

ಇಂಫಾಲ್: 2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 306 ಮಂದಿ ಮೃತಪಟ್ಟಿದ್ದು, ಇನ್ನೂ 49 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಣಿಪುರ ಗೃಹ ಸಚಿವ ಗೋವಿಂದಾಸ್ ಕೊಂಥೌಜಮ್ ಇಂದು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಮೈತೇಯಿ ಮತ್ತು ಕುಕಿ-ಜೋ ಸಮುದಾಯಗಳ ನಡುವಿನ ಹಿಂಸಾಚಾರವು 2023ರ ಮೇ 3ರಂದು ಆರಂಭವಾಗಿತ್ತು. ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡಬೇಕೆಂಬ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬೆಟ್ಟ ಪ್ರದೇಶಗಳ ಜಿಲ್ಲೆಗಳಲ್ಲಿ ‘ಟ್ರೈಬಲ್ ಸಾಲಿಡಾರಿಟಿ ಮಾರ್ಚ್’ ಆಯೋಜಿಸಲಾಗಿತ್ತು. ಇದರ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು.
ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇಂದು ಬಿಜೆಪಿ ಶಾಸಕ ಸಪಮ್ ರಂಜನ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, 2023ರ ಮೇ 3ರಂದು ಹಿಂಸಾಚಾರ ಆರಂಭವಾದ ಬಳಿಕ, ಮೊನ್ನೆ ಆಗಸ್ಟ್ 31ರ ವೇಳೆಗೆ 306 ಮಂದಿ ಮೃತಪಟ್ಟಿದ್ದಾರೆ. ಇನ್ನೂ 49 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.
ಮಣಿಪುರದ ಒಟ್ಟು ಜನಸಂಖ್ಯೆಯಲ್ಲಿ ಮೈತೇಯಿ ಸಮುದಾಯದವರು ಸುಮಾರು ಶೇ.53ರಷ್ಟಿದ್ದು, ಅವರು ಮುಖ್ಯವಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಾರೆ. ನಾಗಾ ಮತ್ತು ಕುಕಿ ಸಮುದಾಯಗಳನ್ನು ಒಳಗೊಂಡ ಬುಡಕಟ್ಟು ಜನರು ಸುಮಾರು ಶೇ.40ರಷ್ಟಿದ್ದು, ಮುಖ್ಯವಾಗಿ ಬೆಟ್ಟ ಪ್ರದೇಶದ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.
ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ, ತಿಂಗಳುಗಳ ಕಾಲ ಮುಂದುವರಿದ ಹಿಂಸಾಚಾರದ ಬಳಿಕ ಬಿಜೆಪಿ ನೇತೃತ್ವದ ಬಿರೇನ್ ಸಿಂಗ್ ಸರ್ಕಾರ ಫೆಬ್ರವರಿ 9, 2025ರಂದು ರಾಜೀನಾಮೆ ನೀಡಿತ್ತು. ಇದರ ಬೆನ್ನಲ್ಲೇ ಫೆಬ್ರವರಿ 13ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು.
2027ರವರೆಗೆ ಅವಧಿ ಹೊಂದಿರುವ 60 ಸದಸ್ಯರ ವಿಧಾನಸಭೆಯನ್ನು ರಾಷ್ಟ್ರಪತಿ ಆಳ್ವಿಕೆ ಜಾರಿಯಾದ ಬಳಿಕ ಅಮಾನತುಗೊಳಿಸಲಾಗಿತ್ತು. ಈ ವರ್ಷದ ಫೆಬ್ರವರಿ 4ರಂದು ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಯಿತು. ಕೆಲವೇ ಗಂಟೆಗಳ ಬಳಿಕ ಬಿಜೆಪಿ ನಾಯಕ ವೈ. ಖೇಮ್ಚಂದ್ ಸಿಂಗ್ ಮುಖ್ಯಮಂತ್ರಿಯಾಗಿ ಹೊಸ ರಾಜ್ಯ ಸರ್ಕಾರ ರಚನೆಯಾಯಿತು.