

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಹಾಗೂ ಪಾಲಿ ಲೋಕಸಭಾ ಕ್ಷೇತ್ರದ ಸಂಸದ ಪಿಪಿ ಚೌಧರಿ ಅವರು 2026ರ ಸಂಸದ ರತ್ನ ಪ್ರಶಸ್ತಿಗೆ (16ನೇ ಆವೃತ್ತಿ) ನಾಲ್ಕನೇ ಬಾರಿಗೆ ಭಾಜನರಾಗಿದ್ದಾರೆ.
18ನೇ ಲೋಕಸಭೆಯಲ್ಲಿ ಅವರ ಸಂಸದೀಯ ಕಾರ್ಯಕ್ಷಮತೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಸಂಸದೀಯ ಕಾರ್ಯನಿರ್ವಹಣೆ, ಸಾರ್ವಜನಿಕ ಹಿತಾಸಕ್ತಿ ವಿಚಾರಗಳ ಪ್ರಸ್ತಾಪ ಮತ್ತು ಶಾಸನಾತ್ಮಕ ಚಟುವಟಿಕೆಗಳ ಆಧಾರದ ಮೇಲೆ ನೀಡಲಾಗುವ ‘ಒಟ್ಟಾರೆ ಅಗ್ರ ಸಾಧಕರು’ ವಿಭಾಗದಲ್ಲಿ ಚೌಧರಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
18ನೇ ಲೋಕಸಭೆಯಲ್ಲಿ ಚೌಧರಿ ಶೇ.99ರಷ್ಟು ಹಾಜರಾತಿ ದಾಖಲಿಸಿದ್ದಾರೆ. ಇದು ರಾಷ್ಟ್ರೀಯ ಸರಾಸರಿ ಶೇ.85ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅವರು 269 ಪ್ರಶ್ನೆಗಳನ್ನು ಕೇಳಿದ್ದು, ರಾಷ್ಟ್ರೀಯ ಸರಾಸರಿಗಿಂತ ಸುಮಾರು ಶೇ.161ರಷ್ಟು ಹೆಚ್ಚು. ಅಲ್ಲದೆ, 47 ಚರ್ಚೆಗಳಲ್ಲಿ ಭಾಗವಹಿಸಿದ್ದು, ಆರು ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಸುಮಾರು 15 ಪಟ್ಟು ಹೆಚ್ಚಾಗಿದೆ. ಈ ಸಾಧನೆಗಳು ಅವರನ್ನು ದೇಶದ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿರುವ ಸಂಸದರ ಸಾಲಿನಲ್ಲಿ ನಿಲ್ಲಿಸಿವೆ.
ಚೌಧರಿ ಅವರ ಸಂಸದೀಯ ಚಟುವಟಿಕೆಗಳು ಉತ್ತಮ ಆಡಳಿತ, ನ್ಯಾಯಾಂಗ ಮತ್ತು ಕಾನೂನು ಸುಧಾರಣೆಗಳು, ಆಡಳಿತಾತ್ಮಕ ಹೊಣೆಗಾರಿಕೆ, ಮೂಲಸೌಕರ್ಯ ಹಾಗೂ ಸಾರ್ವಜನಿಕ ಕಲ್ಯಾಣದಂತಹ ಪ್ರಮುಖ ವಿಷಯಗಳ ಮೇಲೆ ನಿರಂತರವಾಗಿ ಕೇಂದ್ರೀಕೃತವಾಗಿವೆ. ರಾಷ್ಟ್ರೀಯ ಮತ್ತು ಸಾರ್ವಜನಿಕ ಮಹತ್ವದ ವಿಚಾರಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಶಸ್ತಿ ನೀಡುವ ಸಂಸ್ಥೆ ತಿಳಿಸಿದೆ.
ಚೌಧರಿ ಅವರು ಈ ಹಿಂದೆ 2014, 2015 ಮತ್ತು 2025ರಲ್ಲಿ ಸಂಸದ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. 2016ರಿಂದ 2019ರವರೆಗಿನ ಅವರ ಸಂಸದೀಯ ಕಾರ್ಯಕ್ಷಮತೆಯನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗಿರಲಿಲ್ಲ. ಈ ಅವಧಿಯಲ್ಲಿ ಅವರು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರಿಂದ 2022ರವರೆಗೆ ಸಂಸದ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆದಿರಲಿಲ್ಲ.
ಪ್ರೈಮ್ ಪಾಯಿಂಟ್ ಫೌಂಡೇಶನ್ ಸ್ಥಾಪಿಸಿರುವ ಸಂಸದ ರತ್ನ ಪ್ರಶಸ್ತಿಯನ್ನು ಸಂಸದರ ಸದನದ ಕಾರ್ಯನಿರ್ವಹಣೆ, ಹಾಜರಾತಿ, ಕೇಳಿದ ಪ್ರಶ್ನೆಗಳು, ಚರ್ಚೆಗಳಲ್ಲಿ ಭಾಗವಹಿಸುವಿಕೆ ಮತ್ತು ಶಾಸನಾತ್ಮಕ ಕೊಡುಗೆ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತದೆ. ನಾಲ್ಕನೇ ಬಾರಿಗೆ ಪ್ರಶಸ್ತಿ ಪಡೆದಿರುವುದು ಚೌಧರಿ ಅವರ ನಿರಂತರ ಸಂಸದೀಯ ಕಾರ್ಯನಿರ್ವಹಣೆಗೆ ದೊರೆತ ರಾಷ್ಟ್ರೀಯ ಮನ್ನಣೆಯಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಚೌಧರಿ ಅವರು, ಇದನ್ನು ಕೇವಲ ವೈಯಕ್ತಿಕ ಗೌರವವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದರು.
ಇದು ಪಾಲಿ ಲೋಕಸಭಾ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರು ತಮ್ಮ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದ್ದು, ಪ್ರಶಸ್ತಿಯನ್ನು ಅವರಿಗೇ ಸಮರ್ಪಿಸುವುದಾಗಿ ತಿಳಿಸಿದರು.
ಈ ಗೌರವವು ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಸ್ತಾಪಿಸಲು ಹಾಗೂ ಸಂಸದೀಯ ಜವಾಬ್ದಾರಿಗಳನ್ನು ಹೆಚ್ಚಿನ ಸಮರ್ಪಣೆಯಿಂದ ನಿರ್ವಹಿಸಲು ತಮ್ಮನ್ನು ಪ್ರೇರೇಪಿಸಿದೆ ಎಂದು ಚೌಧರಿ ಹೇಳಿದರು.