

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಕುರಿತಾದ ವಿವಾದಾತ್ಮಕ "ಹೌ ಮೋದಿ ಅಂಡ್ ಅದಾನಿ ಸ್ಟೋಲ್ ಇಂಡಿಯಾ: ದಿ ಫ್ರೆಂಡ್‌ಶಿಪ್ ಫೈಲ್ಸ್" ಸಾಕ್ಷ್ಯಚಿತ್ರದ ಪ್ರಸಾರ, ಹಂಚಿಕೆ ಮತ್ತು ಅಪ್‌ಲೋಡ್ ಮಾಡುವುದಕ್ಕೆ ಕಲ್ಕತ್ತಾ ಹೈಕೋರ್ಟ್ ಜನವರಿ 31, 2027 ರವರೆಗೆ ಮಧ್ಯಂತರ ತಡೆ ನೀಡಿದೆ. ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಸಲ್ಲಿಸಿದ್ದ ₹50 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ಕೋರ್ಟ್‌ನ ರಜೆ ಕಾಲದ ಪೀಠದ ನ್ಯಾಯಮೂರ್ತಿ ಆರ್ಯಕ್ ದತ್ ಅವರು ಈ ಆದೇಶ ಹೊರಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಯಾವುದು ಆ ಸಾಕ್ಷ್ಯಚಿತ್ರ?
ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಮತ್ತು ಹಾಟ್‌ಮೇಲ್ ಸಹ-ಸ್ಥಾಪಕ ಸಬೀರ್ ಭಾಟಿಯಾ ಅವರು ಶ್ಯಾಡೋ ಸಿಟಿಜನ್ಸ್ ಎಂಬ ಯೂಟ್ಯೂಬ್ ಚಾನೆಲ್ ಸಹಯೋಗದಲ್ಲಿ ನಿರ್ಮಿಸಿರುವ ಹೌ ಮೋದಿ ಆಂಡ್ ಅದಾನಿ ಸ್ಟೋಲ್ ಇಂಡಿಯಾ: ದಿ ಫ್ರೆಂಡ್‌ಶಿಪ್ ಫೈಲ್ಸ್ ಹೆಸರಿನ 36 ನಿಮಿಷಗಳ ವಿಡಿಯೋ ಇದಾಗಿದೆ. ಆದರೆ, ಈ ವಿಡಿಯೋದಲ್ಲಿ ಕಂಪನಿಯ ವಿರುದ್ಧ ಯಾವುದೇ ಸೂಕ್ತ ಆಧಾರಗಳಿಲ್ಲದೆ ಸುಳ್ಳು ಮತ್ತು ಅವಹೇಳನಕಾರಿ ಆರೋಪಗಳನ್ನು ಮಾಡಲಾಗಿದೆ. ಭಯೋತ್ಪಾದನಾ ನಿಧಿಗೆ ಲಿಂಕ್ ಇರುವ ಮಾದಕ ದ್ರವ್ಯ ಸಾಗಣೆ ಮತ್ತು ರೈತರೊಬ್ಬರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿರುವಂತಹ ಗಂಭೀರ ಆರೋಪಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದ್ದು, ಇದರಿಂದ ಸಂಸ್ಥೆಯ ಘನತೆಗೆ ತೀವ್ರ ಧಕ್ಕೆಯಾಗಿದೆ ಎಂದು ಅದಾನಿ ಪರ ವಕೀಲರು ವಾದಿಸಿದ್ದರು. ಅಲ್ಲದೆ, ಸಂವಿಧಾನದ 21ನೇ ವಿಧಿಯಡಿ ಘನತೆಯಿಂದ ಬದುಕುವ ಹಕ್ಕು ಕೂಡ ಜೀವಿಸುವ ಹಕ್ಕಿನ ಭಾಗವಾಗಿದೆ ಎಂದು ಈ ಮೂಲಕ ಪ್ರತಿಪಾದಿಸಿದ್ದರು.
ಮುಂದುವರೆದು, ಈ ಸಾಕ್ಷ್ಯಚಿತ್ರವು ಸಾಮಾನ್ಯ ಸುದ್ದಿ ವರದಿಯಂತಿಲ್ಲದೆ, ಕಲ್ಪಿತ ಕಥನಗಳ ನಾಟಕೀಯ ರೂಪದಂತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಯೂಟ್ಯೂಬ್, ಎಕ್ಸ್ (X) ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಈ ವಿಡಿಯೋ, ಅದರ ಕ್ಲಿಪ್‌ಗಳು ಅಥವಾ ಅದಕ್ಕೆ ಹೋಲುವ ಯಾವುದೇ ಮರು-ಅಪ್‌ಲೋಡ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಲು ಸೂಚಿಸಿದೆ. ಜೊತೆಗೆ, ಈ ವಿಡಿಯೋವನ್ನು ಮರು-ಅಪ್‌ಲೋಡ್ ಮಾಡಿದ ಖಾತೆಗಳ ಐಪಿ ಲಾಗ್‌ಗಳು, ರಿಜಿಸ್ಟ್ರೇಷನ್ ವಿವರಗಳು ಮತ್ತು ಸಬ್‌ಸ್ಕ್ರೈಬರ್ ಮಾಹಿತಿಯನ್ನು ಸುರಕ್ಷಿತವಾಗಿ ಕಾಯ್ದಿರಿಸುವಂತೆ ಜಾಲತಾಣಗಳಿಗೆ ಕೋರ್ಟ್ ನಿರ್ದೇಶಿಸಿದೆ.
ಈ ಬೆಳವಣಿಗೆ ನಡುವೆಯೇ, ಕಲ್ಕತ್ತಾ ಹೈಕೋರ್ಟ್ ತನ್ನ ಆದೇಶದಲ್ಲಿ ಒಂದು ಪ್ರಮುಖ ಸ್ಪಷ್ಟನೆ ನೀಡಿದ್ದು, ಈ ನಿಷೇಧವು ಕೇವಲ ವಿವಾದಿತ ವಿಡಿಯೋ ಮತ್ತು ಅದರಲ್ಲಿನ ಅವಹೇಳನಕಾರಿ ಅಂಶಗಳಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರಿ ನೀತಿಗಳು ಅಥವಾ ಅದಾನಿ ಸಮೂಹದ ವಾಣಿಜ್ಯ ಚಟುವಟಿಕೆಗಳ ಕುರಿತು ನಡೆಸುವ ಯಾವುದೇ ರಚನಾತ್ಮಕ ಟೀಕೆ ಅಥವಾ ನ್ಯಾಯಸಮ್ಮತ ವರದಿಗಾರಿಕೆಗೆ ಈ ಆದೇಶ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.