2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

2029ರ ಲೋಕಸಭೆ ಚುನಾವಣೆಯಿಂದಲೇ ಈ ಸುಧಾರಣೆಯನ್ನು ಜಾರಿಗೆ ತರುವಂತಹ ಕಾರ್ಯವಿಧಾನ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ...
Simultaneous polls-PP Chaudhary
ಜಂಟಿ ಸಂಸದೀಯ ಸಮಿತಿ ಮುಖ್ಯಸ್ಥ ಪಿಪಿ ಚೌದರಿ
Updated on

ನವದೆಹಲಿ: 2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿಗೆ ತರಬಹುದು ಎಂದು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಗೋವಾದಲ್ಲಿ ನಡೆದ ಜೆಪಿಸಿಯ ಎರಡು ದಿನಗಳ ಸಭೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ, '2029ರ ಲೋಕಸಭೆ ಚುನಾವಣೆಯಿಂದಲೇ ಈ ಸುಧಾರಣೆಯನ್ನು ಜಾರಿಗೆ ತರುವಂತಹ ಕಾರ್ಯವಿಧಾನ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರಸ್ತಾವಿತ ಚುನಾವಣಾ ಸುಧಾರಣೆಗೆ ವ್ಯಾಪಕ ಒಮ್ಮತ ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ ವಿವಿಧ ವಲಯಗಳ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.

ಇದುವರೆಗೆ ಸಮಾಲೋಚನೆ ನಡೆಸಿದ ನಾಗರಿಕ ಸಮಾಜದ ಸುಮಾರು ಶೇ.99ರಷ್ಟು ಪ್ರತಿನಿಧಿಗಳು ಈ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಶುಕ್ರವಾರ ಸಮಿತಿಯು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಅವರ ಸಚಿವ ಸಂಪುಟದ ಸದಸ್ಯರೊಂದಿಗೆ ಸಭೆ ನಡೆಸಿ, ಏಕಕಾಲದಲ್ಲಿ ಚುನಾವಣೆ ಜಾರಿಗೊಳಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಸವಾಲುಗಳು ಮತ್ತು ಅವುಗಳನ್ನು ನಿವಾರಿಸುವ ಮಾರ್ಗಗಳ ಕುರಿತು ಅಭಿಪ್ರಾಯ ಸಂಗ್ರಹಿಸಿತು.

Simultaneous polls-PP Chaudhary
'ಯಾವ ಕ್ಷಣದಲ್ಲಾದರೂ ಕುಸಿಯಬಹುದು': Kerala Landslide ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರರ ವರದಿ

ಎಲ್ಲರಿಗೂ ಒಪ್ಪಿಗೆಯಾಗುವ ಕಾರ್ಯವಿಧಾನ ರೂಪಿಸಬೇಕು

"ಗೋವಾದ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದೇವೆ. 'ಒಂದು ರಾಷ್ಟ್ರ–ಒಂದು ಚುನಾವಣೆ'ಯನ್ನು ಹೇಗೆ ಜಾರಿಗೊಳಿಸಬಹುದು, ಯಾವ ಸವಾಲುಗಳಿವೆ ಹಾಗೂ ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಅವುಗಳನ್ನು ಹೇಗೆ ನಿವಾರಿಸಬಹುದು ಎಂಬ ಕುರಿತು ಸಮಾಲೋಚನೆ ನಡೆಸಲಾಗಿದೆ," ಎಂದು ಚೌಧರಿ ಹೇಳಿದರು.

ರಾಜಸ್ಥಾನದ ಪಾಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಚೌಧರಿ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಹಾಗೂ ದೆಹಲಿಯಲ್ಲಿಯೂ ಸಂವಿಧಾನ ತಜ್ಞರು, ನಾಗರಿಕ ಸಮಾಜದ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಇತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.

"ಇದುವರೆಗೆ ಸಮಾಲೋಚನೆ ನಡೆಸಿದ ನಾಗರಿಕ ಸಮಾಜ ಹಾಗೂ ವಿವಿಧ ಸಂಘಟನೆಗಳ ಸುಮಾರು ಶೇ.99ರಷ್ಟು ಪ್ರತಿನಿಧಿಗಳು ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗ ಎಲ್ಲ ರಾಜಕೀಯ ಪಕ್ಷಗಳಿಗೂ ಒಪ್ಪಿಗೆಯಾಗುವಂತಹ ಕಾರ್ಯವಿಧಾನ ರೂಪಿಸುವುದು ನಮ್ಮ ಪ್ರಯತ್ನವಾಗಿದೆ" ಎಂದರು.

2029ರಲ್ಲೇ ಜಾರಿ ಸಾಧ್ಯತೆ

ಜಾರಿಗೆ ಸಂಬಂಧಿಸಿದ ವೇಳಾಪಟ್ಟಿಯ ಕುರಿತು ಮಾತನಾಡಿದ ಅವರು, ವಿವಿಧ ಆಯ್ಕೆಗಳನ್ನು ಸಮಿತಿಯು ಪರಿಶೀಲಿಸುತ್ತಿದ್ದು, 2029ರ ಮುಂದಿನ ಲೋಕಸಭೆ ಚುನಾವಣೆಯ ವೇಳೆಗೆ ಈ ಸುಧಾರಣೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಸೂಚಿಸಿದರು. ಅದಕ್ಕೂ ಮುನ್ನ, ಕೆಲವು ರಾಜ್ಯಗಳ ರಾಜಕೀಯ ಪಕ್ಷಗಳು ಹಾಗೂ ಮುಖ್ಯಮಂತ್ರಿಗಳು ಸ್ವಯಂಪ್ರೇರಿತವಾಗಿ ತಮ್ಮ ಚುನಾವಣಾ ಚಕ್ರವನ್ನು ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಿದರೆ, ಆ ರಾಜ್ಯಗಳಲ್ಲಿ ಮೊದಲ ಹಂತದಲ್ಲೇ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.

7 ಲಕ್ಷ ಕೋಟಿ ಆರ್ಥಿಕ ನಷ್ಟ ತಪ್ಪುತ್ತದೆ

ಏಕಕಾಲದಲ್ಲಿ ಚುನಾವಣೆ ನಡೆಸುವ ಆರ್ಥಿಕ ಪ್ರಯೋಜನಗಳನ್ನು ಉಲ್ಲೇಖಿಸಿದ ಚೌಧರಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಾದ ಅಧ್ಯಯನ ವರದಿಯನ್ನು ಉಲ್ಲೇಖಿಸಿದರು. ದೇಶದಾದ್ಯಂತ ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಸುಮಾರು 7 ಲಕ್ಷ ಕೋಟಿ ಮೌಲ್ಯದ ಆರ್ಥಿಕ ನಷ್ಟ ಉಂಟಾಗುತ್ತದೆ. ಆದರೆ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಅಷ್ಟೇ ಪ್ರಮಾಣದ ಆರ್ಥಿಕ ಲಾಭವಾಗಬಹುದು ಎಂದು ಅಧ್ಯಯನದಲ್ಲಿ ಅಂದಾಜಿಸಲಾಗಿದೆ ಎಂದು ಹೇಳಿದರು.

"ಇಂದು ಚುನಾವಣೆಗಳು ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಅದರ ಪರಿಣಾಮ ಇತರ ರಾಜ್ಯಗಳ ಮೇಲೂ ಬೀಳುತ್ತದೆ. ಏಕೆಂದರೆ ಆರ್ಥಿಕತೆ ಪರಸ್ಪರ ಅವಲಂಬಿತವಾಗಿದೆ," ಎಂದು ಅವರು ಹೇಳಿದರು.

ಉದಾಹರಣೆಗೆ ಗೋವಾವನ್ನು ಉಲ್ಲೇಖಿಸಿದ ಅವರು, ದೊಡ್ಡ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯ ಮೇಲೆ ಪರಿಣಾಮ ಬೀಳುತ್ತದೆ. ಅದೇ ರೀತಿ ಗೋವಾದಲ್ಲೇ ಚುನಾವಣೆ ನಡೆದರೂ ಅಲ್ಲಿನ ಪ್ರವಾಸೋದ್ಯಮದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

"ಇಂದಿನ ಆರ್ಥಿಕತೆ ಜಾಗತೀಕರಣಗೊಂಡಿದೆ. ಒಂದು ರಾಜ್ಯದಲ್ಲಿ ಉಂಟಾಗುವ ಪ್ರತಿಕೂಲ ಪರಿಣಾಮ ಇತರ ರಾಜ್ಯಗಳ ಮೇಲೂ ಬೀಳುತ್ತದೆ. ಆಗಾಗ ನಡೆಯುವ ಚುನಾವಣೆಗಳು ರಾಜ್ಯದ ಗಡಿಗಳನ್ನು ಮೀರಿ ಆರ್ಥಿಕ ಪರಿಣಾಮ ಉಂಟುಮಾಡುತ್ತವೆ," ಎಂದು ಅವರು ಹೇಳಿದರು.

Simultaneous polls-PP Chaudhary
SIR ಕಂಪ್ಯೂಟರೀಕರಣ, ಚಿಕ್ಕಬಳ್ಳಾಪುರ ಅಪರೂಪದ ಸಾಧನೆ, ರಾಜ್ಯದಲ್ಲೇ ಮೊದಲ ಸ್ಥಾನ!

ಆಡಳಿತ ಯಂತ್ರದ ಮೇಲೆ ಪರಿಣಾಮ

ಆಗಾಗ ನಡೆಯುವ ಚುನಾವಣೆಗಳು ಆಡಳಿತ ವ್ಯವಸ್ಥೆಗೂ ಅಡ್ಡಿಯಾಗುತ್ತವೆ ಮತ್ತು ಶಿಕ್ಷಣ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತವೆ ಎಂದು ಚೌಧರಿ ಅಭಿಪ್ರಾಯಪಟ್ಟರು. ಮತದಾರರ ಪಟ್ಟಿ ಸಿದ್ಧಪಡಿಸುವುದು, ತರಬೇತಿ ಮತ್ತು ಮತದಾನ ಕರ್ತವ್ಯ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಕೆಲಸಗಳಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಇದರಿಂದ ಸರ್ಕಾರಿ ಶಾಲೆಗಳ ಬೋಧನಾ ಚಟುವಟಿಕೆಗೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದರು.

"ಇದರ ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿನ ಬೋಧನಾ ಕಾರ್ಯಕ್ಕೆ ತೊಂದರೆಯಾಗುತ್ತದೆ. ವಿಶೇಷವಾಗಿ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಹೆಚ್ಚು ನಷ್ಟವಾಗುತ್ತದೆ. ಮುಂದಿನ ಹಲವು ದಶಕಗಳವರೆಗೆ ಇದೇ ಪರಿಸ್ಥಿತಿ ಮುಂದುವರಿದರೆ ಅದು ಗಂಭೀರ ಸಮಸ್ಯೆಯಾಗಲಿದೆ," ಎಂದು ಅವರು ಎಚ್ಚರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಕಲ್ಪನೆ ಮಾಡಿರುವ 'ಒಂದು ರಾಷ್ಟ್ರ–ಒಂದು ಚುನಾವಣೆ' ದೇಶದ ಪ್ರಮುಖ ಚುನಾವಣಾ ಸುಧಾರಣೆಯಾಗಿದ್ದು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಸಾಧಿಸಲು ಇದು ನೆರವಾಗಲಿದೆ ಎಂದು ಚೌಧರಿ ಹೇಳಿದರು. "ಈ ಕುರಿತು ಹೆಚ್ಚಿನ ವಿವರಗಳು ಕಾಲಕ್ರಮೇಣ ಸ್ಪಷ್ಟವಾಗಲಿವೆ. ಎಲ್ಲರಿಗೂ ಒಪ್ಪಿಗೆಯಾಗುವಂತಹ ಪ್ರಾಯೋಗಿಕ ಕಾರ್ಯವಿಧಾನ ರೂಪಿಸಿ, ವ್ಯಾಪಕ ಒಮ್ಮತ ನಿರ್ಮಿಸುವುದೇ ನಮ್ಮ ಉದ್ದೇಶ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com