

ವಿಶಾಖಪಟ್ಟಣಂ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ 'ಅರ್ನಬ್' ಚಂಡಮಾರುತ ಕರಾವಳಿಯತ್ತ ವೇಗವಾಗಿ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬುಧವಾರ (ಅಕ್ಟೋಬರ್ 28) ನಸುಕಿನ ವೇಳೆಗೆ ವಿಶಾಖಪಟ್ಟಣಂ ಸಮೀಪ ಚಂಡಮಾರುತ ಕರಾವಳಿಯನ್ನು ದಾಟುವ ನಿರೀಕ್ಷೆಯಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಇಲಾಖೆ ಕನಿಷ್ಠ 50 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ವಿಜಯವಾಡ ಮತ್ತು ವಿಶಾಖಪಟ್ಟಣಂ ವಿಮಾನ ನಿಲ್ದಾಣಗಳಲ್ಲಿ ಮಂಗಳವಾರ ಕನಿಷ್ಠ 21 ವಿಮಾನಗಳ ಹಾರಾಟ ರದ್ದಾಗಿದ್ದು, ಚೆನ್ನೈ, ಬೆಂಗಳೂರು, ವಿಶಾಖಪಟ್ಟಣಂ ಮತ್ತು ಕಡಪ ಮಾರ್ಗಗಳ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಬುಧವಾರ ವಿಜಯವಾಡ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 15 ವಿಮಾನಗಳ ಹಾರಾಟವನ್ನೂ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯತ್ತ ವೇಗವಾಗಿ ಸಾಗುತ್ತಿದೆ. ಅಕ್ಟೋಬರ್ 28ರ ನಸುಕಿನ 2ರಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ಮಂಗಳವಾರದ ವರದಿಯ ಪ್ರಕಾರ, ಚಂಡಮಾರುತವು ವಿಶಾಖಪಟ್ಟಣಂನಿಂದ ದಕ್ಷಿಣ-ನೈಋತ್ಯಕ್ಕೆ ಸುಮಾರು 170 ಕಿ.ಮೀ ಹಾಗೂ ಆಂಧ್ರಪ್ರದೇಶದ ಮಚಲಿಪಟ್ಟಣಂನಿಂದ ಪೂರ್ವ-ಈಶಾನ್ಯಕ್ಕೆ ಸುಮಾರು 170 ಕಿ.ಮೀ ದೂರದಲ್ಲಿತ್ತು.
ಚಂಡಮಾರುತ ಕರಾವಳಿಯನ್ನು ದಾಟುವ ವೇಳೆ ಗಂಟೆಗೆ 125ರಿಂದ 135 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕೆಲವೊಮ್ಮೆ ಗಾಳಿಯ ವೇಗ ಗಂಟೆಗೆ 150 ಕಿ.ಮೀ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಡಿಶಾ ಕರಾವಳಿಯಲ್ಲಿ ಗಂಟೆಗೆ 60ರಿಂದ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಇಂತಹ ವೇಗದ ಗಾಳಿಯಿಂದ ಆಸ್ತಿಪಾಸ್ತಿಗೆ ಭಾರಿ ಹಾನಿಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃಂಜಯ್ ಮೊಹಾಪಾತ್ರ ಎಚ್ಚರಿಸಿದ್ದಾರೆ.
ಆಂಧ್ರದಲ್ಲಿ 2,131 ಆಶ್ರಯ ಕೇಂದ್ರಗಳ ವ್ಯವಸ್ಥೆ
ಚಂಡಮಾರುತ ಎದುರಿಸಲು ಆಂಧ್ರಪ್ರದೇಶ ಸರ್ಕಾರ ರಾಜ್ಯದ 20 ಜಿಲ್ಲೆಗಳಲ್ಲಿ 2,131 ಚಂಡಮಾರುತ ಆಶ್ರಯ ಕೇಂದ್ರಗಳನ್ನು ಸಿದ್ಧಪಡಿಸಿದೆ. ಚಂಡಮಾರುತದ ಪರಿಣಾಮ ಉಂಟಾಗಬಹುದಾದ ಪ್ರದೇಶಗಳಲ್ಲಿ 1,087 ವೈದ್ಯಕೀಯ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಜೊತೆಗೆ 8,281 ತುರ್ತು ಹಾಸಿಗೆಗಳು ಮತ್ತು 1,274 ಆಂಬುಲೆನ್ಸ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಾಯದ ಪ್ರದೇಶಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದರ ಜೊತೆಗೆ 1,351 ಗರ್ಭಿಣಿಯರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ರಾಜ್ಯದ 14,686 ಪಡಿತರ ಅಂಗಡಿಗಳಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಲಾಗಿದೆ.
ಚಂಡಮಾರುತದ ಮುನ್ನೆಚ್ಚರಿಕೆ ಸಂದೇಶಗಳನ್ನು ರಾಜ್ಯದ 2.70 ಕೋಟಿ ಜನರ ಮೊಬೈಲ್ ಫೋನ್ಗಳಿಗೆ ಕಳುಹಿಸಲಾಗುತ್ತಿದೆ. ಶ್ರೀಕಾಕುಳಂ ಜಿಲ್ಲೆಯಲ್ಲಿ ಭಾರಿ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ವಿಶಾಖಪಟ್ಟಣಂ ಮತ್ತು ಕಾಕಿನಾಡ ಪ್ರದೇಶಗಳಲ್ಲಿ ಈಗಾಗಲೇ ಗಾಳಿಯ ವೇಗ ಹೆಚ್ಚಾಗಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಪರಿಹಾರ ಶಿಬಿರಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ ಖಚಿತಪಡಿಸುವಂತೆ ಮತ್ತು ಚಂಡಮಾರುತದಿಂದ ಉಂಟಾಗುವ ಹಾನಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಒಡಿಶಾದಲ್ಲಿ 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
ಒಡಿಶಾದಲ್ಲಿಯೂ ಭಾರಿ ಮಳೆ ಆರಂಭವಾಗಿದ್ದು, ರಾಜ್ಯದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಚಂಡಮಾರುತ ಆಶ್ರಯ ಕೇಂದ್ರಗಳಿಗೆ 48 ಸಾವಿರ ಜನರನ್ನು ಸ್ಥಳಾಂತರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮುದ್ರ ತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ.
ರಾಜ್ಯದ ವಿಶೇಷ ಪರಿಹಾರ ಆಯುಕ್ತ ರಾಜೇಶ್ ಪಿ. ಪಾಟೀಲ್ ಅವರ ಪ್ರಕಾರ, ಅಪಾಯದ ಪ್ರದೇಶಗಳ ಜನರಿಗೆ ಆಶ್ರಯ ಕಲ್ಪಿಸಲು 135 ಶಾಶ್ವತ ಚಂಡಮಾರುತ ಕೇಂದ್ರಗಳು ಮತ್ತು ಸುಮಾರು 1,600 ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಯ ಒಂಬತ್ತು ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್)ಯ 60 ತಂಡಗಳು ಹಾಗೂ ಅಗ್ನಿಶಾಮಕ ಸೇವೆಯ 225 ತಂಡಗಳು ಸೇರಿದಂತೆ ಒಟ್ಟು 294 ತಂಡಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತದಿಂದ ಯಾವುದೇ ಜೀವಹಾನಿಯಾಗದಂತೆ 'ಶೂನ್ಯ ಸಾವು' ಗುರಿಯೊಂದಿಗೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಛತ್ತೀಸ್ಗಢ ಮತ್ತು ಜಾರ್ಖಂಡ್ನ ನದಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾದರೆ ಪಶ್ಚಿಮ ಮತ್ತು ಉತ್ತರ ಒಡಿಶಾದಲ್ಲಿ ದಿಢೀರ್ ಪ್ರವಾಹ ಹಾಗೂ ಜಲಾವೃತ ಉಂಟಾಗುವ ಸಾಧ್ಯತೆಯಿದೆ ಎಂದು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಎಚ್ಚರಿಸಿದ್ದಾರೆ. ಪಾರಾದೀಪ್, ಧಮ್ರಾ ಮತ್ತು ಗೋಪಾಲಪುರ ಸೇರಿದಂತೆ ಪ್ರಮುಖ ಬಂದರುಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.