾಜ್ಯದ ಎರಡನೇ ಅತಿದೊಡ್ಡ ಪಕ್ಷವಾಗಿದೆ. ಲೋಕಸಭೆಯಲ್ಲಿ ಜೆಡಿ(ಯು) 12 ಸದಸ್ಯರನ್ನು ಹೊಂದಿದೆ.

Anant Singh
ನಿತೀಶ್ ಕುಮಾರ್ ರಾಜೀನಾಮೆ ನಂತರ ಪಕ್ಷದ ಹೆಸರು ಬದಲಾವಣೆಗೆ ಮುಂದಾದ JDU; ಇಲ್ಲಿದೆ ಕಾರಣ...

ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ 'ಜನ್ ಸುರಾಜ್ ಪಾರ್ಟಿ'ಯ ಅಭ್ಯರ್ಥಿ ಅನುಜ್ ಸಿಂಗ್ ಪರವಾಗಿ ಪ್ರಚಾರ ನಡೆಸುವ ಮೂಲಕ ಸಿಂಗ್, ಜೆಡಿ(ಯು) ವಿರುದ್ಧ ಬಂಡಾಯವೆದ್ದರು. ಅನುಜ್ ಸಿಂಗ್ ಅವರನ್ನು ಬೆಂಬಲಿಸುವ ಮತ್ತು ಅವರಿಗಾಗಿ ಪ್ರಚಾರ ಮಾಡುವ ಮೂಲಕ, ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿ(ಯು) ಎಂಎಲ್‌ಸಿ ನೀರಜ್ ಕುಮಾರ್ ಅವರನ್ನು 'ಸೋಲಿಸುವುದಾಗಿ' ಅವರು ಶಪಥ ಮಾಡಿದರು. ಅಲ್ಲದೆ, ಸಂವಿಧಾನದ ಹತ್ತನೇ ಅನುಸೂಚಿಯ ಅಡಿಯಲ್ಲಿ ('ಪಕ್ಷಾಂತರ ನಿಷೇಧ ಕಾಯಿದೆ'), ಅನಂತ್ ಸಿಂಗ್ ಅವರ ಶಾಸಕ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಜೆಡಿ(ಯು), ಬಿಹಾರ ವಿಧಾನಸಭೆಯ ಸ್ಪೀಕರ್ ಅವರಿಗೆ ಶಿಫಾರಸು ಮಾಡಿತು.

ಸಿಂಗ್ ಅವರಲ್ಲದೆ, ಅವರ ಪತ್ನಿ ಹಾಗೂ ಮಾಜಿ ಶಾಸಕಿ ನೀಲಂ ದೇವಿ ಅವರನ್ನು ಕೂಡ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ. ಶನಿವಾರ ಪಾಟ್ನಾದಲ್ಲಿ ಕೇಂದ್ರ ಸಚಿವ ಮತ್ತು ಜೆಡಿ(ಯು) ಹಿರಿಯ ನಾಯಕ ರಾಜೀವ್ ರಂಜನ್ ಅಲಿಯಾಸ್ ಲಲ್ಲನ್ ಸಿಂಗ್ ಅವರು ನಿತೀಶ್ ಕುಮಾರ್ ಅವರನ್ನು ಭೇಟಿಯಾದ ನಂತರ ಈ ಉಚ್ಚಾಟನೆಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.

ಜೆಡಿ(ಯು)ನ ಮಾಜಿ ನಾಯಕರೊಬ್ಬರು, ನಿತೀಶ್ ಕುಮಾರ್ ಅವರೊಂದಿಗೆ ತಮ್ಮ ವೈಯಕ್ತಿಕ ಸಂಬಂಧವು ಸೌಹಾರ್ದಯುತವಾಗಿದ್ದು, ತಮ್ಮಿಬ್ಬರ ನಡುವೆ ಯಾವುದೇ 'ಅಂತರವಿಲ್ಲ'. ಮಾಜಿ ಮುಖ್ಯಮಂತ್ರಿ ಬಗ್ಗೆ ತಮಗೆ ಇನ್ನೂ ಅಪಾರ ಗೌರವವಿದೆ. ಪಕ್ಷದ ಮೇಲೆ ನಿತೀಶ್ ಕುಮಾರ್ ಅವರ ನಿಯಂತ್ರಣ ಮುಂದುವರಿದಿದ್ದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾರೂ ಧೈರ್ಯ ಮಾಡುತ್ತಿರಲಿಲ್ಲ. ಪಕ್ಷವನ್ನು ಕಟ್ಟುವಲ್ಲಿ ಯಾವುದೇ ಪಾತ್ರ ವಹಿಸದ ವ್ಯಕ್ತಿಗಳು ಈಗಿನ ನಾಯಕತ್ವದಲ್ಲಿದ್ದಾರೆ ಎಂದು ಅವರು ಆರೋಪಿಸಿದರು.

ಮೊಕಾಮಾ-ಬಾರ್ಹ್ ಪ್ರದೇಶದಲ್ಲಿ ತಮ್ಮ ಸ್ಥಳೀಯ ಪ್ರಭಾವದಿಂದಾಗಿ 'ಛೋಟೆ ಸರ್ಕಾರ್' ಎಂದೇ ಖ್ಯಾತರಾಗಿರುವ ಸಿಂಗ್, ಜೆಡಿ(ಯು) ಜೊತೆ ಏರಿಳಿತಗಳಿಂದ ಕೂಡಿದ ಸಂಬಂಧವನ್ನು ಹೊಂದಿದ್ದಾರೆ. ಅವರು 2005ರಲ್ಲಿ ಜೆಡಿ(ಯು) ಟಿಕೆಟ್‌ನಿಂದ ಮೊದಲ ಬಾರಿಗೆ ಈ ಕ್ಷೇತ್ರವನ್ನು ಗೆದ್ದರು ಮತ್ತು 2010ರಲ್ಲೂ ಅದನ್ನು ಉಳಿಸಿಕೊಂಡರು. ಆದರೆ, ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಜೊತೆ ನಿತೀಶ್ ಕುಮಾರ್ ಮೈತ್ರಿ ಮಾಡಿಕೊಂಡಿದ್ದನ್ನು ವಿರೋಧಿಸಿ, 2015ರ ಸೆಪ್ಟೆಂಬರ್‌ನಲ್ಲಿ ಅವರು ಪಕ್ಷದಿಂದ ಹೊರಬಂದರು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು, ನಂತರ 2020ರ ಚುನಾವಣೆಗೆ ಮುನ್ನ ಆರ್‌ಜೆಡಿ ಸೇರ್ಪಡೆಗೊಂಡು, ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಆಯುಧಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ 2024ರ ಆಗಸ್ಟ್‌ನಲ್ಲಿ ಪಾಟ್ನಾ ಹೈಕೋರ್ಟ್‌ನಿಂದ ದೋಷಮುಕ್ತರಾದ ನಂತರ, 2025ರ ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಮುನ್ನ ಅವರು ಜೆಡಿ(ಯು)ಗೆ ಮರುಸೇರ್ಪಡೆಯಾದರು.

ಅವರ ಪತ್ನಿ ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲಿ ಮುಂಗೇರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ, ಜೆಡಿ(ಯು)ನ ಲಾಲನ್ ಸಿಂಗ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ನಂತರ, ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅನಂತ್ ಸಿಂಗ್ ಅನರ್ಹಗೊಂಡ ಬಳಿಕ, ಅವರ ಪತ್ನಿ 2022ರ ಮೊಕಾಮಾ ಉಪಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com