

ವಡೋದರಾ: ಇದೇ ಮೊದಲ ಬಾರಿಗೆ ಗುಜರಾತ್ ನ ವಡೋದರಾದಲ್ಲಿ ಮಂಗಳವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಬುಕ್‌ಮೈಶೋ ಈವೆಂಟ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಮೂಲಕ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಒಂದು ಗಂಟೆಯೊಳಗೆ ಎಲ್ಲಾ ಸೀಟುಗಳನ್ನು ಕಾಯ್ದಿರಿಸಲಾಗಿದೆ.
ಗುಜರಾತ್ ನಲ್ಲಿ 35,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ನಾಳೆ ಶಿಲಾನ್ಯಾಸ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
ಇದೇ ಮೊದಲ ಬಾರಿಗೆ, ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಬುಕ್‌ಮೈಶೋ ಮೂಲಕ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ವಡೋದರಾ ಮುನ್ಸಿಪಲ್ ಕಾರ್ಪೊರೇಷನ್(ವಿಎಂಸಿ) ನೋಂದಣಿಗಳನ್ನು ನಿರ್ವಹಿಸಲು ಖಾಸಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ನೋಂದಣಿ ಪ್ರಾರಂಭವಾದ ಒಂದು ಗಂಟೆಯೊಳಗೆ ಎಲ್ಲಾ ಸೀಟುಗಳು ಬುಕ್ ಆಗಿದ್ದು, ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನೂ ಸುಮಾರು 42,000ಕ್ಕೂ ಹೆಚ್ಚು ಜನರು ವೇಯ್ಟಿಂಗ್ ಲಿಸ್ಟ್ನಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ತಂತ್ರಜ್ಞಾನ ಆಧಾರಿತ ಡಿಜಿಟಲ್ ಪ್ರವೇಶ ವ್ಯವಸ್ಥೆಯನ್ನು ಹೊಂದಿರಲಿದೆ. ನೋಂದಾಯಿತ ಸಾರ್ವಜನಿಕರು ತಮ್ಮ ಬುಕ್‌ಮೈಶೋ ಖಾತೆಯಲ್ಲಿ ಕ್ಯೂಆರ್ ಕೋಡ್ ಹೊಂದಿರುವ ‘ಎಂ-ಟಿಕೆಟ್’ ಪಡೆಯಲಿದ್ದಾರೆ. ಪ್ರವೇಶ ದ್ವಾರದಲ್ಲಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪರಿಶೀಲಿಸಲಾಗುತ್ತದೆ. ನಂತರವೇ ಜನರನ್ನು ಒಳಗೆ ಬಿಡಲಾಗುತ್ತದೆ.