

ತಿರುವನಂತಪುರಂ: ಮಹಿಳೆಯರು ಮನೆಯಲ್ಲೇ ಇರಬೇಕು ಎಂಬ ತಮ್ಮ ಹಿಂದಿನ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇಸ್ಲಾಮಿಕ್ ವಿದ್ವಾಂಸ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.
“ಮಹಿಳೆಯರಿಗೆ ಎರಡನೇ ಸ್ಥಾನ ನೀಡಲಾಗಿದೆ ಎಂದು ಹೇಳುವುದು ಸರಿಯಲ್ಲ. ಮಹಿಳೆಯರನ್ನು ಹೂತುಹಾಕಬೇಕು ಅಥವಾ ಬಂಧಿಸಬೇಕು ಎಂದು ಹೇಳುವವರಲ್ಲ ನಾವು. ಇಸ್ಲಾಂ ಕೂಡ ಅಂತಹ ಯಾವುದೇ ಬೋಧನೆ ನೀಡುವುದಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬೂಬಕರ್ ಮುಸ್ಲಿಯಾರ್, ಮಹಿಳೆಯರನ್ನು ಕೀಳುಮಟ್ಟದಲ್ಲಿ ನೋಡಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ಸೇರಿದಂತೆ ವಿವಿಧ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಸಮಸ್ತ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳು
ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕವಾಗಿ ಹಲವು ಮದರಸಾ ಹಾಗೂ ಶಾಲೆಗಳನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಗಳ ಮೂಲಕ ಹೆಣ್ಣುಮಕ್ಕಳಿಗೆ ನಿರಂತರವಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದು ಕಾಂತಪುರಂ ಹೇಳಿದ್ದಾರೆ.
ಅಲ್ಲದೆ ಇಂತಹ ಸಂಸ್ಥೆಗಳ ಮೂಲಕ ಮಹಿಳೆಯರಿಗೆ ವಿವಿಧ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಅನಾಥ ಹೆಣ್ಣುಮಕ್ಕಳ ಆರೈಕೆಯನ್ನೂ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರು ಮನೆಯಲ್ಲೇ ಇರಬೇಕು ಎಂಬ ಅವರ ಹಿಂದಿನ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ ಎನ್ನಲಾಗಿದೆ.
ಏನು ಹೇಳಿದ್ದರು ಧಾರ್ಮಿಕ ಗುರು?
ಕೇರಳದ ಪ್ರಮುಖ ಸುನ್ನಿ-ಶಾಫಿ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳ ಜಮೀಯತುಲ್ ಉಲಮಾದ ಕಾಂತಪುರಂ ಬಣ ಹೊರಡಿಸಿದ್ದ ಸುತ್ತೋಲೆಯಿಂದ ವಿವಾದ ಆರಂಭವಾಗಿತ್ತು.
ಸಮಸ್ತ ಕೇರಳ ಜಮೀಯತುಲ್ ಉಲಮಾ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಅವರು ಹೊರಡಿಸಿದ್ದ ಸುತ್ತೋಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಚರಣೆಗಳನ್ನು ನಿಗದಿತ ಮಿತಿಗಳೊಳಗೆ ನಡೆಸಬೇಕು ಎಂದು ತಿಳಿಸಲಾಗಿತ್ತು.
ಅಲ್ಲದೆ, ಮಹಿಳೆಯರು ಪುರುಷರೊಂದಿಗೆ ಸಾರ್ವಜನಿಕ ವೇದಿಕೆ ಹಂಚಿಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಈ ನಿರ್ದೇಶನಕ್ಕೆ ಮಹಿಳಾ ರಾಜಕೀಯ ನಾಯಕರೂ ಸೇರಿದಂತೆ ಹಲವು ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಭಾನುವಾರ ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮಾವೇಶವೊಂದರಲ್ಲಿ ಮಾತನಾಡಿದ್ದ ಕಾಂತಪುರಂ, ತಮ್ಮ ನಿಲುವನ್ನು ಸಮರ್ಥಿಸಿಕೊಂಡು, ಇಸ್ಲಾಮಿಕ್ ಪದ್ಧತಿಯಾದ ಪರ್ದಾವನ್ನು ಉಲ್ಲೇಖಿಸಿ ಮಹಿಳೆಯರು ಮನೆಯಲ್ಲೇ ಇರಬೇಕು ಎಂದು ಹೇಳಿದ್ದರು.
ಕೇರಳ ಮುಖ್ಯಮಂತ್ರಿಯಿಂದಲೂ ಟೀಕೆ
ಕಾಂತಪುರಂ ಅವರ ಹೇಳಿಕೆಗೆ ರಾಜಕೀಯ ವಲಯದಿಂದಲೂ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ವತಃ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಈ ನಿಲುವನ್ನು ಹಿಂದುಳಿದ, 19ನೇ ಶತಮಾನದ ಮನಸ್ಥಿತಿ ಎಂದು ಟೀಕಿಸಿದ್ದರು. ಅಲ್ಲದೆ ಪ್ರಗತಿಪರ ಕೇರಳದಲ್ಲಿ ಇಂತಹ ದೃಷ್ಟಿಕೋನಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಅವರು ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ಕಾಂತಪುರಂ ನೇತೃತ್ವದ ಸುನ್ನಿ ಬಣಕ್ಕೆ ಸಂಬಂಧಿಸಿದ ಸಂಘಟನೆಗಳು ಸತೀಶನ್ ವಿರುದ್ಧ ವಾಗ್ದಾಳಿ ನಡೆಸಿ, ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದವು. ಈ ನಡುವೆ, ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುವುದು ಧಾರ್ಮಿಕ ವಿದ್ವಾಂಸರ ಜವಾಬ್ದಾರಿ ಎಂದು ಕಾಂತಪುರಂ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು.
“ನಾವು ಧರ್ಮವನ್ನು ಅಧ್ಯಯನ ಮಾಡಿದ್ದೇವೆ. ಆದ್ದರಿಂದ ಅದರ ಬಗ್ಗೆ ಮಾತನಾಡುವುದು ನಮ್ಮ ಕರ್ತವ್ಯ. ಯಾರೇ ವಿರೋಧಿಸಿದರೂ ನಾವು ಹೇಳುವುದನ್ನು ಹೇಳುತ್ತೇವೆ ಮತ್ತು ಮುಂದೆಯೂ ಹೇಳುತ್ತೇವೆ. ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.