

ಮುಂಬೈ: ಜಿಯೋ ಪ್ಲಾಟ್ಫಾರ್ಮ್ಸ್ನ ಬಹುನಿರೀಕ್ಷಿತ ಷೇರು ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ನಡೆದ ಲಿಸ್ಟಿಂಗ್ ಸಮಾರಂಭದಲ್ಲಿ ತಮ್ಮ ಮಕ್ಕಳಾದ ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರ ಮಾತುಗಳನ್ನು ಕೇಳಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಇಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಂಬಾನಿ ಕುಟುಂಬದ ಮುಂದಿನ ತಲೆಮಾರಿನ ನಾಯಕರಾದ ಮುಕೇಶ್ ಅಂಬಾನಿ ಮಕ್ಕಳು, ರಿಲಯನ್ಸ್ ಇಂಡಸ್ಟ್ರೀಸ್ನ ಪರಂಪರೆ, ಕುಟುಂಬದ ದೂರದೃಷ್ಟಿ ಹಾಗೂ ಭಾರತೀಯ ಸಮಾಜದ ಮೇಲೆ ಜಿಯೋ ಬೀರಿರುವ ಪ್ರಭಾವವನ್ನು ಸ್ಮರಿಸಿದರು.
ಜಿಯೋಗೆ ಇಡೀ ದೇಶದ ಆಶೀರ್ವಾದ ಸಿಕ್ಕಿದೆ. ಅಮ್ಮ 'ಜಿಯೋ ಮೇರೆ ಲಾಲ್' (ಚಿರಂಜೀವಿಯಾಗಿರು ನನ್ನ ಮಗನೇ) ಎಂದರು. ಅಜ್ಜಿ 'ಜುಗ್ ಜುಗ್ ಜಿಯೋ' (ಯುಗಯುಗಾಂತರಗಳ ಕಾಲ ಬಾಳು) ಎಂದು ಆಶೀರ್ವದಿಸಿದರು. ಸ್ನೇಹಿತರು 'ಜಿಯೋ ಯಾರ್' (ಬಿಂದಾಸ್ ಆಗಿ ಬದುಕು ಗೆಳೆಯಾ) ಎಂದರು" ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಹೇಳಿದರು.
ಜಿಯೋವನ್ನು ನಿರ್ಮಿಸಿದ್ದು ಭಾರತದ ಜನರು ಎಂದು ಹೇಳಿದ ಅನಂತ್, "ಜಿಯೋವನ್ನು ನಿರ್ಮಿಸಿದವರು ನೀವೇ. ನಿಮ್ಮ ಕನಸುಗಳನ್ನು ನನಸಾಗಿಸುವುದೇ ನಮ್ಮ ಕನಸು" ಎಂದು ನುಡಿದರು.
ಅನಂತ್ ಅಂಬಾನಿ ಅವರ ಮಾತುಗಳನ್ನು ಕೇಳಿ ಮುಖೇಶ್ ಅಂಬಾನಿ ಭಾವುಕರಾದರು. ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡು, ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ತಾವು ಹಾಗೂ ತಮ್ಮ ಸಹೋದರ, ಸಹೋದರಿ ಆಕಾಶ್ ಮತ್ತು ಇಶಾ ಅಂಬಾನಿ 'ಮೂರು ದೇಹಗಳು, ಆದರೆ ಒಂದೇ ಆತ್ಮ' ಇದ್ದಂತೆ ಎಂದು ಅನಂತ್ ಅಂಬಾನಿ ಬಣ್ಣಿಸಿದರು. ಪ್ರತಿಯೊಬ್ಬ ಭಾರತೀಯನ ಕನಸುಗಳನ್ನು ನನಸಾಗಿಸುವ ಸಾಮಾನ್ಯ ಧ್ಯೇಯವು ತಮ್ಮ ಮೂವರನ್ನೂ ಒಗ್ಗೂಡಿಸಿದೆ ಎಂದು ಹೇಳಿದರು.
ಜಿಯೋ ಷೇರುಪೇಟೆ ಪ್ರವೇಶದ ಈ ಐತಿಹಾಸಿಕ ಕ್ಷಣದಲ್ಲಿ ಸಂಸ್ಥೆಯ ಮೇಲಿನ ಕೃತಜ್ಞತೆ ಹಾಗೂ ಸಮಾಜದ ಬಗೆಗಿನ ಜವಾಬ್ದಾರಿಯ ಮಹತ್ವವನ್ನೂ ಅವರು ಒತ್ತಿ ಹೇಳಿದರು.
ಇಂದು ಅತ್ಯಂತ ಮಹತ್ವದ್ದಾಗಿರುವ ಒಂದೇ ಒಂದು ಪದದಿಂದ ನನ್ನ ಮಾತುಗಳನ್ನು ಆರಂಭಿಸಲು ಬಯಸುತ್ತೇನೆ. ಅದು ಕೃತಜ್ಞತೆ. ಜಿಯೋ ಮೇಲೆ ನಂಬಿಕೆ ಇಟ್ಟು, ಈ ದಿನವನ್ನು ಸಾಧ್ಯವಾಗಿಸಿದ ಕೋಟ್ಯಂತರ ಜನರಿಗೆ ನನ್ನ ಕೃತಜ್ಞತೆಗಳು ಎಂದು ಅನಂತ್ ಅಂಬಾನಿ ಹೇಳಿದರು.
ಬಳಿಕ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕೇತರ ನಿರ್ದೇಶಕಿ ಇಶಾ ಅಂಬಾನಿ, ಜಿಯೋ ಯಶಸ್ಸಿನ ಹಿಂದೆ ಶ್ರಮಿಸಿದ ಇಡೀ ತಂಡಕ್ಕೆ ಹಾಗೂ ತಮ್ಮ ಸಹೋದರರು, ತಾಯಿ ಮತ್ತು ತಂದೆಗೆ ಕೃತಜ್ಞತೆ ಸಲ್ಲಿಸಿದರು.
ತಂದೆ ಮುಖೇಶ್ ಅಂಬಾನಿ ಅವರ ದೂರದೃಷ್ಟಿ ಮತ್ತು ಸಾಧನೆಗಳನ್ನು ಸ್ಮರಿಸಿದ ಇಶಾ ಅಂಬಾನಿ ಭಾವನಾತ್ಮಕವಾಗಿ ಮಾತನಾಡಿದರು.
ನನ್ನ ತಂದೆ ಮುಖೇಶ್ಭಾಯಿ ಅಂಬಾನಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇತರರಿಗೆ ಇನ್ನೂ ಕಾಣದ ಭವಿಷ್ಯವನ್ನು ನನ್ನ ತಂದೆ ಮತ್ತೆ ಮತ್ತೆ ಮುಂಚಿತವಾಗಿಯೇ ಕಂಡಿದ್ದಾರೆ. ಇತರರು ಅಸಾಧ್ಯವೆಂದು ಭಾವಿಸಿದ್ದನ್ನು ನಿರ್ಮಿಸುವ ಧೈರ್ಯವನ್ನು ಅವರು ಮತ್ತೆ ಮತ್ತೆ ತೋರಿಸಿದ್ದಾರೆ. ಅವರ ದೂರದೃಷ್ಟಿಯಿಂದ ಕೋಟ್ಯಂತರ ಭಾರತೀಯರು ಹೊಸ ಅವಕಾಶಗಳನ್ನು ಕಂಡುಕೊಂಡಿದ್ದಾರೆ. ಹೊಸ ಕನಸುಗಳನ್ನು ಕಟ್ಟಿಕೊಂಡಿದ್ದಾರೆ.
ಉದ್ಯಮಗಳು ಬದಲಾಗಿರಬಹುದು, ದಶಕಗಳು ಬದಲಾಗಿರಬಹುದು. ಆದರೆ ಭಾರತದ ಮೇಲಿನ ಅವರ ನಂಬಿಕೆ ಮಾತ್ರ ಎಂದಿಗೂ ಬದಲಾಗಿಲ್ಲ. ನಮ್ಮ ಅತ್ಯುತ್ತಮ ದಿನಗಳು ಇನ್ನೂ ಬರಬೇಕಿವೆ ಎಂಬ ಅವರ ಅಚಲ ವಿಶ್ವಾಸವೂ ಹಾಗೆಯೇ ಉಳಿದಿದೆ. ಇದು ಕೇವಲ ಆರಂಭವಷ್ಟೇ ಎಂದು ಇಶಾ ಅಂಬಾನಿ ಹೇಳಿದರು.
ಮಗಳ ಈ ಭಾವನಾತ್ಮಕ ಮಾತುಗಳನ್ನು ಕೇಳುತ್ತಿದ್ದ ಮುಖೇಶ್ ಅಂಬಾನಿ ಮತ್ತೊಮ್ಮೆ ಭಾವುಕರಾದರು.
ರಿಲಯನ್ಸ್ ಜಿಯೋ ಅಧ್ಯಕ್ಷರಾಗಿರುವ ತಮ್ಮ ಸಹೋದರ ಆಕಾಶ್ ಅಂಬಾನಿ ಅವರು ಜಿಯೋ ಪ್ಲಾಟ್ಫಾರ್ಮ್ಸ್ ನಿರ್ಮಾಣಕ್ಕಾಗಿ ತೋರಿದ ಬದ್ಧತೆ ಹಾಗೂ ಪರಿಶ್ರಮವನ್ನೂ ಇಶಾ ಅಂಬಾನಿ ಶ್ಲಾಘಿಸಿದರು.
ಆಕಾಶ್, ಕಳೆದ 13 ವರ್ಷಗಳ ಈ ಪಯಣದಲ್ಲಿ ನೀನು ಒಂದೇ ಒಂದು ದಿನವೂ ಮಧ್ಯರಾತ್ರಿಗೂ ಮುನ್ನ ಮನೆಗೆ ಬಂದಿರುವುದನ್ನು ನಾನು ನೋಡಿಲ್ಲ. ನಿನ್ನ ಸಹೋದರಿ ಎಂಬುದಕ್ಕೆ ನನಗೆ ಅಪಾರ ಹೆಮ್ಮೆಯಿದೆ ಎಂದು ಹೇಳಿದರು.
ಜಿಯೋ ಪ್ಲಾಟ್ಫಾರ್ಮ್ಸ್ ಷೇರು ಮಾರುಕಟ್ಟೆಗೆ ಭರ್ಜರಿ ಪ್ರವೇಶ ಮಾಡಿದ್ದು, ಕಂಪನಿಯ ಷೇರುಗಳು ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (IPO) ಬೆಲೆಗಿಂತ ಶೇ.21.4ರಷ್ಟು ಪ್ರೀಮಿಯಂನಲ್ಲಿ ಲಿಸ್ಟಿಂಗ್ ಆಗಿವೆ.
ಷೇರು ಮಾರುಕಟ್ಟೆಯಲ್ಲಿ ದೊರೆತ ಈ ಭರ್ಜರಿ ಆರಂಭದೊಂದಿಗೆ ಜಿಯೋ ಪ್ಲಾಟ್ಫಾರ್ಮ್ಸ್ ಭಾರತದ ಎರಡನೇ ಅತ್ಯಂತ ಮೌಲ್ಯಯುತ ಲಿಸ್ಟೆಡ್ ಕಂಪನಿಯಾಗಿ ಹೊರಹೊಮ್ಮಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ಸುಮಾರು 12.6 ಲಕ್ಷ ಕೋಟಿ ರೂ.ಗೆ ತಲುಪಿದೆ.