ಆಂಧ್ರ ಪ್ರದೇಶದ ನರ್ಸಾಪುರ ಬಳಿ ಕರಾವಳಿ ದಾಟಿದ 'ಅರ್ನಬ್' ಚಂಡಮಾರುತ; ತೀವ್ರತೆ ಇಳಿಕೆ

ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ಇಂದು ನಸುಕಿನ ಜಾವ 2 ಗಂಟೆಯಿಂದ ಬೆಳಗ್ಗೆ 8 ಗಂಟೆಯ ನಡುವೆ ಯಾನಂನ ನೈಋತ್ಯ ಭಾಗದಲ್ಲಿ ಅರ್ನಬ್ ಚಂಡಮಾರುತ ಕರಾವಳಿಯನ್ನು ದಾಟಿದೆ.
Fishermen secure their boats at a fishing harbour amidst heavy rain under overcast skies, ahead of severe cyclonic storm 'Arnab', in Visakhapatnam
ವಿಶಾಖಪಟ್ಟಣಂನಲ್ಲಿ ತೀವ್ರ ಸ್ವರೂಪದ 'ಅರ್ನಬ್' ಚಂಡಮಾರುತ ಅಪ್ಪಳಿಸುವ ಮುನ್ನ, ಮೋಡ ಕವಿದ ವಾತಾವರಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ದೋಣಿಗಳನ್ನು ಸುರಕ್ಷಿತವಾಗಿ ಕಟ್ಟಿಹಾಕುತ್ತಿರುವ ಮೀನುಗಾರರು.
Updated on: 

ವಿಶಾಖಪಟ್ಟಣಂ: ಅತ್ಯಂತ ತೀವ್ರ ಸ್ವರೂಪದ 'ಅರ್ನಬ್' ಚಂಡಮಾರುತ ಇಂದು ಬುಧವಾರ ಬೆಳಗ್ಗೆ ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯನ್ನು ದಾಟಿದ್ದು, ಬಳಿಕ ಅದರ ತೀವ್ರತೆ ಕಡಿಮೆಯಾಗಿ ತೀವ್ರ ಚಂಡಮಾರುತವಾಗಿ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ಇಂದು ನಸುಕಿನ ಜಾವ 2 ಗಂಟೆಯಿಂದ ಬೆಳಗ್ಗೆ 8 ಗಂಟೆಯ ನಡುವೆ ಯಾನಂನ ನೈಋತ್ಯ ಭಾಗದಲ್ಲಿ ಅರ್ನಬ್ ಚಂಡಮಾರುತ ಕರಾವಳಿಯನ್ನು ದಾಟಿದೆ.

ನರ್ಸಾಪುರದಿಂದ ಸುಮಾರು 20 ಕಿ.ಮೀ. ಪೂರ್ವ-ಈಶಾನ್ಯಕ್ಕೆ, ಯಾನಂನಿಂದ 40 ಕಿ.ಮೀ. ನೈಋತ್ಯಕ್ಕೆ ಹಾಗೂ ಕಾಕಿನಾಡದಿಂದ 60 ಕಿ.ಮೀ. ನೈಋತ್ಯಕ್ಕೆ ಅತ್ಯಂತ ತೀವ್ರ ಸ್ವರೂಪದ ಚಂಡಮಾರುತವಾಗಿ ಕರಾವಳಿಯನ್ನು ದಾಟಿದೆ.

ಚಂಡಮಾರುತವು ಕರಾವಳಿಗೆ ಅಪ್ಪಳಿಸಿದ ಸಂದರ್ಭದಲ್ಲಿ ಗಂಟೆಗೆ 125ರಿಂದ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಬಿರುಗಾಳಿಯ ವೇಗ ಗಂಟೆಗೆ 150 ಕಿ.ಮೀ.ವರೆಗೆ ತಲುಪಿತ್ತು.

ಇತ್ತೀಚಿನ ಹವಾಮಾನ ಅವಲೋಕನಗಳ ಪ್ರಕಾರ, ಚಂಡಮಾರುತವು ಕರಾವಳಿಯನ್ನು ದಾಟುವ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಅದರ ಕೇಂದ್ರಭಾಗ ಸಂಪೂರ್ಣವಾಗಿ ಭೂ ಪ್ರದೇಶವನ್ನು ಪ್ರವೇಶಿಸಿದೆ.

ಸುಮಾರು ಆರು ಗಂಟೆಗಳ ಕಾಲ ಚಂಡಮಾರುತವು ಕರಾವಳಿಯನ್ನು ದಾಟುವ ಪ್ರಕ್ರಿಯೆ ಮುಂದುವರಿದಿದ್ದರಿಂದ ಪಶ್ಚಿಮ ಗೋದಾವರಿ, ಕೋನಸೀಮಾ, ಕಾಕಿನಾಡ ಮತ್ತು ಯಾನಂ ಕರಾವಳಿ ಪ್ರದೇಶಗಳಲ್ಲಿ ಬುಧವಾರ ಮುಂಜಾನೆಯವರೆಗೂ ಪ್ರಬಲ ಬಿರುಗಾಳಿ ಬೀಸಿದೆ.

ನಿನ್ನೆ ಮಂಗಳವಾರ ರಾತ್ರಿ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕರಾವಳಿಯ ಸಮೀಪ ಬಹುತೇಕ ಸ್ಥಿರವಾಗಿದ್ದ ಚಂಡಮಾರುತವು ಗಂಟೆಗೆ 115ರಿಂದ 125 ಕಿ.ಮೀ. ವೇಗದ ಗಾಳಿಯನ್ನು ಹೊಂದಿತ್ತು. ಈ ವೇಳೆ ಬಿರುಗಾಳಿಯ ವೇಗ ಗಂಟೆಗೆ 140 ಕಿ.ಮೀ.ವರೆಗೆ ತಲುಪಿತ್ತು. ಕರಾವಳಿಗೆ ಅಪ್ಪಳಿಸುವ ಮುನ್ನ ಚಂಡಮಾರುತದ ತೀವ್ರತೆ ಸ್ವಲ್ಪ ಹೆಚ್ಚಾಗಿತ್ತು.

ವಿಶಾಖಪಟ್ಟಣಂನಲ್ಲಿ 216.9 ಮಿ.ಮೀ. ಮಳೆ

ನಿನ್ನೆಯಿಂದಲೇ ವಿಶಾಖಪಟ್ಟಣಂ ಹಾಗೂ ಸುತ್ತಮುತ್ತಲಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರಬಲ ಗಾಳಿಯೂ ಬೀಸುತ್ತಿದೆ.

ಹವಾಮಾನ ಇಲಾಖೆ ಇಂದು ಬೆಳಗ್ಗೆ 5.30ಕ್ಕೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶಾಖಪಟ್ಟಣಂ-ವಾಲ್ಟೇರ್ ಪ್ರದೇಶದಲ್ಲಿ ಒಟ್ಟು 216.9 ಮಿ.ಮೀ. ಮಳೆ ದಾಖಲಾಗಿದೆ.

ಕಳಿಂಗಪಟ್ಟಣಂನಲ್ಲಿ 147.5 ಮಿ.ಮೀ., ತುನಿಯಲ್ಲಿ 123.3 ಮಿ.ಮೀ., ಕಾಕಿನಾಡದಲ್ಲಿ 118.4 ಮಿ.ಮೀ. ಹಾಗೂ ಮಚಲಿಪಟ್ಟಣಂನಲ್ಲಿ 115.2 ಮಿ.ಮೀ. ಮಳೆಯಾಗಿದೆ.

ಚಂಡಮಾರುತವು ಕರಾವಳಿಯನ್ನು ದಾಟುವ ಸಂದರ್ಭದಲ್ಲಿ ಸಮುದ್ರದಲ್ಲಿ ಉಂಟಾಗುವ ಚಂಡಮಾರುತದ ಅಲೆಗಳ ಉಬ್ಬರದಿಂದಾಗಿ, ಖಗೋಳೀಯ ಉಬ್ಬರವಿಳಿತದ ಸಾಮಾನ್ಯ ಮಟ್ಟಕ್ಕಿಂತ ಸಮುದ್ರದ ನೀರಿನ ಮಟ್ಟ 1ರಿಂದ 1.5 ಮೀಟರ್‌ವರೆಗೆ ಏರಿಕೆಯಾಗುವ ಸಾಧ್ಯತೆಯಿತ್ತು. ಇದರಿಂದ ಆಂಧ್ರಪ್ರದೇಶದ ಕರಾವಳಿಯ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಆತಂಕ ಎದುರಾಗಿತ್ತು.

Fishermen secure their boats at a fishing harbour amidst heavy rain under overcast skies, ahead of severe cyclonic storm 'Arnab', in Visakhapatnam
Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಚಂಡಮಾರುತದ ಕೇಂದ್ರಭಾಗ ಈಗಾಗಲೇ ಭೂಪ್ರದೇಶವನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಅದರ ತೀವ್ರತೆಯನ್ನು 'ಅತ್ಯಂತ ತೀವ್ರ ಚಂಡಮಾರುತ'ದಿಂದ 'ತೀವ್ರ ಚಂಡಮಾರುತ'ದ ಮಟ್ಟಕ್ಕೆ ಇಳಿಸಿದೆ.

ಚಂಡಮಾರುತವು ಉತ್ತರ-ವಾಯವ್ಯ ದಿಕ್ಕಿನಲ್ಲಿ ಒಳನಾಡಿನತ್ತ ಚಲಿಸುತ್ತಿದ್ದಂತೆ ಮತ್ತಷ್ಟು ದುರ್ಬಲಗೊಳ್ಳುವ ನಿರೀಕ್ಷೆಯಿದೆ.

ಇದೇ ವೇಳೆ, ವಿಶಾಖಪಟ್ಟಣಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹಲವು ಪ್ರದೇಶಗಳಲ್ಲಿ ಸುಮಾರು 24 ಗಂಟೆಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವು

ಅರ್ನಬ್ ಚಂಡಮಾರುತದ ಅಬ್ಬರದ ನಡುವೆ ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಘಟನೆಗಳಲ್ಲಿ 55 ವರ್ಷದ ಮಹಿಳೆ ಸೇರಿದಂತೆ ಇಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಕೃಷಿ ಜಮೀನಿನ ಕಾಲುವೆಯ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 53 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಅನಕಾಪಲ್ಲಿ ಜಿಲ್ಲೆಯ ಯಲಮಂಚಿಲಿ ಪಟ್ಟಣದಲ್ಲಿ ಮನೆಯ ಹೊರಗೆ ತೆರೆದ ಸ್ಥಿತಿಯಲ್ಲಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದ ಪರಿಣಾಮ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com