'ಲಾಠಿಗಳಿಗೆ ಹೆದರಬೇಡಿ': 'ಇಂಡಿಯಾ' ಮೈತ್ರಿಕೂಟದ 'ದೆಹಲಿ ಚಲೋ' ಮಾರ್ಚ್‌ನಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಕರೆ

'ಭಯಪಡುವ ಅಗತ್ಯವಿಲ್ಲ. ರಾಜಕೀಯ ಒಲವು ಏನೇ ಇರಲಿ, ಎಲ್ಲ ವಿದ್ಯಾರ್ಥಿ ಗುಂಪುಗಳೂ ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾನು ಕೋರುತ್ತೇನೆ' ಎಂದರು.
Rahul Gandhi
ರಾಹುಲ್ ಗಾಂಧಿ
Updated on: 

ನವದೆಹಲಿ: ನವೆಂಬರ್ 1 ರಂದು ರಾಮಲೀಲಾ ಮೈದಾನಕ್ಕೆ 'ಚಲೋ ದೆಹಲಿ' ಮೆರವಣಿಗೆಗೆ ತಮ್ಮ ಕರೆಯನ್ನು ಪುನರುಚ್ಚರಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ, ಮತ ಕಳ್ಳತನ ಮತ್ತು ಮತದಾರರ ಅಕ್ರಮಗಳ ವಿರುದ್ಧದ ವಿಪಕ್ಷದ ಪ್ರತಿಭಟನೆಯಲ್ಲಿ ರಾಜಕೀಯ ನಿಲುವು ಏನೇ ಇದ್ದರೂ, ಎಲ್ಲ ವಿದ್ಯಾರ್ಥಿ ಗುಂಪುಗಳು ಪಾಲ್ಗೊಳ್ಳಿ ಎಂದು ಒತ್ತಾಯಿಸಿದರು.

X ನಲ್ಲಿನ ಪೋಸ್ಟ್‌ನಲ್ಲಿ, ರಾಹುಲ್ ಮೆರವಣಿಗೆಯನ್ನು 'ಭಾರತದ ಆತ್ಮ' ಎಂದು ಕರೆದರು ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದ ಬೇಸತ್ತ ಪ್ರತಿಯೊಬ್ಬರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

'ಚಲೋ ದೆಹಲಿ ರಾಮ್‌ಲೀಲಾ ಮಾರ್ಚ್' ಎಂಬುದು ಪ್ರಜಾಪ್ರಭುತ್ವವನ್ನು ಉಳಿಸಲು, ಮತ ಕಳ್ಳತನವನ್ನು ತಡೆಯಲು ಮತ್ತು ಸಂವಿಧಾನವನ್ನು ರಕ್ಷಿಸಲು ಕೈಗೊಂಡಿರುವ ಒಂದು ಹೋರಾಟವಾಗಿದೆ. ಇದೊಂದು ನಿರ್ದಿಷ್ಟ ರಾಜಕೀಯ ಪಕ್ಷದ ಹೋರಾಟವಲ್ಲ; ಬದಲಾಗಿ, ಇದು ಭಾರತದ ಆತ್ಮವನ್ನು ಉಳಿಸಿಕೊಳ್ಳುವ ಹೋರಾಟವಾಗಿದೆ. ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜ್ಞಾನೇಶ್ ಕುಮಾರ್ ಅವರ ನಡೆಗಳಿಂದ ಬೇಸತ್ತಿರುವ ಪ್ರತಿಯೊಬ್ಬರೂ, ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ಬಯಸುವ ಪ್ರತಿಯೊಬ್ಬರೂ ದಯವಿಟ್ಟು ಬಂದು ನಮ್ಮೊಂದಿಗೆ ಕೈಜೋಡಿಸಿ' ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಪೊಲೀಸರ ಕ್ರಮಗಳಿಗೆ ಹೆದರಬಾರದು ಎಂದು ಜನರಿಗೆ ಕರೆ ನೀಡಿರುವ ಕಾಂಗ್ರೆಸ್ ನಾಯಕ, ಬಿಜೆಪಿ 'ತನ್ನ ಎಂದಿನ ಕುತಂತ್ರಗಳನ್ನು ಪ್ರಯೋಗಿಸಲು ಧೈರ್ಯ ಮಾಡಲಾರದು' ಎಂದು ಹೇಳಿದ್ದಾರೆ.

'ಇದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಇಡೀ ರಾಷ್ಟ್ರದ ಪ್ರತಿಭಟನೆ. ಪೊಲೀಸರ ಬಗ್ಗೆ ಚಿಂತಿಸಬೇಡಿ, ಲಾಠಿ ಏಟುಗಳ ಬಗ್ಗೆಯೂ ಚಿಂತಿಸಬೇಡಿ. ತಮ್ಮ ಎಂದಿನ ತಂತ್ರಗಳನ್ನು ಪ್ರಯೋಗಿಸಲು ಬಿಜೆಪಿಗರಿಗೆ ಧೈರ್ಯವಿರುವುದಿಲ್ಲ. ನಮ್ಮೊಂದಿಗೆ ಹೆಜ್ಜೆ ಹಾಕಿ ಬನ್ನಿ. ಸಂವಿಧಾನವನ್ನು ರಕ್ಷಿಸಲು ಮತ್ತು ಭಾರತ ದೇಶವನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ನಡೆಯೋಣ' ಎಂದು ಅವರು ಹೇಳಿದರು.

Rahul Gandhi
'ನಮ್ಮ ದೇಶದ ಜನರಿಗೆ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ': ಮಲ್ಲಿಕಾರ್ಜುನ ಖರ್ಗೆ ಪರ ಶಶಿ ತರೂರ್ ಬ್ಯಾಟಿಂಗ್!

'ಭಯಪಡುವ ಅಗತ್ಯವಿಲ್ಲ. ರಾಜಕೀಯ ಒಲವು ಏನೇ ಇರಲಿ, ಎಲ್ಲ ವಿದ್ಯಾರ್ಥಿ ಗುಂಪುಗಳೂ ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾನು ಕೋರುತ್ತೇನೆ. ಭಾರತದ ಮೇಲೆ ದಾಳಿ ನಡೆಯುತ್ತಿದೆ ಎಂದು ನಿಮಗೆ ಅನ್ನಿಸಿದರೆ, ನಿಮ್ಮ ಮೇಲೆ ದಾಳಿ ನಡೆಯುತ್ತಿದೆ ಎಂದು ನಿಮಗೆ ಅನಿಸಿದರೆ, ಹಾಗೂ ನಿಮ್ಮ ಅಭಿವ್ಯಕ್ತಿ, ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಚಿಂತನಾ ಕ್ರಮದ ಮೇಲೆ ದಾಳಿ ನಡೆಯುತ್ತಿದೆ ಎಂದು ನಿಮಗೆ ಭಾವನೆಯಾದರೆ, ಬನ್ನಿ, ನಮ್ಮೊಂದಿಗೆ ಸೇರಿಕೊಳ್ಳಿ. ಇದೊಂದು ಅದ್ಭುತವಾದ ಮೆರವಣಿಗೆಯಾಗಲಿದೆ; ಈ ದೇಶದ ಆತ್ಮಕ್ಕಾಗಿ ನಡೆಯುವ ಮೆರವಣಿಗೆ ಇದಾಗಲಿದೆ' ಎಂದು ಅವರು ಹೇಳಿದರು.

ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ 'ಇಂಡಿಯಾ' ಒಕ್ಕೂಟದ ರ್ಯಾಲಿಯಲ್ಲಿ, ಕಾಂಗ್ರೆಸ್ ಪಕ್ಷವು ತನ್ನ ಬಲ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದಲ್ಲದೆ, ಶುಕ್ರವಾರದಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆಯಲಿರುವ 'ಅಣಕು ಸಂಸತ್ತು' (mock parliament) ಅಧಿವೇಶನದಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ 'ಸಾರ್ವಜನಿಕ ದೋಷಾರೋಪಣೆ' (public impeachment) ನಡೆಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com