

ನವದೆಹಲಿ: ಅನುಮತಿಯಿಲ್ಲದೆ ಮೊರಾದಾಬಾದ್ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ನಮಾಜ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸ್ಥಳೀಯ ಸಮಾಜವಾದಿ ಪಕ್ಷದ ಮುಖಂಡ ಮೊಹಮ್ಮದ್ ಉಸ್ಮಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಉಸ್ಮಾನ್, ಬಿಲಾರಿಯ ಸಮಾಜವಾದಿ ಪಕ್ಷದ ಶಾಸಕ ಮೊಹಮ್ಮದ್ ಫಹೀಮ್ ಇರ್ಫಾನ್ ಅವರ ಸಂಬಂಧಿಯೂ ಆಗಿದ್ದಾರೆ. ಸರ್ಕ್ಯೂಟ್ ಹೌಸ್‌ನ ಉಸ್ತುವಾರಿ ಕಿರಿಯ ಎಂಜಿನಿಯರ್ ಅನಿಲ್ ಕುಮಾರ್ ನೀಡಿದ ದೂರಿನ ಮೇರೆಗೆ ಮಜೋಲಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಸರ್ಕ್ಯೂಟ್ ಹೌಸ್ ಆವರಣದಲ್ಲಿ ಉಸ್ಮಾನ್ ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವಿಡಿಯೋವನ್ನು ಗಮನಿಸಿದ ಹಿಂದೂ ಸಂಘಟನೆಗಳು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮಕ್ಕೆ ಆಗ್ರಹಿಸಿದ್ದವು.
ಉಸ್ಮಾನ್ ಸರ್ಕ್ಯೂಟ್ ಹೌಸ್ ಪ್ರವೇಶಿಸುವ ದಾರಿಯಲ್ಲಿ ಕಾರನ್ನು ನಿಲ್ಲಿಸಿ ಅಲ್ಲಿ ನಮಾಜ್ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದಲ್ಲದೆ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು. ಅವರು ಎಂಎಲ್‌ಸಿ (MLC) ಚುನಾವಣೆ ಸಂಬಂಧ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಮಾಜವಾದಿ ಪಕ್ಷದ ನಾಯಕರ ಸಭೆಯಲ್ಲೂ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಸಾರ್ವಜನಿಕ ಮಾರ್ಗದಲ್ಲಿ ಅಪಾಯ ಅಥವಾ ಅಡ್ಡಿ ಉಂಟುಮಾಡುವುದು (ಬಿಎನ್‌ಎಸ್ ಸೆಕ್ಷನ್ 285) ಮತ್ತು ಸಾರ್ವಜನಿಕ ಸೇವಕರ ಆದೇಶ ಅಥವಾ ನಿಷೇಧದ ನಂತರವೂ ಸಾರ್ವಜನಿಕ ಉಪದ್ರವವನ್ನು ಮುಂದುವರಿಸುವುದು (ಬಿಎನ್‌ಎಸ್ ಸೆಕ್ಷನ್ 293) - ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಮತ್ತೊಂದೆದೆ ಉಸ್ಮಾನ್ ವಿರುದ್ಧ ಎಫ್ ಐಆರ್ ದಾಖಲು ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಮೊರಾದಾಬಾದ್‌ನ ಸರ್ಕ್ಯೂಟ್ ಹೌಸ್ ಆವರಣದಲ್ಲಿರುವ ಈ ರಸ್ತೆಯ ಮೂಲಕ ಯೋಗಿಯವರ ಆ 'ಅದೃಶ್ಯ ರಾಕ್ಷಸರ ಪಡೆ' ಸಾಗುತ್ತಿರಬೇಕು. ಆಗ, ತಮ್ಮ ದೇವರ ಮುಂದೆ ಶಾಂತಿಯುತವಾಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದ, ಯಾವುದೇ ಹಾನಿ ಉಂಟುಮಾಡದ ಈ ವೃದ್ಧನಿಂದಾಗಿ ಅವರಿಗೆ ಅಡಚಣೆ ಉಂಟಾಗಿರಬೇಕು ಎಂದಿದ್ದಾರೆ.
ಬಹುಶಃ ಇದೇ ಕಾರಣಕ್ಕಾಗಿಯೇ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 285 (ಸಾರ್ವಜನಿಕ ದಾರಿಯಲ್ಲಿ ಅಪಾಯ ಅಥವಾ ಅಡಚಣೆ) ಮತ್ತು ಸೆಕ್ಷನ್ 292 (ಸಾರ್ವಜನಿಕ ಉಪದ್ರವ) ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಉಸ್ಮಾನ್"ಅಪರಾಧ"ವೇನು? ಹಾಜಿ ಮೊಹಮ್ಮದ್ ಉಸ್ಮಾನ್ - ಸಮಾಜವಾದಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರು ಮತ್ತು ಬಿಲಾರಿ ಕ್ಷೇತ್ರದ ಶಾಸಕ ಮೊಹಮ್ಮದ್ ಫಹೀಮ್ ಇರ್ಫಾನ್ ಅವರ ಚಿಕ್ಕಪ್ಪ; ಜೊತೆಗೆ ಅವರು ಒಬ್ಬ ಮುಸ್ಲಿಂ. ಎಂತಹ ಅವಮಾನಕರ ಸಂಗತಿ ಎಂದು ಕಿಡಿಕಾರಿದ್ದಾರೆ.