CJPಗೆ ಬಿಗ್ ಶಾಕ್; 2 ಕೋಟಿ ಮಾನನಷ್ಟ ಮೊಕದ್ದಮೆ, ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಹಿರಿಯ ವಕೀಲ Gaurav Bhatia!

ಸೆಪ್ಟೆಂಬರ್ 5ರಂದು ಸ್ವತಂತ್ರ ಭಾರದ್ವಾಜ್ ಬಂಧನದ ಹಿನ್ನೆಲೆಯಲ್ಲಿ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರು Xನಲ್ಲಿ (ಹಿಂದಿನ Twitter) ಪ್ರಕಟಿಸಿದ್ದ ಪೋಸ್ಟ್‌ನ್ನು ಆಧರಿಸಿ ಭಾಟಿಯಾ ಈ ಕಾನೂನು ಕ್ರಮ ಕೈಗೊಂಡಿದ್ದಾರೆ.
Defamation Suit Against CJP Leaders
ಸಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ
Updated on

ನವದೆಹಲಿ: ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಗೌರವ್ ಭಾಟಿಯಾ, ‘Cockroach Janta Party’ (CJP) ಹಾಗೂ ಅದರ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 5ರಂದು ಸ್ವತಂತ್ರ ಭಾರದ್ವಾಜ್ ಬಂಧನದ ಹಿನ್ನೆಲೆಯಲ್ಲಿ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರು Xನಲ್ಲಿ (ಹಿಂದಿನ Twitter) ಪ್ರಕಟಿಸಿದ್ದ ಪೋಸ್ಟ್‌ನ್ನು ಆಧರಿಸಿ ಭಾಟಿಯಾ ಈ ಕಾನೂನು ಕ್ರಮ ಕೈಗೊಂಡಿದ್ದಾರೆ. CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹದಿಹರೆಯದ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪ ಸ್ವತಂತ್ರ ಭಾರದ್ವಾಜ್ ಮೇಲಿತ್ತು.

ಭಾಟಿಯಾ ಸಲ್ಲಿಸಿರುವ ಮಾನನಷ್ಟ ದಾವೆಯ ಪ್ರಕಾರ, ಆರೋಪಿತ ಪೋಸ್ಟ್ AI ಬಳಸಿ ಸೃಷ್ಟಿಸಲಾದ ನಕಲಿ ಪೋಸ್ಟ್ ಆಗಿದ್ದು, ಅದರಲ್ಲಿ ಭಾಟಿಯಾ ಅವರು ಸ್ವತಂತ್ರ ಭಾರದ್ವಾಜ್ ಅವರನ್ನು “ದಿಮಾಗಿ ನಕ್ಸಲಿ” ಮತ್ತು “ಜಾತಿವಾದಿ” ಎಂದು ಕರೆದಿದ್ದಾರೆ ಎಂದು ಸುಳ್ಳಾಗಿ ಬಿಂಬಿಸಲಾಗಿದೆ. ಆದರೆ ತಾವು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಭಾಟಿಯಾ ವಾದಿಸಿದ್ದಾರೆ.

ದಾಸ್ ಮತ್ತು ರಂಕಾ ಅವರು ಭಾಟಿಯಾ ಅವರ ಯಾವುದೇ ನೈಜ ಹೇಳಿಕೆಯನ್ನು ಟೀಕಿಸುವುದು, ಅಭಿಪ್ರಾಯ ವ್ಯಕ್ತಪಡಿಸುವುದು ಅಥವಾ ಅದಕ್ಕೆ ಅಸಮ್ಮತಿ ಸೂಚಿಸುವುದಷ್ಟೇ ಮಾಡಿಲ್ಲ. ಬದಲಾಗಿ, ಭಾಟಿಯಾ ಅವರು ಎಂದಿಗೂ ಹೇಳದ ಮಾತುಗಳನ್ನು ಅವರು ಹೇಳಿದ್ದಾರೆ ಎಂದು ಸಾರ್ವಜನಿಕರಲ್ಲಿ ಸುಳ್ಳು ಚಿತ್ರಣ ಮೂಡಿಸಿದ್ದಾರೆ ಎಂದು ದಾವೆಯಲ್ಲಿ ಆರೋಪಿಸಲಾಗಿದೆ.

Defamation Suit Against CJP Leaders
CJP ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗೆ ನೋಟಿಸ್: 'ಹಾಗೆ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ?; 'ಸುಪ್ರೀಂ' ಕಿಡಿ

ಫೋಟೋದೊಂದಿಗೆ ಸುಳ್ಳು ಹೇಳಿಕೆ ಪ್ರಕಟ ಆರೋಪ

“ದಾವೆದಾರರ ಫೋಟೋವನ್ನು ಬಳಸಿಕೊಂಡು ಅದರೊಂದಿಗೆ ಸುಳ್ಳು ಅಥವಾ ನಕಲಿ ಹೇಳಿಕೆಯನ್ನು ಪ್ರಕಟಿಸಲಾಗಿದೆ. ಇದರಿಂದ ದಾವೆದಾರ ಮತ್ತು ಆರೋಪಿತ ವಿಷಯದ ನಡುವೆ ಸುಳ್ಳು ಹಾಗೂ ಸ್ಪಷ್ಟವಾದ ಸಂಬಂಧವಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿಸಲಾಗಿದೆ” ಎಂದು ದಾವೆಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ 2 ಕೋಟಿ ರೂ ಪರಿಹಾರವನ್ನು ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

‘ನ್ಯಾಯಾಂಗದ ಘನತೆ ಕುಗ್ಗಿಸುವ ನಿರಂತರ ಪ್ರಯತ್ನ’

CJP ಮತ್ತು ಅದರ ನಾಯಕರು ನ್ಯಾಯಾಂಗದ ಘನತೆ, ಅಧಿಕಾರ ಹಾಗೂ ಸಾಂಸ್ಥಿಕ ಸ್ಥಾನಮಾನವನ್ನು ಕುಗ್ಗಿಸುವ ಉದ್ದೇಶದಿಂದ ಸಾರ್ವಜನಿಕ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದಾರೆ ಎಂದು ಭಾಟಿಯಾ ಗಂಭೀರ ಆರೋಪ ಮಾಡಿದ್ದಾರೆ.

ಸೌರವ್ ದಾಸ್ ಕುರಿತು ಭಾಟಿಯಾ ವಿಶೇಷವಾಗಿ ಉಲ್ಲೇಖಿಸಿದ್ದು, CBI ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯದಿರುವುದನ್ನು ಟೀಕಿಸುವ ಮೂಲಕ ದಾಸ್ ಇತ್ತೀಚೆಗೆ ಹೆಚ್ಚು ಗಮನ ಸೆಳೆದಿದ್ದರು ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಇತರರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಗಳಿಂದ ಬಿಡುಗಡೆಗೊಳಿಸಿದ್ದ ಆದೇಶವನ್ನು CBI ಪ್ರಶ್ನಿಸಿತ್ತು. ಇದಲ್ಲದೆ, 2020ರ ದೆಹಲಿ ಗಲಭೆಯ ದೊಡ್ಡ ಸಂಚು ಪ್ರಕರಣದಲ್ಲಿ ಆರೋಪಿ ಉಮರ್ ಖಾಲಿದ್ ಅವರ ಜೈಲು ವಾಸಕ್ಕೆ ಸಂಬಂಧಿಸಿದಂತೆ ದಾಸ್ ಮಾಡಿದ್ದ ಪೋಸ್ಟ್‌ನ್ನೂ ಭಾಟಿಯಾ ತಮ್ಮ ದಾವೆಯಲ್ಲಿ ಉಲ್ಲೇಖಿಸಿದ್ದಾರೆ. ಆ ಪೋಸ್ಟ್ ನಿರ್ದಿಷ್ಟ ನ್ಯಾಯಾಂಗ ಆದೇಶ ಅಥವಾ ವಿಚಾರಣೆಯ ಕುರಿತು ನ್ಯಾಯಸಮ್ಮತ ಟೀಕೆಯ ಮಿತಿಯನ್ನು ಮೀರಿದೆ ಎಂದು ಅವರು ವಾದಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳನ್ನು ನ್ಯಾಯಾಂಗದ ವಿರುದ್ಧ ಬಳಸಲಾಗುತ್ತಿದೆ’

ನೋಂದಣಿಯಾಗದ ಸಂಘಟನೆಯ ಮುಖ್ಯ ವಕ್ತಾರ ಅಥವಾ ಸಹ-ಸಂಚಾಲಕ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವ ದಾಸ್, ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಸಾರ್ವಜನಿಕವಾಗಿ ಸಮರ್ಥಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನೇ ಕಳಂಕಿತಗೊಳಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದಾವೆಯಲ್ಲಿ ಆರೋಪಿಸಲಾಗಿದೆ.

ನೋಂದಣಿಯಾಗದ ಸಂಘಟನೆಯ ಬ್ಯಾನರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ CJP, ತಮಗೆ ಯಾವುದೇ ರಾಜಕೀಯ ಸಂಪರ್ಕವಿಲ್ಲ ಎಂದು ಹೇಳಿಕೊಂಡಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ನ್ಯಾಯಾಂಗವನ್ನು ಟೀಕಿಸುವುದು, ದಾಳಿ ಮಾಡುವುದು ಮತ್ತು ಅದರ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಭಾಟಿಯಾ ಆರೋಪಿಸಿದ್ದಾರೆ.

ನಿರ್ದಿಷ್ಟ ನ್ಯಾಯಾಲಯದ ಆದೇಶ ಅಥವಾ ಪ್ರಕರಣದ ಕುರಿತು ನ್ಯಾಯಸಮ್ಮತ ಟೀಕೆಯ ವ್ಯಾಪ್ತಿಯನ್ನು ಮೀರಿ, ನ್ಯಾಯಾಂಗದ ಒಟ್ಟಾರೆ ಸಂಸ್ಥೆಯ ಘನತೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಈ ಚಟುವಟಿಕೆಗಳು ತಲುಪಿವೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಂಗಕ್ಕೆ ಸಂಬಂಧಿಸಿದ ಇತ್ತೀಚಿನ ಕೆಲವು ಪ್ರಕಟಣೆಗಳಲ್ಲಿ ಅತ್ಯಂತ ಅವಹೇಳನಕಾರಿ ಹೋಲಿಕೆಗಳು ಹಾಗೂ ಉದಾಹರಣೆಗಳನ್ನು ಬಳಸಲಾಗಿದ್ದು, ಅವು ಸಾರ್ವಜನಿಕ ಆಕ್ರೋಶವನ್ನು ಕೆರಳಿಸುವ ಮತ್ತು ನ್ಯಾಯಾಂಗದ ಮೇಲಿನ ಗೌರವವನ್ನು ಕುಗ್ಗಿಸುವ ಉದ್ದೇಶ ಹೊಂದಿವೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com