ದೆಹಲಿ ಕಟ್ಟಡ ದುರಂತ: ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

ಪ್ರಕರಣದಲ್ಲಿ ಅಪರಾಧಪೂರ್ವಕ ನಿರ್ಲಕ್ಷ್ಯದಿಂದ ಸಾವು ಸಂಭವಿಸಲು ಕಾರಣವಾದ ಆರೋಪ, ಕಟ್ಟಡ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಇತರರ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಮಾಲೀಕನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Rescue workers continue to search for people trapped under the debris of a collapsed building in New Delhi, India, Monday, Sept. 7, 2026.
ರಕ್ಷಣಾ ಕಾರ್ಯಾಚರಣೆ.
Updated on

ನವದೆಹಲಿ: ದೆಹಲಿಯ ಸತ್ಯ ನಿಕೇತನದಲ್ಲಿ ಭಾನುವಾರ ಸಂಭವಿಸಿರುವ ಐದು ಅಂತಸ್ತಿನ ಪಿಜಿ (Paying Guest) ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಕಟ್ಟಡದ ಮಾಲೀಕ ಹರಿರಾಮ್ ಬನ್ಸಾಲ್ ವಿರುದ್ಧ ಪೊಲೀಸರು 'ಲುಕ್‌ಔಟ್ ನೋಟಿಸ್' (LOC) ಜಾರಿಗೊಳಿಸಿದ್ದು, ಆತ ದೇಶ ಬಿಟ್ಟು ಓಡಿಹೋಗದಂತೆ ವಿಮಾನ ನಿಲ್ದಾಣಗಳಿಗೆ ಕಟ್ಟೆಚ್ಚರ ನೀಡಲಾಗಿದೆ.

ಪ್ರಕರಣದಲ್ಲಿ ಅಪರಾಧಪೂರ್ವಕ ನಿರ್ಲಕ್ಷ್ಯದಿಂದ ಸಾವು ಸಂಭವಿಸಲು ಕಾರಣವಾದ ಆರೋಪ, ಕಟ್ಟಡ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಇತರರ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಮಾಲೀಕನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದೇ ವೇಳೆ ಕಟ್ಟಡ ಕುಸಿತಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್‌ ಸೋಮವಾರ ಒಪ್ಪಿಗೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್‌ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್‌ ಕಾರಿಯಾ ಅವರ ಪೀಠದ ಮುಂದೆ ಅರ್ಜಿಯನ್ನು ಪ್ರಸ್ತಾಪಿಸಲಾಗಿತ್ತು.

ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್‌ ಸಮೀಪದಲ್ಲಿರುವ ಕಟ್ಟಡ ಭಾನುವಾರ ಮಧ್ಯಾಹ್ನ ಸುಮಾರು 1.30ಕ್ಕೆ ಕುಸಿದಿತ್ತು.

ನೆಲಮಹಡಿಯಲ್ಲಿ ದುರಸ್ತಿ ಮತ್ತು ನವೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯವಾಗಿ ‘ಹಾಸ್ಟೆಲ್‌ ಡೇಝ್‌’ ಎಂದು ಕರೆಯಲಾಗುತ್ತಿದ್ದ ಕಟ್ಟಡವನ್ನು ದಕ್ಷಿಣ ಕ್ಯಾಂಪಸ್‌ನ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಬಾಲಕರ ಪಿಜಿಯಾಗಿ ಬಳಸಲಾಗುತ್ತಿತ್ತು.

Rescue workers continue to search for people trapped under the debris of a collapsed building in New Delhi, India, Monday, Sept. 7, 2026.
ದೆಹಲಿ ಹಾಸ್ಟೆಲ್ ದುರಂತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ; 11 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಈ ನಡುವೆ ಸೋಮವಾರವೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ದೆಹಲಿ ಅಗ್ನಿಶಾಮಕ ದಳ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸರು ಸೇರಿದಂತೆ ವಿವಿಧ ತಂಡಗಳು ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸಿವೆ.

ಈವರೆಗೂ ಕನಿಷ್ಠ 11 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಯಾರಾದರೂ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಇನ್ನೋರ್ವ ಕಾರ್ಮಿಕ ಅವಶೇಷಗಳಡಿ ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ.

ಏತನ್ಮಧ್ಯೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಶೇ.80ರಷ್ಟು ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ನೆಲಮಹಡಿ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಪಕ್ಕದ ಕಟ್ಟಡವೂ ಅಪಾಯಕಾರಿ ಎಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದನ್ನು ಖಾಲಿ ಮಾಡಿಸಲಾಗಿದ್ದು, ಕುಸಿದ ಕಟ್ಟಡದ ಅವಶೇಷ ತೆರವುಗೊಂಡ ಬಳಿಕ ಪಕ್ಕದ ಕಟ್ಟಡವನ್ನು ನೆಲಸಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ ಸುತ್ತಮುತ್ತಲಿನ ಪಿಜಿ ವಸತಿ ಹಾಗೂ ಇತರ ಕಟ್ಟಡಗಳ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಿಜಿ, ನರ್ಸಿಂಗ್‌ ಹೋಮ್‌, ಶಾಲೆಗಳು ಸೇರಿದಂತೆ ಸಾರ್ವಜನಿಕ ಬಳಕೆಯ ಕಟ್ಟಡಗಳಿಗೆ ನಿಯಮಿತವಾಗಿ ರಚನಾತ್ಮಕ ಸುರಕ್ಷತಾ ಪರಿಶೀಲನೆ ನಡೆಸಿ, ಸುರಕ್ಷತಾ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸುವ ನೀತಿಯನ್ನು ದೆಹಲಿ ಸರ್ಕಾರ ಸಿದ್ಧಪಡಿಸುತ್ತಿದೆ.

ಇದರ ನಡುವೆ, ನಾಲ್ಕು ಅಂತಸ್ತಿಗಿಂತ ಹೆಚ್ಚಿನ ಅಕ್ರಮ ಕಟ್ಟಡಗಳನ್ನು ತಕ್ಷಣ ಸೀಲ್‌ ಮಾಡುವಂತೆ ದೆಹಲಿ ಮಹಾನಗರ ಪಾಲಿಕೆ ಆದೇಶಿಸಿದೆ. ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ದೆಹಲಿ ಪರಿಸರ ಸಚಿವ ಮಂಜಿಂದರ್‌ ಸಿಂಗ್‌ ಸಿರ್ಸಾ ಮಾತನಾಡಿ, ಪಕ್ಕದ ಕಟ್ಟಡದ ಅಸ್ಥಿರ ಸ್ಥಿತಿಯಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಸುಮಾರು 40ರಿಂದ 50 ವರ್ಷ ಹಳೆಯದಾದ ಪಕ್ಕದ ಕಟ್ಟಡವನ್ನು ಖಾಲಿ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಅವಶೇಷ ತೆರವುಗೊಳಿಸುವ ಸಂದರ್ಭದಲ್ಲಿ ಪಕ್ಕದ ಕಟ್ಟಡಕ್ಕೆ ಮತ್ತಷ್ಟು ಹಾನಿಯಾಗದಂತೆ ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಿರ್ಸಾ ಹೇಳಿದ್ದಾರೆ.

ಕಟ್ಟಡ ಕುಸಿತದಿಂದ ಸತ್ಯ ನಿಕೇತನ ಸುತ್ತಮುತ್ತ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಸಫ್ದರ್‌ಜಂಗ್‌ ಆಸ್ಪತ್ರೆಯಿಂದ ಧೌಲಾ ಕುವಾನ್‌, ಆರ್‌ಟಿಆರ್‌ ಹಾಗೂ ಬೆನಿಟೊ ಜುವಾರೆಜ್‌ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ತಪ್ಪಿಸುವಂತೆ ದೆಹಲಿ ಸಂಚಾರ ಪೊಲೀಸರು ವಾಹನ ಸವಾರರಿಗೆ ಸೂಚಿಸಿದ್ದಾರೆ.

ಆಂಬ್ಯುಲೆನ್ಸ್‌ ಹಾಗೂ ರಕ್ಷಣಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸ್ಥಳದ ಬಳಿ ಜನರು ಗುಂಪುಗೂಡದಂತೆ ಮನವಿ ಮಾಡಲಾಗಿದೆ.

ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್‌ ಪಕ್ಕದಲ್ಲಿರುವ ಸತ್ಯ ನಿಕೇತನದಲ್ಲಿ ಹಳೆಯ ಕಟ್ಟಡಗಳ ಸುರಕ್ಷತೆ ಕುರಿತು ಈ ಘಟನೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಟ್ಟ ಜನಸಂಖ್ಯೆಯ ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ವಸತಿ ಕಟ್ಟಡಗಳನ್ನು ಪಿಜಿ ಹಾಗೂ ಖಾಸಗಿ ಹಾಸ್ಟೆಲ್‌ಗಳಾಗಿ ಪರಿವರ್ತಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com