

ಮುಂಬೈ: ಎಲ್ಗಾರ್ ಪರಿಷದ್- ಮಾವೋವಾದಿಗಳ ಸಂಪರ್ಕ ಪ್ರಕರಣದಲ್ಲಿ 2011ರ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೇರಾ ಅವರನ್ನು ಬಂಧಿಸಿದ್ದನ್ನು 'ಅಕ್ರಮ' ಎಂದು ಬಾಂಬೆ ಹೈಕೋರ್ಟ್ ಘೋಷಿಸಿದೆ. ಅಲ್ಲದೆ, ಅವರಿಗೆ ಪರಿಹಾರವಾಗಿ 2 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿದೆ.
ಫೆರೇರಾ ಅವರು 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಪ್ರಸ್ತುತ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅಕ್ಟೋಬರ್ 27ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಉರ್ಮಿಳಾ ಜೋಶಿ-ಫಾಲ್ಕೆ ಮತ್ತು ರಾಜ್ ವಾಕೋಡೆ ಅವರನ್ನೊಳಗೊಂಡ ನಾಗ್ಪುರ ಪೀಠವು ಪೊಲೀಸರ ಕ್ರಮವನ್ನು ತೀವ್ರವಾಗಿ ಟೀಕಿಸಿದೆ.
2007ರಿಂದಲೂ ಫೆರೇರಾ ಜೈಲಿನಲ್ಲಿದ್ದರೂ, ಅವರನ್ನು 'ತಲೆಮರೆಸಿಕೊಂಡಿರುವ ವ್ಯಕ್ತಿ' (absconding) ಎಂದು ಬಿಂಬಿಸಿದ್ದಕ್ಕಾಗಿ ನ್ಯಾಯಾಲಯವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ತಮ್ಮ ಮೇಲಿದ್ದ ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಂಡ ನಂತರ, ನಾಗ್ಪುರ ಜೈಲಿನಿಂದ ಹೊರಬರುತ್ತಿದ್ದಂತೆಯೇ ಫೆರೇರಾ ಅವರನ್ನು ಮತ್ತೆ ಬಂಧಿಸಿದ್ದು, ಸಂವಿಧಾನಾತ್ಮಕ ರಕ್ಷಣೆಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಫೆರೇರಾ ಅವರನ್ನು 2007ರಲ್ಲಿ ಹಲವು ಪ್ರಕರಣಗಳಲ್ಲಿ ಬಂಧಿಸಲಾಗಿತ್ತು.
ಆ ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಂಡ ನಂತರ, 2011ರ ಸೆಪ್ಟೆಂಬರ್‌ನಲ್ಲಿ ಅವರನ್ನು ನಾಗ್ಪುರ ಜೈಲಿನಿಂದ ಬಿಡುಗಡೆ ಮಾಡಬೇಕಿತ್ತು. ಆದರೆ, ಅವರು ಜೈಲಿನಿಂದ ಹೊರಬರುತ್ತಿದ್ದಂತೆಯೇ, ಪೊಲೀಸ್ ತಂಡವೊಂದು ಅವರನ್ನು ತಡೆದು ವಾಹನದಲ್ಲಿ ಕರೆದೊಯ್ದಿತು. ನಂತರ, ಗಡ್ಚಿರೋಲಿ ಪೊಲೀಸರು ಅವರನ್ನು ಬಂಧಿಸಿರುವುದಾಗಿ ತೋರಿಸಲಾಯಿತು. ತಮ್ಮ ಅರ್ಜಿಯಲ್ಲಿ, ಆ ಸಮಯದಲ್ಲಿ ತಮ್ಮನ್ನು ಏಕೆ ಬಂಧಿಸಲಾಗುತ್ತಿದೆ ಎಂಬುದರ ಕಾರಣವನ್ನು ತಮಗೆ ತಿಳಿಸಲಾಗಿರಲಿಲ್ಲ ಎಂದು ಫೆರೇರಾ ಉಲ್ಲೇಖಿಸಿದ್ದಾರೆ.
ಪೊಲೀಸರು ಫೆರೇರಾ ಅವರ ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳಾದ ವಿಧಿ 21 (ಸ್ವಾತಂತ್ರ್ಯದ ಹಕ್ಕು) ಮತ್ತು ವಿಧಿ 22 (ಬಂಧನ ಮತ್ತು ವಶಕ್ಕೆ ಪಡೆಯುವಿಕೆಯ ವಿರುದ್ಧ ರಕ್ಷಣೆ) ಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಕಾನೂನನ್ನು ರಕ್ಷಿಸುವುದು ಪೊಲೀಸರ ಪ್ರಾಥಮಿಕ ಜವಾಬ್ದಾರಿಯಾಗಿದೆ. ಅಂತಹ ಜವಾಬ್ದಾರಿ ಹೊಂದಿರುವವರೇ ಕಾನೂನನ್ನು ಉಲ್ಲಂಘಿಸಿದರೆ, ಅದಕ್ಕೆ ತಕ್ಕಂತೆ ಕಠಿಣ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಇಂತಹ ಕೃತ್ಯಗಳಿಗೆ ತಡೆ ಒಡ್ಡಲು ಮತ್ತು ಸಮಾಜದಲ್ಲಿ ಕಾನೂನಿನ ಬಗ್ಗೆ ವಿಶ್ವಾಸ ಮೂಡಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಾನೂನು ಜಾರಿ ಸಂಸ್ಥೆಗಳು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರಿಗಿರುವ ಕರ್ತವ್ಯವು ತಮ್ಮ ಮುಂದೆ ಇರುವ ಆರೋಪಿಯ ಕಡೆಗೆ ಮಾತ್ರವಲ್ಲ, ಬದಲಾಗಿ ರಾಜ್ಯ ಮತ್ತು ಸಮಗ್ರ ಸಮಾಜದ ಕಡೆಗೂ ಇರುತ್ತದೆ ಎಂದು ಹೈಕೋರ್ಟ್ ಹೇಳಿತು. ಅರ್ಜಿಯನ್ನು ವಿರೋಧಿಸಿದ ಪೊಲೀಸರು, ಆರೋಪಿಯೊಂದಿಗೆ ನಕ್ಸಲ್ ಸಂಪರ್ಕವಿರುವ ಶಂಕೆ ಇರುವುದರಿಂದ ಗೌಪ್ಯತೆ ಕಾಯ್ದುಕೊಳ್ಳುವುದು ಅಗತ್ಯ ಎಂದು ವಾದಿಸಿದರು. ಆದರೆ, ಬಂಧನಕ್ಕೆ ಕಾರಣಗಳನ್ನು ನೀಡಬೇಕೆಂಬ ಸಾಂವಿಧಾನಿಕ ಕರ್ತವ್ಯವು ಯಾವುದೇ ವಿನಾಯಿತಿಯಿಲ್ಲದೆ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಪೀಠವು, ಪೊಲೀಸರ ಈ ವಾದವನ್ನು ತಳ್ಳಿಹಾಕಿತು.