

ಮುಂಬೈ: ಅಶುಚಿತ್ವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಇಸ್ಕಾನ್ ದೇವಾಲಯದ ಕಿಚನ್ ಲೈಸೆನ್ಸ್ ನ್ನು ರದ್ದುಗೊಳಿಸಲಾಗಿದೆ. ನಿರಂತರ ತಪಾಸಣೆಯ ಭಾಗವಾಗಿ ಆಹಾರ ಮತ್ತು ಔಷಧ ಆಡಳಿತ (FDA) ಮುಂಬೈನ ಜುಹು ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯದ ಅಡುಗೆಮನೆಯ ಮೇಲೂ ದಾಳಿ ನಡೆಸಿದೆ.
FDA ಪರಿಶೀಲಿಸಿದ ಸ್ಥಳಗಳಲ್ಲಿ ಜುಹುವಿನ ಪ್ರಭು ರಾಧಾ ಕೃಷ್ಣ ಇಸ್ಕಾನ್ ದೇವಾಲಯದ ಅಡುಗೆಮನೆಯೂ ಸೇರಿದೆ. ದೇವಾಲಯದ 'ಗೋವಿಂದ ರೆಸ್ಟೋರೆಂಟ್'ನ ಕಿಚನ್ ನಲ್ಲಿ ಹಲವು ಲೋಪದೋಷಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದವುಗಳಾಗಿವೆ.
ಪರಿಶೀಲನೆಯ ನಂತರ, ರೆಸ್ಟೋರೆಂಟ್‌ಗೆ ನೋಟಿಸ್ ಜಾರಿಗೊಳಿಸಲಾಯಿತು ಮತ್ತು ಅದರ ಲೈಸೆನ್ಸ್ ರದ್ದುಪಡಿಸಲಾಯಿತು. ಈ ಪರಿಶೀಲನೆಗೆ ಪ್ರತಿಕ್ರಿಯಿಸಿರುವ ಇಸ್ಕಾನ್, ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ಬದ್ಧವಾಗಿರುವುದಾಗಿ ತಿಳಿಸಿದೆ.
ಅಗತ್ಯವಿರುವ ಎಲ್ಲಾ ಮಾನದಂಡಗಳು ಮತ್ತು ನಿಯಮಗಳನ್ನು ಮತ್ತೆ ಪೂರೈಸುವವರೆಗೆ ಅಡುಗೆಮನೆಯು ಮುಚ್ಚಲ್ಪಟ್ಟಿರುತ್ತದೆ ಎಂದು ಇಸ್ಕಾನ್ ಹೇಳಿದೆ.