

ಲಖನೌ: ಹಿಂದೂ ದೇವರ ಆರಾಧ್ಯ ದೈವ ಶ್ರೀಕೃಷ್ಣನು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ ಎಂಬ ಉತ್ತರ ಪ್ರದೇಶದ ಮುಸ್ಲಿಂ ಮೌಲ್ವಿ ಮೌಲಾನಾ ಜಾರ್ಜಿಸ್ ಅನ್ಸಾರಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಅಲ್ಲದೇ, ಶ್ರೀರಾಮನ ಭಕ್ತರೆಂದು ಖ್ಯಾತರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಖುರಾನ್ ಓದಿದರೆ, ಅವರು ಇಸ್ಲಾಂ ಧರ್ಮವನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ ಎಂದಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಮೌಲಾನಾ ಅವರ ಈ ಹೇಳಿಕೆಯ ವಿಡಿಯೋ ವೈರಲ್ ಆದ ನಂತರ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಲಖನೌದಲ್ಲಿ ಹಿಂದೂ ಮಹಾಸಭೆಯು ಮೌಲ್ವಿಯ ಪೋಟೋವನ್ನು ಕಾಲಿನಿಂದ ತುಳಿದು ಪ್ರತಿಭಟನೆ ನಡೆಸಿತು . ಅಲ್ಲದೇ ಅವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
ಅಯೋಧ್ಯೆಯ ಸ್ವಾಮೀಜಿ ವಿಷ್ಣು ದಾಸ್ ಈ ಹೇಳಿಕೆಯನ್ನು ಖಂಡಿಸಿದ್ದು, ಮೌಲಾನಾ ಜಾರ್ಜಿಸ್ ಅನ್ಸಾರಿ ಅವರ ನಾಲಿಗೆಯನ್ನು ಕತ್ತರಿಸಿ ಕೊಡುವವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಇತ್ತೀಚಿಗೆ ಜಾರ್ಖಂಡ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೌಲ್ವಿ ಮೌಲಾನಾ ಜಾರ್ಜಿಸ್ ಅನ್ಸಾರಿ, ಹಿಂದೂಗಳು ಪೂಜೆಸುವ ಶ್ರೀಕೃಷ್ಣನು ಇಸ್ಲಾಮಿನ ಪ್ರವಾದಿಯಾಗಿದ್ದರು. ಅವರು ನಿತ್ಯವೂ ನಮಾಜ್ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದರು.
ಇಂತಹ ಹೇಳಿಕೆಗಳು ಹೊಸದೇನಲ್ಲ. ಈ ಹಿಂದೆಯೂ ಅರ್ಶದ್ ಮದನಿ ಅವರು ಭಗವಾನ್ ಶಿವನ ಕುರಿತು ಹೇಳಿಕೆಗಳನ್ನು ನೀಡಿದ್ದರು. ಮೌಲಾನಾ ಜಾರ್ಜಿಸ್ ಅವರಂತಹವರು ಹಲವು ಬಾರಿ ಮಿತಿ ಮೀರಿದ್ದಾರೆ. ಆದರೆ ಅವರಿಗೆ ಯಾವುದೇ ಮುಜುಗರವಾಗುವುದಿಲ್ಲ. ಅವರ ಬಗ್ಗೆ ಯಾರಾದರೂ ಮಾತನಾಡಿದರೆ ಅವರ ಸಮುದಾಯದ ಗುಂಪುಗಳು ತಕ್ಷಣವೇ ಪ್ರತಿಕ್ರಿಯಿಸುತ್ತವೆ; ಆದರೆ ನಮ್ಮ ದೇವತೆಗಳ ಬಗ್ಗೆ ಇಂತಹ ಟೀಕೆಗಳನ್ನು ಮಾಡುವುದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಒತ್ತಾಯಿಸಿದ್ದಾರೆ.