

ಬಸ್ತಾರ್ (ಛತ್ತೀಸ್‌ಗಢ): 2013 ರಲ್ಲಿ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಝೀರಾಮ್ ಕಣಿವೆಯಲ್ಲಿ (Jhiram Valley) ನಡೆದ ಭೀಕರ ಮಾವೋವಾದಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯವು ಎಲ್ಲಾ 10 ಮಂದಿ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. ಜಗದಲ್‌ಪುರದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಸಿಂಗ್ ರಜಪೂತ್ ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಈ ಭೀಕರ ಘಟನೆ 2013ರ ಮೇ 25 ರಂದು ಬಸ್ತಾರ್‌ನ ಝೀರಂ ಕಣಿವೆಯಲ್ಲಿ ನಡೆದಿತ್ತು. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪರಿವರ್ತನ ಯಾತ್ರೆ ಕೈಗೊಂಡಿದ್ದರು. ಸುಮಾರು 250 ಮಂದಿ ಸಶಸ್ತ್ರ ನಕ್ಸಲರು ಸಾಮಾನ್ಯ ನಾಗರಿಕರ ವೇಷದಲ್ಲಿ ಬಂದು ಹಠಾತ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ನಂದಕುಮಾರ್ ಪಟೇಲ್ ಮತ್ತು ಅವರ ಪುತ್ರ ದಿನೇಶ್ ಪಟೇಲ್, ಮಾಜಿ ವಿರೋಧ ಪಕ್ಷದ ನಾಯಕ ಮಹೇಂದ್ರ ಕರ್ಮಾ, ಮಾಜಿ ಕೇಂದ್ರ ಸಚಿವ ವಿ.ಸಿ. ಶುಕ್ಲಾ, ಮಾಜಿ ಶಾಸಕ ಉದಯ್ ಮುದ್ಲಿಯಾರ್ ಸೇರಿದಂತೆ 11 ಹಿರಿಯ ನಾಯಕರು ಮತ್ತು ಭದ್ರತಾ ಸಿಬ್ಬಂದಿ ಸೇರಿ ಒಟ್ಟು 29 ಜನರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಜೊತೆಗೆ, 30ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು.
ದಾಳಿಯಲ್ಲಿ ಹುತಾತ್ಮರಾದ ಪ್ರಮುಖ ನಾಯಕರು:
ಮಹೇಂದ್ರ ಕರ್ಮಾ: ನಕ್ಸಲ್ ವಿರೋಧಿ ಆಂದೋಲನವಾದ ಸಲ್ವಾ ಜುಡುಮ್ ಸಂಸ್ಥಾಪಕ ಮತ್ತು ಮಾಜಿ ವಿರೋಧ ಪಕ್ಷದ ನಾಯಕ. ನಕ್ಸಲರ ಮುಖ್ಯ ಗುರಿ ಇವರೇ ಆಗಿದ್ದರು.
ನಂದಕುಮಾರ್ ಪಟೇಲ್: ಅಂದಿನ ಛತ್ತೀಸ್‌ಗಢ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು. ಇವರ ಜೊತೆಗೆ ಇವರ ಮಗ ದಿನೇಶ್ ಪಟೇಲ್ ಕೂಡ ಕೊಲ್ಲಲ್ಪಟ್ಟರು.
ವಿದ್ಯಾಚರಣ್ ಶುಕ್ಲಾ: ಕೇಂದ್ರದ ಮಾಜಿ ಸಚಿವರು ಮತ್ತು ಹಿರಿಯ ರಾಜಕಾರಣಿ. ಇವರಿಗೆ ತೀವ್ರ ಗುಂಡೇಟು ಬಿದ್ದಿದ್ದರಿಂದ, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಇನ್ನು, ಈ ಘಟನೆ ನಡೆದು ಒಂದು ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. ಆರಂಭದಲ್ಲಿ ಬಸ್ತಾರ್ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು, ನಂತರ ಇದನ್ನು ಎನ್‌ಐಎಗೆ ವಹಿಸಲಾಯಿತು. ಎನ್‌ಐಎ ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ 101 ಸಾಕ್ಷಿಗಳನ್ನು ಮತ್ತು ಭಾರಿ ಪ್ರಮಾಣದ ವಿಧಿವಿಜ್ಞಾನ ಪುರಾವೆಗಳನ್ನು ಮಂಡಿಸಿ ಆರೋಪಿಗಳ ಮೇಲಿನ ಅಪರಾಧವನ್ನು ಸಾಬೀತುಪಡಿಸಿದೆ. ಅದರಂತೆ, ಇದೀಗ ನ್ಯಾಯಾಲಯವು ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದು, ಅವರಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 16, 2026 ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಅಪರಾಧಿಗಳು ಯಾರು?
ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಸಿಂಗ್ ರೆಂಪುತ್ ಅವರು ಇಬ್ಬರು ಮಹಿಳೆಯರು ಸೇರಿದಂತೆ ಎಲ್ಲಾ 10 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಿದ್ದಾರೆ.
ಅದರಂತೆ, ಅಪರಾಧಿಗಳ ಪಟ್ಟಿ ಇಲ್ಲಿದೆ....
ಪ್ರಮೀಳಾ ಮೋಡಿಯಂ, ಚೈತು ಲೇಕಮ್ (ಅಲಿಯಾಸ್ ಮುನ್ನಾ), ಸುಮಿತ್ರಾ (ಅಲಿಯಾಸ್ ಪುನೆಮ್ ಮೋಡಿಯಂ), ಮುಕ್ಕಾ ಮಾಂಡ್ವಿ, ಕೋಸಾ ಕಾವಾಸಿ (ಅಲಿಯಾಸ್ ಕೋಸಾರಾಮ್), ಆಯತಾ ಮಾರ್ಕಮ್, ಮಡ್ಕಮಿ ದೇವಾ, ಜೋಗಾ ಮಡ್ಕಮಿ, ಬಂಜಾಮಿ ಅಣ್ಣಾ (ಅಲಿಯಾಸ್ ಚಮ್ರು), ಮತ್ತು ಮಹಾದೇವ್ ನಾಗ್.