

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಕ್ತಪಾತದ ಭೀತಿ ಶುರುವಾಗಿದೆ. ಕಣಿವೆ ರಾಜ್ಯದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ವಿರುದ್ಧ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ (LeT) ತನ್ನ ಅಂಗಸಂಸ್ಥೆಯ ಮೂಲಕ ಮತ್ತೊಂದು ಜೀವ ಬೆದರಿಕೆ ನೀಡಿದೆ.
ಉದ್ಯೋಗಕ್ಕೆ ತಕ್ಷಣ ರಾಜೀನಾಮೆ ನೀಡಿ, ಇಲ್ಲದಿದ್ದರೆ ಹೆಣದ ಚೀಲಗಳನ್ನು ನಿಮ್ಮ ಸ್ವಂತ ಊರುಗಳಿಗೆ ಕಳುಹಿಸುತ್ತೇವೆ" ಎಂದು ಉಗ್ರರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಉಗ್ರರ ಬೆದರಿಕೆಯಿಂದ ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್ (PMRP) ಅಡಿಯಲ್ಲಿ ಕೆಲಸ ಮಾಡುತ್ತಿರುವ 7,000ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತ್ ನೌಕರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ನಡುವೆ ಬೆನ್ನಲ್ಲೇ ಉದ್ಯೋಗಿಗಳ ವೈಯಕ್ತಿಕ ಮಾಹಿತಿಯೂ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ ಎನ್ನಲಾಗಿದ್ದು, ಭದ್ರತಾ ಪರಿಶೀಲನೆ, ಎಫ್‌ಐಆರ್ ದಾಖಲಿಸುವುದು ಹಾಗೂ ಪಂಡಿತ ಉದ್ಯೋಗಿಗಳಿಗೆ ಹೆಚ್ಚಿನ ರಕ್ಷಣೆ ನೀಡುವಂತೆ ಆಗ್ರಹಗಳು ಕೇಳಿಬಂದಿವೆ.
ಲಷ್ಕರ್-ಇ-ತೊಯ್ಬಾ (LeT) ಜೊತೆ ಸಂಪರ್ಕ ಹೊಂದಿದೆ ಎನ್ನಲಾದ ಯುನೈಟೆಡ್ ಲಿಬರೇಶನ್ ಕೌನ್ಸಿಲ್ (ULC/ULF) ಹೆಸರಿನಲ್ಲಿ ಹೊರಬಂದಿರುವ ಹೊಸ ಬೆದರಿಕೆ ಪತ್ರಗಳು ಕಾಶ್ಮೀರ ಕಣಿವೆಯಲ್ಲಿರುವ ಸುಮಾರು 7 ಸಾವಿರ ಕಾಶ್ಮೀರಿ ಪಂಡಿತ ಪ್ರಧಾನಮಂತ್ರಿ ಪ್ಯಾಕೇಜ್ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿವೆ.
ಖಾಸಗಿ ದೂರವಾಣಿ ಸಂಖ್ಯೆಗಳು, ಮನೆ ವಿಳಾಸಗಳು ಹಾಗೂ ವಾಹನ ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿದೆ ಎನ್ನಲಾಗಿದ್ದು, ಉದ್ಯೋಗ ತೊರೆಯಬೇಕು, ಇಲ್ಲವಾದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಈ ಕುರಿತು ಮುಂಬೈ ಮೂಲದ, ಶ್ರೀನಗರದಲ್ಲಿ ಕುಟುಂಬ ಹೊಂದಿರುವ ಕಾಶ್ಮೀರಿ ಪಂಡಿತರೊಬ್ಬರು ಮಾತನಾಡಿ, 1990ರ ದಶಕದಲ್ಲೂ ಇದೇ ರೀತಿಯ ವಿಧಾನವನ್ನು ಅವರು ಅನುಸರಿಸುತ್ತಿದ್ದರು. ಆಗ ಇಂಟರ್ನೆಟ್ ಇರಲಿಲ್ಲ. ಹೆಸರುಗಳ ಪಟ್ಟಿಯನ್ನು ಟೈಪ್ ಮಾಡಿ ಗೋಡೆಗಳ ಮೇಲೆ ಅಂಟಿಸುತ್ತಿದ್ದರು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 1ರಂದು ಬಂದಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರ ಭದ್ರತಾ ಪರಿಸ್ಥಿತಿ ಕುರಿತು ಕಾಶ್ಮೀರಿ ಪಂಡಿತರ ಸಂಘಟನೆಗಳು ಹಾಗೂ ಕಣಿವೆಯಲ್ಲಿ ಕುಟುಂಬಗಳನ್ನು ಹೊಂದಿರುವ ಸಮುದಾಯದ ಸದಸ್ಯರೊಂದಿಗೆ ಮಾಹಿತಿ ಸಂಗ್ರಹಿಸಲಾಗಿದೆ.
ಕಾಶ್ಮೀರಿ ಪಂಡಿತರ ಸಂಘಟನೆ (KPA) ಮತ್ತು ಆಲ್ ಇಂಡಿಯಾ ಕಾಶ್ಮೀರಿ ಸಮಾಜ (AIKS) ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿವೆ. ಆದರೆ, ಕಣಿವೆಯಲ್ಲಿ ಕುಟುಂಬಗಳನ್ನು ಹೊಂದಿರುವ ಕೆಲವು ಕಾಶ್ಮೀರಿ ಪಂಡಿತರು ಇತ್ತೀಚಿನ ದಿನಗಳಲ್ಲಿ ಇಂತಹ ಬೆದರಿಕೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನೆಲೆಸಿರುವ, ಜಮ್ಮುವಿನಲ್ಲಿ ಕುಟುಂಬ ಹೊಂದಿರುವ ಕಾಶ್ಮೀರಿ ಪಂಡಿತ ವಕೀಲರೊಬ್ಬರು ಮಾತನಾಡಿ, ನನ್ನ ಕುಟುಂಬ ಸರ್ಕಾರಿ ಉದ್ಯೋಗದಲ್ಲಿಲ್ಲ. ನಮ್ಮದು ವ್ಯಾಪಾರಸ್ಥ ಕುಟುಂಬ. ಈ ಬಾರಿ ಬೆದರಿಕೆ ಸರ್ಕಾರಿ ಉದ್ಯೋಗಿಗಳ ವಿರುದ್ಧವಾಗಿದೆ. ಆದರೆ, ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಸುರಕ್ಷತೆ ಇಲ್ಲ ಎಂಬುದನ್ನು ಇದು ಬದಲಿಸುವುದಿಲ್ಲ. ಕಣಿವೆಯಲ್ಲಿ ಇಂತಹ ಬೆದರಿಕೆಗಳು ಸಾಮಾನ್ಯವಾಗಿವೆ” ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 7ರಂದು ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಬಾ ಕೌಲ್ ಅವರು ಎಕ್ಸ್‌ನಲ್ಲಿ ಈ ಬೆಳವಣಿಗೆಯನ್ನು “ಭಾರೀ ಮತ್ತು ಆತಂಕಕಾರಿ ಭದ್ರತಾ ಬಿಕ್ಕಟ್ಟು” ಎಂದು ಬಣ್ಣಿಸಿದ್ದಾರೆ.
ULC, ಪ್ರಧಾನಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ ಉದ್ಯೋಗಿಗಳಿಗೆ ನೇರ ಬೆದರಿಕೆ ಹಾಕಿದೆ ಎಂದು ಅವರು ಆರೋಪಿಸಿದ್ದಾರೆ.
ಖಾಸಗಿ ದೂರವಾಣಿ ಸಂಖ್ಯೆಗಳು, ಮನೆ ವಿಳಾಸಗಳು ಹಾಗೂ ವಾಹನ ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿದ್ದು, ಉದ್ಯೋಗಿಗಳು ಕೆಲಸ ತೊರೆಯಬೇಕು ಅಥವಾ ಮಾರಣಾಂತಿಕ ಪರಿಣಾಮ ಎದುರಿಸಬೇಕು ಎಂದು ಎಚ್ಚರಿಸಲಾಗಿದೆ ಎಂದು ಕೌಲ್ ಹೇಳಿದ್ದಾರೆ.
ಈ “ಗಂಭೀರ ಮಾಹಿತಿ ಸೋರಿಕೆ” ಕುರಿತು ತನಿಖೆ ನಡೆಸಿ, ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಅವರು ಮನವಿ ಮಾಡಿದ್ದಾರೆ.
ಇದಕ್ಕೂ ಒಂದು ದಿನ ಮೊದಲು, ಪ್ರಧಾನಮಂತ್ರಿ ಪ್ಯಾಕೇಜ್ ಉದ್ಯೋಗಿ ಹಾಗೂ ಆಲ್ ಪಿಎಂ ಪ್ಯಾಕೇಜ್ ಎಂಪ್ಲಾಯೀಸ್ ಅಸೋಸಿಯೇಷನ್‌ನ ಕಾರ್ಯಕರ್ತ ಎಂದು ಹೇಳಿಕೊಂಡಿರುವ ರಾಕೇಶ್ ಹಂಡೂ ಅವರು ಪ್ರಧಾನಿ ಮೋದಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಜಮ್ಮು-ಕಾಶ್ಮೀರ ಪೊಲೀಸರ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದರು.
ಸೆಪ್ಟೆಂಬರ್ 5ರಂದು ULC ಹೆಸರಿನಲ್ಲಿ ಹೊರಬಂದಿದೆ ಎನ್ನಲಾದ ಬೆದರಿಕೆ ಪತ್ರದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಸ್ಥಳೀಯರಲ್ಲದ ಉದ್ಯೋಗಿಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಹಾಗೂ ಲಿಂಗ ಅಥವಾ ಹುದ್ದೆ ಯಾವುದೇ ಆಗಿದ್ದರೂ ದಾಳಿ ನಡೆಸುವುದಾಗಿ ಪತ್ರದಲ್ಲಿ ಎಚ್ಚರಿಸಲಾಗಿದೆ ಎಂದು ರಾಕೇಶ್ ಹಂಡೂ ಹೇಳಿದ್ದಾರೆ.
ಮೃತದೇಹಗಳನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲಾಗುವುದು” ಎಂಬ ಅರ್ಥದ ಎಚ್ಚರಿಕೆಯನ್ನೂ ಪತ್ರದಲ್ಲಿ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ನಡುವೆ ಈ ಬೆದರಿಕೆಗಳನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬ ವಿಚಾರದಲ್ಲೂ ರಾಜಕೀಯ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಹಿಂದೂ ಅಧಿಕಾರಿಗಳಿಗೆ ಬೆದರಿಕೆ ಬರುತ್ತಿಲ್ಲ, ಆದರೆ, ಕಾಶ್ಮೀರಿ ಪಂಡಿತ ಉದ್ಯೋಗಿಗಳಿಗೆ ಮಾತ್ರ ಬೆದರಿಕೆ ಏಕೆ ಬರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಸ್ಥಾನಮಾನ ಮರುಸ್ಥಾಪನೆ ವಿಳಂಬಗೊಳಿಸಲು ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಆಡಳಿತ ಭಯದ ವಾತಾವರಣ ಸೃಷ್ಟಿಸಲು ನಡೆಸುತ್ತಿರುವ “ಪಿತೂರಿಯ” ಭಾಗವಾಗಿರಬಹುದು ಎಂದು ಅವರು ಆರೋಪಿಸಿದ್ದಾರೆ.
ಈ ನಡುವೆ ಬಿಜೆಪಿ ಈ ಹೇಳಿಕೆಯನ್ನು ತೀವ್ರವಾಗಿ ತಿರಸ್ಕರಿಸಿತ್ತು. ಪಕ್ಷದ ರಾಷ್ಟ್ರೀಯ ಮಾಧ್ಯಮ ಸಹ ಉಸ್ತುವಾರಿ ಪ್ರದೀಪ್ ಭಂಡಾರಿ, ಅಬ್ದುಲ್ಲಾ ಅವರು ಉಗ್ರರಿಗೆ “ಮೃದು ಬೆಂಬಲ” ನೀಡುತ್ತಿದ್ದಾರೆ ಎಂದು ಆರೋಪಿಸಿ, ಅವರ ಹೇಳಿಕೆಗಳು ಕಾಶ್ಮೀರಿ ಹಿಂದೂಗಳ ನೋವನ್ನು ಕ್ಷುಲ್ಲಕಗೊಳಿಸುತ್ತವೆ ಎಂದು ಟೀಕಿಸಿದ್ದಾರೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಮ್ಮ ತಂದೆ ಫಾರೂಕ್ ಅಬ್ದುಲ್ಲಾ ಅವರಿಗಿಂತ ಭಿನ್ನವಾದ ನಿಲುವು ವ್ಯಕ್ತಪಡಿಸಿದ್ದಾರೆ.
ಆಗಸ್ಟ್‌ನಲ್ಲಿ ಮೊದಲ ಬೆದರಿಕೆ ಬೆಳಕಿಗೆ ಬಂದ ಬಳಿಕ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ ಹತ್ಯೆಗಳು ನಡೆದಿವೆ ಎಂದು ಹೇಳಿದ್ದ ಅವರು, ಹೊಸ ಬೆದರಿಕೆಯನ್ನು ಲಘುವಾಗಿ ಪರಿಗಣಿಸಬಾರದು. ಹೊಣೆಗಾರರ ವಿರುದ್ಧ ಕ್ರಮ ಕೈಗೊಂಡು ಕಾಶ್ಮೀರಿ ಪಂಡಿತ ಉದ್ಯೋಗಿಗಳಿಗೆ ಭದ್ರತೆ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.
ಎರಡನೇ ಬೆದರಿಕೆ ಪತ್ರದ ಬಳಿಕವೂ ಒಮರ್ ಅಬ್ದುಲ್ಲಾ, ಬೆದರಿಕೆಗಳ ಮೂಲವನ್ನು ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಬೇಕು ಎಂದು ಹೇಳಿದ್ದಾರೆ.