

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ NVS-03 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಶುಕ್ರವಾರ ರಾತ್ರಿ 11.51ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (SDSC) ಎರಡನೇ ಉಡಾವಣಾ ವೇದಿಕೆಯಿಂದ GSLV-F18 ರಾಕೆಟ್ ಮೂಲಕ ಉಪಗ್ರಹವನ್ನು ನಭಕ್ಕೆ ಕಳುಹಿಸಲಾಯಿತು.
50 ಮೀಟರ್ ಎತ್ತರದ, ಮೂರು ಹಂತಗಳನ್ನು ಹೊಂದಿರುವ GSLV-F18 ರಾಕೆಟ್ 420 ಟನ್ ತೂಕದ ಉಡಾವಣಾ ಸಾಮರ್ಥ್ಯ ಹೊಂದಿದ್ದು, 2,250 ಕೆ.ಜಿ. ತೂಕದ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ (GTO)ಗೆ ಸೇರಿಸಿದೆ. 24 ಗಂಟೆಗಳ ಕ್ಷಣಗಣನೆಯ ಬಳಿಕ ನಡೆದ ಈ ಉಡಾವಣೆಯು ಇಸ್ರೋದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಸರಣಿಯ 20ನೇ ಹಾರಾಟವಾಗಿದೆ.
NVS-03 ಉಪಗ್ರಹವು ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆಯಾದ 'ನ್ಯಾವಿಕ್' (NavIC - Navigation with Indian Constellation) ಅನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ. ಈ ಉಪಗ್ರಹ ಕಾರ್ಯಾರಂಭ ಮಾಡಿದ ಬಳಿಕ ನ್ಯಾವಿಕ್ ವ್ಯವಸ್ಥೆಯ ಸಕ್ರಿಯ ಉಪಗ್ರಹಗಳ ಸಂಖ್ಯೆ ನಾಲ್ಕಕ್ಕೆ ಏರಲಿದೆ.
ಭಾರತದ ಮುಖ್ಯ ಭೂಭಾಗದಾದ್ಯಂತ ಹಾಗೂ ದೇಶದ ಗಡಿಯಾಚೆಗಿನ 1,500 ಕಿ.ಮೀ. ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಸ್ಥಾನ ನಿರ್ಧಾರ, ಸಂಚಾರ ಮಾರ್ಗದರ್ಶನ ಮತ್ತು ಸಮಯದ ಮಾಹಿತಿ (PNT) ಸೇವೆಗಳನ್ನು ಒದಗಿಸುತ್ತದೆ. ಸಮುದ್ರಯಾನ ಸುರಕ್ಷತೆ, ವಾಹನಗಳ ನಿಗಾ ಮತ್ತು ತುರ್ತು ಎಚ್ಚರಿಕೆ ವ್ಯವಸ್ಥೆಗಳಿಗೆ ಈ ಸೇವೆಗಳು ನೆರವಾಗಲಿವೆ.
ಈ ಉಪಗ್ರಹದಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ರುಬಿಡಿಯಂ ಪರಮಾಣು ಗಡಿಯಾರವನ್ನು ಅಳವಡಿಸಲಾಗಿದೆ. ಇದು ಸ್ಥಾನ ನಿರ್ಧಾರದ ನಿಖರತೆಯನ್ನು ಹೆಚ್ಚಿಸಲಿದೆ. ಅಲ್ಲದೆ, ಎಲ್5 ಮತ್ತು ಎಸ್ ಬ್ಯಾಂಡ್ಗಳ ಜೊತೆಗೆ ನಾಗರಿಕ ಬಳಕೆಯ ಎಲ್1 ಬ್ಯಾಂಡ್ನಲ್ಲಿಯೂ ಸಂಕೇತಗಳನ್ನು ಪ್ರಸಾರ ಮಾಡಲಿದೆ. ಇದರಿಂದ ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ವಾಚ್ಗಳು ಮತ್ತು ಫಿಟ್ನೆಸ್ ಟ್ರ್ಯಾಕರ್ಗಳಂತಹ ಗ್ರಾಹಕ ಸಾಧನಗಳಲ್ಲಿಯೂ ಈ ವ್ಯವಸ್ಥೆಯನ್ನು ಬಳಸಲು ಸಾಧ್ಯವಾಗಲಿದೆ. ಅಮೆರಿಕದ ಜಿಪಿಎಸ್ನಂತಹ ವಿದೇಶಿ ನ್ಯಾವಿಗೇಷನ್ ವ್ಯವಸ್ಥೆಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.
2025ರ ಜನವರಿಯಲ್ಲಿ ಉಡಾವಣೆಗೊಂಡಿದ್ದ NVS-02 ಉಪಗ್ರಹದ ಕಾರ್ಯಾಚರಣೆ ವಿಫಲವಾದ ಬೆನ್ನಲ್ಲೇ ಈ ಉಡಾವಣೆ ನಡೆದಿದೆ. ಇಂಧನ ಕವಾಟದ ಕನೆಕ್ಟರ್ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ NVS-02 ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಈ ವೈಫಲ್ಯದ ಬಳಿಕ ಇಸ್ರೋ ಉಪಗ್ರಹದ ಎಂಜಿನಿಯರಿಂಗ್ ವಿನ್ಯಾಸವನ್ನು ಪರಿಶೀಲಿಸಿ, ಪ್ರೊಪೆಲ್ಲಂಟ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಪೈರೋಟೆಕ್ನಿಕ್ ಕವಾಟಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿತ್ತು.
NVS-03 ಉಪಗ್ರಹವನ್ನು ಭೂಮಿಯಿಂದ ಕನಿಷ್ಠ 170 ಕಿ.ಮೀ. ಮತ್ತು ಗರಿಷ್ಠ 37,023 ಕಿ.ಮೀ. ಎತ್ತರ ಹೊಂದಿರುವ ಅಂಡಾಕಾರದ ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ ಸೇರಿಸಲಾಗಿದೆ. ಸಮಭಾಜಕ ವೃತ್ತಕ್ಕೆ 20.75 ಡಿಗ್ರಿ ಇಳಿಜಾರಿನಲ್ಲಿರುವ ಈ ಕಕ್ಷೆಯಿಂದ ಮುಂದಿನ ಕೆಲವು ದಿನಗಳಲ್ಲಿ ಕಕ್ಷೆ ಉನ್ನತೀಕರಣ ಪ್ರಕ್ರಿಯೆಗಳನ್ನು ನಡೆಸಿ, ಪೂರ್ವ ರೇಖಾಂಶದ 32.5 ಡಿಗ್ರಿಯಲ್ಲಿರುವ ಅಂತಿಮ ಭೂಸ್ಥಾಯಿ ಕಕ್ಷೆಗೆ ಉಪಗ್ರಹವನ್ನು ಸೇರಿಸಲಾಗುತ್ತದೆ. ಆ ಬಳಿಕ ಅದು ಕಾರ್ಯಾರಂಭ ಮಾಡಲಿದೆ.
ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಸಂತಸ
ಈ ನಡುವೆ ಉಡಾವಣೆ ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
2,250 ಕೆ.ಜಿ. ತೂಕದ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಘೋಷಿಸಿದ ಅವರು, "ಉಪಗ್ರಹವು 170.3 ಕಿ.ಮೀ. ಮತ್ತು 38,080 ಕಿ.ಮೀ. ಎತ್ತರದ ಕಕ್ಷೆಯನ್ನು ತಲುಪಿದೆ. ಇದು ಅತ್ಯಂತ ನಿಖರವಾದ ಉಡಾವಣೆಯಾಗಿದ್ದು, ಈವರೆಗಿನ ಅತ್ಯುತ್ತಮ ಕಾರ್ಯಕ್ಷಮತೆಯಾಗಿದೆ" ಎಂದು ಹೇಳಿದರು.
ಇದೂವರೆಗೆ ಜಿಎಸ್ಎಲ್ವಿ ಮೂಲಕ 34 ಟನ್ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ. ಈ ಬಾರಿಯ ಉಡಾವಣೆಗೆ ಕೇವಲ 56 ದಿನಗಳಲ್ಲೇ ಸಿದ್ಧತೆ ಪೂರ್ಣಗೊಳಿಸಿರುವುದು ಜಿಎಸ್ಎಲ್ವಿ ಸರಣಿಯಲ್ಲೇ ಅತ್ಯಂತ ಕಡಿಮೆ ಅವಧಿಯಾಗಿದೆ. ಕಳೆದ ತಿಂಗಳಷ್ಟೇ EOS-05 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು ಎಂದು ತಿಳಿಸಿದರು.
ನ್ಯಾವಿಕ್ ಉಪಗ್ರಹ ಸಮೂಹವನ್ನು ಈಗ ಮತ್ತಷ್ಟು ಬಲಪಡಿಸಿ ಕಕ್ಷೆಯಲ್ಲಿ ಮರುಸ್ಥಾಪಿಸಲಾಗಿದೆ. ಇದು ದೇಶದ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಆಸ್ತಿಯಾಗಿದೆ. 'ಒಂದು ರಾಷ್ಟ್ರ, ಒಂದು ಸಮಯ' ಯೋಜನೆಗೂ ಇದು ಅತ್ಯಂತ ಮುಖ್ಯವಾಗಿದೆ. ಸ್ವದೇಶಿ ತಂತ್ರಜ್ಞಾನ ಮತ್ತು ಸ್ವದೇಶಿ ಗಡಿಯಾರಗಳನ್ನು ಬಳಸಿ ಅಭಿವೃದ್ಧಿಪಡಿಸಿರುವ ಈ ಉಪಗ್ರಹ ರೈಲುಗಳು, ವಿಮಾನಗಳು, ಹಡಗುಗಳು ಸೇರಿದಂತೆ ವಿವಿಧ ನಾಗರಿಕ ಬಳಕೆಗಳ ಚಲನವಲನಗಳನ್ನು ಪತ್ತೆಹಚ್ಚಲು ನೆರವಾಗಲಿದೆ ಎಂದು ಅವರು ಹೇಳಿದರು.
ಸೆಪ್ಟೆಂಬರ್ 4ರಂದು GSLV-F17 ರಾಕೆಟ್ ಮೂಲಕ ಉಡಾವಣೆಗೊಂಡಿದ್ದ EOS-05 ಉಪಗ್ರಹವು ಅತ್ಯುತ್ತಮ ಚಿತ್ರಗಳನ್ನು ಕಳುಹಿಸುತ್ತಿದೆ ಎಂದು ಇಸ್ರೋ ತಂಡದ ಸದಸ್ಯರು ತಿಳಿಸಿದ್ದಾರೆ.
ಎರಡು ಜಿಎಸ್ಎಲ್ವಿ ಉಡಾವಣೆಗಳ ನಡುವಿನ ಅತ್ಯಂತ ಕಡಿಮೆ ಅಂತರ ಇದಾಗಿದೆ. NVS-03 ಉಪಗ್ರಹದ ಸೌರ ಫಲಕಗಳು ಯಶಸ್ವಿಯಾಗಿ ತೆರೆದುಕೊಂಡಿದ್ದು, ಉಪಗ್ರಹದ ಆರೋಗ್ಯ ಸ್ಥಿರವಾಗಿದೆ. ಒಂದು ವಾರದೊಳಗೆ ಉಪಗ್ರಹದಿಂದ ಮಾಹಿತಿ ಪ್ರಸಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.