ನವದೆಹಲಿ: ಮತದಾರರ ಪಟ್ಟಿ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಮತ್ತು ಭಾರತೀಯ ಚುನಾವಣಾ ಆಯೋಗದ (ECI) ನಡುವಿನ ಸಂಘರ್ಷವು ನಿರ್ಣಾಯಕ ಕಾನೂನು ಹಂತವನ್ನು ತಲುಪಿರುವ ಹೊತ್ತಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ 'ಎಕ್ಸ್' (X) ಭಗವಾನ್ ಮಹಾದೇವನ ಪೋಟೋವೊಂದನನು ಹಂಚಿಕೊಂಡು, ಅದಕ್ಕೆ "ಸತ್ಯಂ ಶಿವಂ ಸುಂದರಂ" ಎಂದು ಶೀರ್ಷಿಕೆ ನೀಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಮತ್ತು 'ಎಸ್‌ಐಆರ್' (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ಕೈಗೊಂಡ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತನ್ನ ಪ್ರತಿ-ಅಫಿಡವಿಟ್‌ನಲ್ಲಿ, ಚುನಾವಣಾ ಆಯೋಗ ಪರಿಷ್ಕರಣಾ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದೆ. ಜೂನ್ 2025, ಅಕ್ಟೋಬರ್ 2025 ಮತ್ತು ಮೇ 2026 ರಲ್ಲಿ ಹೊರಡಿಸಲಾದ ಮೂರೂ ಆದೇಶಗಳನ್ನು ಆಯೋಗದ ಮೂವರು ಸದಸ್ಯರು, ಅಂದರೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು ಅದು ತಿಳಿಸಿದೆ.
ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ತಮ್ಮ ಗಮನಕ್ಕೆ ಬಾರದೆ ಅಥವಾ ತಮ್ಮ ಶಿಫಾರಸು ಇಲ್ಲದೆ ಹೊರಡಿಸಲಾದ 'ಎಸ್‌ಐಆರ್' (SIR) ಸಂಬಂಧಿತ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಸೆಪ್ಟೆಂಬರ್ 25 ರಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ಈ ಪ್ರತಿಕ್ರಿಯೆಯನ್ನು ನೀಡಿದೆ.
ಈ ವರದಿಯ ನಂತರ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂದು ಆಗ್ರಹಿಸಿವೆ. ಆದರೆ, ವಿವಾದಕ್ಕೆ ಕಾರಣವಾಗಿರುವ ಆ ಮೂರೂ ಆದೇಶಗಳಿಗೆ ಸರ್ವಾನುಮತದ ಅನುಮೋದನೆ ಸಿಕ್ಕಿತ್ತು ಎಂದು ಚುನಾವಣಾ ಆಯೋಗವು ತನ್ನ ಅಫಿಡವಿಟ್‌ನಲ್ಲಿ ಪ್ರತಿಪಾದಿಸಿದೆ.
ಚುನಾವಣಾ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜಕೀಯ ಮತ್ತು ಕಾನೂನು ವಿವಾದಗಳು ಮುಂದುವರಿದಿರುವ ನಡುವೆಯೇ, ಚುನಾವಣಾ ಆಯೋಗದ ವಿರುದ್ಧ ಮಾಡಲಾದ ಆರೋಪಗಳು "ದುರದೃಷ್ಟಕರ" ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಆಯೋಗದ ನಿಲುವನ್ನು ಸಮರ್ಥಿಸಿಕೊಳ್ಳಲಾಗಿದೆ.