

ಕಾನ್ಪುರ: ಹೆಜ್ಜೆ ಹೆಜ್ಜೆಗೂ ಸಿಸಿಟಿವಿ, ಪಾರ್ಟಿ ಮಾಡುವುದಕ್ಕೆ ನಿರ್ಬಂಧ ಮತ್ತು ಖರ್ಚಿಗೆ ಹಣ ನೀಡದ ಉದ್ಯಮಿ ಮಾವನ ರೂಲ್ಸ್ ನಿಂದ ಬೇಸತ್ತ ಮಹಿಳೆಯೊಬ್ಬರು, ಕೊಲೆಗೆ ಸುಪಾರಿ ನೀಡಿ ಜೈಲು ಪಾಲಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ಉದ್ಯಮಿ ವಿನೀತ್ ಮಿನೋಚಾ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರ ಸೊಸೆ ಶಾಲು ಮಿನೋಚಾರನ್ನು ಪೊಲೀಸರು ಬಂಧಿಸಿದ್ದಾರೆ.
ವಿನೀತ್ ಮಿನೋಚಾ ಅವರು ಕಾನ್ಪುರದ ಇಂದಿರಾ ನಗರ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಕತ್ತನ್ನು ಸೀಳಿ, 26 ಬಾರಿ ದೇಹದ ಸಿಕ್ಕ ಸಿಕ್ಕ ಭಾಗದಲ್ಲಿ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿಗೆ. ಆದರೆ, ಕೊಲೆ ಮಾಡಿ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಕದ್ದಿರಲಿಲ್ಲ. ಇದೇ ಒಂದು ಅಂಶವನ್ನು ಇಟ್ಟುಕೊಂಡು ಜಾಡು ಹಿಡಿದ ಪೊಲೀಸರು ಕೊಲೆ ನಡೆದ ನಾಲ್ಕೈದು ದಿನದಲ್ಲಿ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಮುಖ ಆರೋಪಿ ಶಾಲು ಮಿನೋಚಾ, ಆಕೆಯ ಮಾವನ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ವಿಶಾಲ್ ಹಾಗೂ ನಿರುದ್ಯೋಗಿ ಪರಿಚಯಸ್ಥ ರಾಜ್ ಕಿಶೋರ್(30)ನನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ವಿನೀತ್ ಅವರು ಮಗ ಮತ್ತು ಸೊಸೆಯ ಖರ್ಚಿನ ಮೇಲೆ ತೀವ್ರ ನಿಗಾ ಇಟ್ಟಿದ್ದರು. ಅನಾವಶ್ಯಕತೆ ಖರ್ಚುಗಳ ಮೇಲೆ ನಿರ್ಬಂಧ ಹೇರಿದ್ದರು. ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ತಡರಾತ್ರಿ ಮನೆಗೆ ಬರುವಂತಿರಲಿಲ್ಲ. ಸಣ್ಣ ಖರ್ಚಿಗೂ ಅವರ ಅನುಮತಿ ಕೇಳಬೇಕಿತ್ತು ಎಂದು ವಿಚಾರಣೆ ವೇಳೆ ಶಾಲು ಹೇಳಿಕೊಂಡಿದ್ದಾರೆ
ವಿನೀತ್ ಸಾವಿಗೂ ಸುಮಾರು 15-20 ದಿನಗಳ ಮೊದಲು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಇದು ಪ್ರೈವೆಸಿಗೆ ಧಕ್ಕೆ ಎಂದು ಹೇಳಿದ್ರು ಕ್ಯಾರೆ ಎಂದಿರಲಿಲ್ಲ. ಇದು ಅವರಿಗೆ ಅಸಮಾಧನವನ್ನುಂಟು ಮಾಡಿದೆ, ಹೀಗಾಗಿ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.