

ಅಹಮದಾಬಾದ್: ಅಹಮದಾಬಾದ್ ನಲ್ಲಿ 22 ವರ್ಷದ ಮಹಿಳೆಯೊಬ್ಬರು ಮರ್ಯಾದಾ ಹತ್ಯೆಗೆ ಬಲಿಯಾಗಿದ್ದಾರೆ.
ಈಕೆ ಹಿಂಬದಿ ಪ್ರಯಾಣಿಕಳಾಗಿ ಸಂಚರಿಸುತ್ತಿದ್ದ ಮೋಟಾರ್ ಸೈಕಲ್ ಗೆ ವಾಹನವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ತನಿಖೆಯಲ್ಲಿ ಘೋರ ಅಪರಾಧವೊಂದು ಬಯಲಾಗಿದೆ.
ಹಿಟ್-ಅಂಡ್-ರನ್ ಪ್ರಕರಣದ ತನಿಖೆಯು ಮರ್ಯಾದಾ ಹತ್ಯೆಯ ಆಯಾಮವನ್ನು ದೃಢಪಡಿಸಿದೆ. ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸೋಫಿಯಾ ಎಂಬ ಮಹಿಳೆಯನ್ನು, ಒಬ್ಬ ವ್ಯಕ್ತಿಯೊಂದಿಗೆ ಇರುವ ವೀಡಿಯೊ ವೈರಲ್ ಆದ ನಂತರ ಅವರ ತಂದೆ ಮತ್ತು ಸಹೋದರರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಅವರ ಸಾವನ್ನು ನಂತರ ರಸ್ತೆ ಅಪಘಾತ ಎಂದು ಬಿಂಬಿಸಲಾಗಿತ್ತು.
ಈ ಘಟನೆ ಸುಮಾರು ಒಂದು ತಿಂಗಳ ಹಿಂದೆ ಸಂಭವಿಸಿದೆ. ಆಗಸ್ಟ್ 12 ರ ರಾತ್ರಿ, ಸೋಫಿಯಾ ಅವರ ತಂದೆ ಮೊಹಮ್ಮದ್ ಫಾರೂಕ್ ಮತ್ತು ಅವರ ಸಹೋದರ 38 ವರ್ಷದ ಮೊಹಮ್ಮದ್ ಹಬಿಲ್ ಸೋಫಿಯಾ ಅವರನ್ನು ದ್ವಿಚಕ್ರ ವಾಹನದಲ್ಲಿ ಸವಾರಿಗಾಗಿ ಹೊರಗೆ ಕರೆದೊಯ್ದರು. ಮಧ್ಯದಲ್ಲಿ, ಹಬಿಲ್ ಘೇಲ್ಜಿಪುರ ಗ್ರಾಮದ ಬಳಿಯ ಏಕಾಂತ ಮಣ್ಣಿನ ಹಾದಿಗೆ ತಿರುಗಿದರು. ಅಲ್ಲಿ ಅವರು ತಮ್ಮ ಸಹೋದರಿಯ ತಲೆಗೆ ಸುತ್ತಿಗೆಯಿಂದ ಮೂರು ಬಾರಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ತಂದೆ-ಮಗ ಇಬ್ಬರೂ ಸೋಫಿಯಾ ಅವರ ದೇಹವನ್ನು ಮುಖ್ಯ ರಸ್ತೆಗೆ ಸಾಗಿಸಿದರು ಮತ್ತು ಹಿಟ್-ರನ್ ಅಪಘಾತ ನಡೆದಿದೆ ಎಂದು ನಂಬಿಸಲು ಮೋಟಾರ್‌ಸೈಕಲ್ ನ್ನು ಹಾನಿಗೊಳಿಸಿದರು.
ನಂತರ ಹಬಿಲ್ ಅಧಿಕಾರಿಗಳ ಬಳಿಗೆ ಧಾವಿಸಿ, ಘೇಲ್ಜಿಪುರ ಛೇದಕ ಬಳಿ ವೇಗವಾಗಿ ಬಂದ ವಾಹನವು ತಮ್ಮ ಮೋಟಾರ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹೇಳಿಕೊಂಡರು. ಪರಿಣಾಮ ತನ್ನ ಸಹೋದರಿಯ ತಲೆಗೆ ತೀವ್ರ ಗಾಯಗಳಾಗಿದ್ದು, ತನಗೆ ಮೂಗೇಟುಗಳಾಗಿವೆ ಎಂದು ಹೇಳಿದ್ದಾರೆ. ಸೋಫಿಯಾ ಅವರನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮರುದಿನ ಸಾವನ್ನಪ್ಪಿದರು.
ಮೂರು ತಿಂಗಳ ಹಿಂದೆ ಸೋಫಿಯಾ ಅವರ ವೀಡಿಯೊ ವೈರಲ್ ಆದ ನಂತರ ಅವರ ತಂದೆ ಮತ್ತು ಸಹೋದರ ತೀವ್ರ ಅಸಮಾಧಾನ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಸಾಮಾಜಿಕ ಅವಮಾನಕ್ಕೆ ಹೆದರಿ, ಕುಟುಂಬದ ಖ್ಯಾತಿಯನ್ನು ರಕ್ಷಿಸುವ ಸಲುವಾಗಿ ಅವರು ಅವಳನ್ನು ಕೊಲ್ಲಲು ಸಂಚು ರೂಪಿಸಿದ್ದರು.
ಪೊಲೀಸರ ಪ್ರಕಾರ, ಹಬಿಲ್ ಸೋಫಿಯಾ ಮತ್ತು ಅವರ ತಂದೆಯೊಂದಿಗೆ ಹೊರಡುವ ಮೊದಲು ತನ್ನ ಪ್ಯಾಂಟ್ ಒಳಗೆ ಕಬ್ಬಿಣದ ಸುತ್ತಿಗೆಯನ್ನು ಅಡಗಿಸಿಟ್ಟಿದ್ದ. ಒಟ್ಟಾಗಿ, ಅವರು ಕೊಲೆಯನ್ನು ಮಾಡಿ ಅದನ್ನು ರಸ್ತೆ ಅಪಘಾತವನ್ನಾಗಿ ನಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರೂ ಆರೋಪಿಗಳು ಈಗ ಬಂಧನದಲ್ಲಿದ್ದಾರೆ ಮತ್ತು ಕೊಲೆ ಆರೋಪ ಎದುರಿಸುತ್ತಿದ್ದಾರೆ.