ಪಿಎನ್‌ಬಿ ಬ್ಯಾಂಕ್‌ನಲ್ಲಿ 35 ಕೋಟಿ ಮಹಾ ವಂಚನೆ: ರೈತರ ಜಮೀನು ಪರಿಹಾರದ ಹಣ ಲೂಟಿ, ಮ್ಯಾನೇಜರ್ ಸೇರಿ ಐವರ ಅಮಾನತು!

ಉತ್ತರ ಪ್ರದೇಶದ ಐಚ್ಛರ್ ಗ್ರಾಮದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಅರಿವಿಲ್ಲದೆಯೇ ಅವರ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವ ಭಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
Punjab National Bank
ಪಂಜಾಬ್ ನ್ಯಾಷನಲ್ ಬ್ಯಾಂಕ್Online Desk
Updated on: 

ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ): ಬ್ಯಾಂಕುಗಳು ಅದರಲ್ಲೂ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಮ್ಮ ಹಣವನ್ನ ಸುರಕ್ಷಿತ ಎಂದು ಠೇವಣಿ ಇಟ್ಟಿರುತ್ತೇವೆ. ಆದರೆ, ಈ ಬ್ಯಾಂಕುಗಳೇ ತಮ್ಮ ಗಾರ್ಹಕರಿಗೆ ಮೋಸ ಮಾಡಿದರೆ ಏನಾಗಬೇಡ? ಅದಕ್ಕೆ ಸಾಕ್ಷಿ ಎಂಬಂತೆ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಐಚ್ಛರ್ ಗ್ರಾಮದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಅರಿವಿಲ್ಲದೆಯೇ ಅವರ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವ ಭಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಹಕರ ಅಂದಾಜಿನ ಪ್ರಕಾರ ಸುಮಾರು ₹35 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಅಕ್ರಮ ನಡೆದಿದ್ದು ಹೇಗೆ?

ವಂಚಕರು ಗ್ರಾಹಕರ ಸೇವಿಂಗ್ಸ್ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಲೂಟಿ ಮಾಡಿರುವುದಲ್ಲದೆ, ಹಲವರ ಫಿಕ್ಸ್ಡ್ ಡೆಪಾಸಿಟ್‌ಗಳನ್ನು ಅವಧಿಗೂ ಮುನ್ನವೇ, ಗ್ರಾಹಕರ ಅನುಮತಿ ಇಲ್ಲದೆ, ಯಾವುದೇ ಒಟಿಪಿ ಅಥವಾ ಮೊಬೈಲ್ ಸಂದೇಶದ ಅಲರ್ಟ್ ಹೋಗದಂತೆ ನಿಯಮಬಾಹಿರವಾಗಿ ಮುರಿದು ಬೇರೆ ಬೇರೆ ಅಪರಿಚಿತ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅದರಲ್ಲೂ, ನೋಯ್ಡಾ ಪ್ರಾಧಿಕಾರದಿಂದ ಜಮೀನು ಪರಿಹಾರ ಪಡೆದು ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದ ಸ್ಥಳೀಯ ರೈತರು ಮತ್ತು ಹಿರಿಯ ನಾಗರಿಕರ ಖಾತೆಗಳನ್ನೇ ಮುಖ್ಯವಾಗಿ ಗುರಿಯಾಗಿಸಿಕೊಂಡು ಈ ವಂಚನೆ ಮಾಡಲಾಗಿದೆ. ಹೀಗೆ, ವಿಜೇಂದ್ರ ಸಿಂಗ್ ಎಂಬ ಗ್ರಾಹಕರ ಖಾತೆಯಲ್ಲಿದ್ದ ₹88 ಲಕ್ಷ ಹಣದ ಪೈಕಿ ಕೇವಲ ₹1,290 ಉಳಿದಿದೆ. ಹನೀಫ್ ಖಾನ್ ಎಂಬುವವರ ಖಾತೆಯಿಂದ ₹39 ಲಕ್ಷ ಮಾಯವಾಗಿರುವ ಹಾಗೂ ವೃದ್ಧರ ₹17.5 ಲಕ್ಷದ ಖಾತೆಯಲ್ಲಿ ಕೇವಲ ₹61,000 ಮಾತ್ರ ಬಾಕಿ ಉಳಿದಿದೆ. ಮತ್ತು ನೋಯ್ಡಾ ವಿಮಾನ ನಿಲ್ದಾಣದ ಭೂಸ್ವಾಧೀನದ ಪರಿಹಾರವಾಗಿ ಬಂದಿದ್ದ ₹1.29 ಕೋಟಿ ಹಣ ಹೊಂದಿದ್ದ ಖಾತೆಯ ಬ್ಯಾಲೆನ್ಸ್ ಸಂಪೂರ್ಣ ಶೂನ್ಯ ಆಗಿರುವ ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಏತನ್ಮಧ್ಯೆ, ಗ್ರಾಹಕರು ತಮ್ಮ ಪಾಸ್‌ಬುಕ್ ಅಪ್‌ಡೇಟ್ ಮಾಡಲು ಹೋದಾಗಲೆಲ್ಲಾ "ಆರ್‌ಬಿಐ ಆಡಿಟ್ ನಡೆಯುತ್ತಿದೆ" ಅಥವಾ "ಮಿಷನ್ ಕೆಟ್ಟಿದೆ" ಎಂಬ ನೆಪ ಹೇಳಿ ಬ್ಯಾಂಕ್ ಸಿಬ್ಬಂದಿ ಅವರನ್ನು ವಾಪಸ್ ಕಳುಹಿಸುತ್ತಿದ್ದರು ಎನ್ನಲಾಗಿದೆ.

Punjab National Bank
ಪಾರ್ಟ್‌ನರ್ ಗೆಳತಿಯರೇ ಟಾರ್ಗೆಟ್! ಇನ್‌ಸ್ಟಾ ರೀಲ್ಸ್‌, ಐಷಾರಾಮಿ ಕಾರು ತೋರಿಸಿ 20 ಮಹಿಳಾ ಕಾನ್‌ಸ್ಟೇಬಲ್‌ಗಳಿಗೆ ವಂಚನೆ: ಖತರ್ನಾಕ್ ಖದೀಮ ಅರೆಸ್ಟ್

ಮ್ಯಾನೇಜರ್ ಸೇರಿ 5 ನೌಕರರ ಅಮಾನತು

ಈ ವಂಚನೆಯಲ್ಲಿ ಬ್ಯಾಂಕ್ ಸಿಬ್ಬಂದಿಯ ಶಾಮೀಲಾತಿ ಇರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ, ಪಿಎನ್‌ಬಿ ಆಡಳಿತ ಮಂಡಳಿಯು ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಸೇರಿದಂತೆ ಐದು ಜನ ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಶಾಖೆಯ ಇಡೀ ಹಳೆಯ ಸಿಬ್ಬಂದಿಯನ್ನು ಬದಲಾಯಿಸಿ ಹೊಸ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜೊತೆಗೆ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ನೀಡಿರುವ ಮಾಹಿತಿ ಪ್ರಕಾರ, ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ದೆಹಲಿಯಲ್ಲಿರುವ ಪಿಎನ್‌ಬಿ ಪ್ರಧಾನ ಕಚೇರಿಯು ಸದ್ಯಕ್ಕೆ ಹೋಲ್ಡ್‌ನಲ್ಲಿಟ್ಟಿದ್ದು, ಸೂಕ್ತ ಪರಿಶೀಲನೆಯ ನಂತರ ತೊಂದರೆಗೊಳಗಾದ ಎಲ್ಲ ಗ್ರಾಹಕರಿಗೂ ಅವರ ಹಣವನ್ನು ಸುರಕ್ಷಿತವಾಗಿ ಮರಳಿಸಲಾಗುವುದು ಎಂದು ಬ್ಯಾಂಕ್ ಭರವಸೆ ನೀಡಿದೆ. ಈ ಬೆನ್ನಲ್ಲೇ, ಗ್ರೇಟರ್ ನೋಯ್ಡಾದ ಬೀಟಾ-2 ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಬ್ಯಾಂಕ್‌ನ ಆಂಟಿ-ಕರಪ್ಷನ್ ವಿಭಾಗ ಹಾಗೂ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಹಣ ವರ್ಗಾವಣೆಯಾಗಿರುವ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com