

ಅಮರಾವತಿ: ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದ ಅರ್ನಬ್ ಚೆಂಡಮಾರುತದ ಬೆನ್ನಲ್ಲೇ ಆಂಧ್ರಪ್ರದೇಶಕ್ಕೆ ಮತ್ತೊಂದು ಆತಂಕ ಎದುರಾಗಿದ್ದು, ನವೆಂಬರ್ 2ರಂದು ವಾಯುಭಾರ ಕುಸಿತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.
ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದ್ದು, ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಆತಂಕ ಎದುರಾಗಿದೆ.
ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಪಶ್ಚಿಮ-ವಾಯವ್ಯ ದಿಕ್ಕಿನತ್ತ ಚಲಿಸುತ್ತಿದ್ದು, ನವೆಂಬರ್ 2ರ ವೇಳೆಗೆ ಆಂಧ್ರಪ್ರದೇಶ ಕರಾವಳಿಯ ಸಮೀಪ ವಾಯುಭಾರ ಕುಸಿತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ದಕ್ಷಿಣ ಅಂಡಮಾನ್ ಸಮುದ್ರ, ಅದಕ್ಕೆ ಹೊಂದಿಕೊಂಡಿರುವ ಉತ್ತರ ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಪಶ್ಚಿಮ-ವಾಯವ್ಯ ದಿಕ್ಕಿನತ್ತ ಚಲಿಸಿ, ಇದೀಗ ಗುರುತಿಸಲ್ಪಟ್ಟ ವಾಯುಭಾರ ಕುಸಿತವಾಗಿ ಬದಲಾಗಿದೆ ಎಂದು ಹೇಳಲಾಗಿದೆ.
ಶನಿವಾರ ಬೆಳಗ್ಗೆ 5.30ರ ವೇಳೆಗೆ ಈ ಹವಾಮಾನ ವ್ಯವಸ್ಥೆಯು ಆಗ್ನೇಯ ಬಂಗಾಳಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶ ಹಾಗೂ ಅಂಡಮಾನ್ ಸಮುದ್ರದ ಮೇಲೆ ನೆಲೆಗೊಂಡಿತ್ತು ಎಂದು ಹವಾಮಾನ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ 12 ಗಂಟೆಗಳಲ್ಲಿ ಈ ವಾಯುಭಾರ ಕುಸಿತವು ಅದೇ ಪ್ರದೇಶದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿನತ್ತ ಚಲಿಸಿ, ವಾಯುಭಾರ ಕುಸಿತದ ತೀವ್ರ ಸ್ವರೂಪವಾದ ಡಿಪ್ರೆಶನ್ (ತೀವ್ರ ವಾಯುಭಾರ ಕುಸಿತ) ಆಗಿ ಬದಲಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಈ ಹವಾಮಾನ ವ್ಯವಸ್ಥೆ ಮತ್ತಷ್ಟು ಬಲಗೊಂಡು ನವೆಂಬರ್ 2ರ ವೇಳೆಗೆ ಆಂಧ್ರಪ್ರದೇಶ ಕರಾವಳಿಯ ಸಮೀಪ ತೀವ್ರಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಬಂಗಾಳಕೊಲ್ಲಿ ಹಾಗೂ ಆಂಧ್ರಪ್ರದೇಶ ಕರಾವಳಿ ಭಾಗಗಳಲ್ಲಿ ಹವಾಮಾನ ಬದಲಾವಣೆಗಳ ಮೇಲೆ ನಿಗಾ ಇಡಲಾಗಿದೆ.