'ಯಾವ ಕ್ಷಣದಲ್ಲಾದರೂ ಕುಸಿಯಬಹುದು': Kerala Landslide ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರರ ವರದಿ

ಕೇರಳದ ವಯನಾಡಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಯೋಜನೆಯ ಸ್ಥಳದಲ್ಲಿ ಸಂಭವಿಸಿದ ಭೀಕರ ಭೂಕುಸಿತವು ಮೊದಲೇ ಸಂಭವಿಸುವ ಸಾಧ್ಯತೆ ಇದ್ದ ದುರಂತವಾಗಿತ್ತು..
Contractors Report Warned Wayanad Tunnel Slope Could Collapse Any Time
ಕೇರಳ ಗುಡ್ಡ ಕುಸಿತ
Updated on

ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಈ ವರೆಗೂ 6 ಮಂದಿ ಸಾವನ್ನಪ್ಪಿದ್ದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕೇರಳದ ವಯನಾಡಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಯೋಜನೆಯ ಸ್ಥಳದಲ್ಲಿ ಸಂಭವಿಸಿದ ಭೀಕರ ಭೂಕುಸಿತವು ಮೊದಲೇ ಸಂಭವಿಸುವ ಸಾಧ್ಯತೆ ಇದ್ದ ದುರಂತವಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಗುತ್ತಿಗೆದಾರರ ಆಂತರಿಕ ವರದಿ ಬಯಲು ಮಾಡಿದೆ.

ವಯನಾಡು ಸುರಂಗ ಕಾಮಗಾರಿಯ ಉಪಗುತ್ತಿಗೆದಾರ ಸಂಸ್ಥೆಯಾಗಿರುವ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ (ಡಿಬಿಎಲ್) ಸಿದ್ಧಪಡಿಸಿದ್ದ ಆಂತರಿಕ ವರದಿಯನ್ನು ರಾಷ್ಟ್ರೀಯ ಸುದ್ದಿವಾಹಿನಿಯೊಂದು ಬಹಿರಂಗ ಪಡಿಸಿದ್ದು, ವಯನಾಡು ಸುರಂಗದ ಉತ್ತರ ಪ್ರವೇಶದ್ವಾರದ (North Portal) ಮೇಲಿರುವ ಬೆಟ್ಟದ ಇಳಿಜಾರು ಈಗಾಗಲೇ ಕುಸಿಯಲು ಆರಂಭಿಸಿದ್ದುದನ್ನು ಅದು ಬಹಿರಂಗಪಡಿಸಿದೆ.

ಈ ವರದಿಯನ್ನು ಡಿಬಿಎಲ್‌ನ ಹಿರಿಯ ಭೂವಿಜ್ಞಾನಿ ರಾಜು ಸಾಗರ್, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI)ಯ ಎ. ರಮೇಶ್ ಕುಮಾರ್ ಹಾಗೂ ಟರ್ಕಿಶ್ ಎಂಜಿನಿಯರಿಂಗ್ ಕನ್ಸಲ್ಟಿಂಗ್ ಅಂಡ್ ಕಾನ್‌ಟ್ರಾಕ್ಟಿಂಗ್ ಸಂಸ್ಥೆಯ ಪ್ರಾಧಿಕಾರ ಎಂಜಿನಿಯರ್ ಡಾ. ಎಚ್.ಕೆ. ಸಿಂಗ್ ಅವರು ಜಂಟಿಯಾಗಿ ಸಿದ್ಧಪಡಿಸಿ ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.

ಈ ಸುರಂಗ ಯೋಜನೆಗೆ ಎರಡು ಪ್ರವೇಶದ್ವಾರಗಳಿವೆ. ಕೋಯಿಕೋಡ್ ಭಾಗದ ಅನಕ್ಕಂಪೊಯಿಲ್‌ನಲ್ಲಿ ದಕ್ಷಿಣ ಪ್ರವೇಶದ್ವಾರ (South Portal) ಇದ್ದರೆ, ವಯನಾಡಿನ ಕಲ್ಲಾಡಿ-ಮೆಪ್ಪಾಡಿ ಸಮೀಪ ಉತ್ತರ ಪ್ರವೇಶದ್ವಾರ (North Portal) ಇದೆ. ಭೂಕುಸಿತ ಸಂಭವಿಸಿದ್ದು ಇದೇ ಉತ್ತರ ಪ್ರವೇಶದ್ವಾರದ ಬಳಿ, ಅಂದರೆ ಸುರಂಗದ ಬಾಯಿ ನಿರ್ಮಾಣವಾಗಬೇಕಿದ್ದ ಸ್ಥಳದಲ್ಲಿ. ವರದಿಯು ಇದೇ ಪ್ರದೇಶದ ಭೂವೈಜ್ಞಾನಿಕ ಹಾಗೂ ಭೂತಾಂತ್ರಿಕ ಮೌಲ್ಯಮಾಪನವನ್ನು ಒಳಗೊಂಡಿದೆ.

Contractors Report Warned Wayanad Tunnel Slope Could Collapse Any Time
ಕೇರಳ: ವಯನಾಡ್ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾರಿ ಭೂಕುಸಿತ; ಹಲವರು ಸಿಲುಕಿರುವ ಶಂಕೆ; Video

ಜೇಡಿಮಣ್ಣಿನ ಪದರ, ಕುಸಿಯಬಹುದು

ಈ ವರದಿ ಕೆಲ ಆತಂಕಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಜೂನ್ 3ರಿಂದ 11ರ ನಡುವೆ ಸ್ಥಳ ಪರಿಶೀಲನೆ ನಡೆಸಿದ ಎಂಜಿನಿಯರ್‌ಗಳು, ಸುರಂಗದ ಪ್ರವೇಶದ್ವಾರದ ಮೇಲಿನ ಬೆಟ್ಟವು ಗಟ್ಟಿಯಾದ ಬಂಡೆಯ ಮೇಲಿರುವ ಸುಮಾರು 35 ಮೀಟರ್ ದಪ್ಪದ ಸಡಿಲವಾದ ಜೇಡಿಮಣ್ಣಿನ ಪದರದಿಂದ ಕೂಡಿದೆ ಎಂದು ಕಂಡುಹಿಡಿದಿದ್ದರು.

ಇಂತಹ ಮಣ್ಣು ನೀರನ್ನು ಸುಲಭವಾಗಿ ಹೊರಹಾಕುವುದಿಲ್ಲ. ಭಾರೀ ಮಳೆಯ ಸಂದರ್ಭದಲ್ಲಿ ನೀರು ಮಣ್ಣಿನೊಳಗೆ ಸಿಲುಕಿಕೊಂಡು ಅದರ ತೂಕ ಹೆಚ್ಚಿಸುವುದರ ಜೊತೆಗೆ ಮಣ್ಣನ್ನು ದುರ್ಬಲಗೊಳಿಸಿ ಭೂಕುಸಿತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಕೈ ಕೊಟ್ಟ ಮೆಟ್ಟಿಲು ಯೋಜನೆ

ಈ ಇಳಿಜಾರನ್ನು ಸ್ಥಿರವಾಗಿಡಲು ಕಂಪನಿಯು ಬೆಟ್ಟವನ್ನು ಮೆಟ್ಟಿಲು ಮಾದರಿಯಲ್ಲಿ ಕತ್ತರಿಸಿ, 'ಶಾಟ್‌ಕ್ರೀಟ್' (Shotcrete) ಎಂಬ ಕಾಂಕ್ರೀಟ್ ಪದರವನ್ನು ಸಿಂಪಡಿಸಿ ಹಾಗೂ 'ಸಾಯಿಲ್ ನೇಲ್ಸ್' (Soil Nails) ಎಂಬ ಉಕ್ಕಿನ ರಾಡ್‌ಗಳನ್ನು ಅಳವಡಿಸಿತ್ತು. ಆದರೆ ಪರಿಶೀಲನೆ ನಡೆಯುವ ವೇಳೆಗೆ ಈ ರಕ್ಷಣಾ ವ್ಯವಸ್ಥೆಯೇ ವಿಫಲವಾಗತೊಡಗಿತ್ತು.

ಇಳಿಜಾರಿನ ವಿವಿಧ ಹಂತಗಳಲ್ಲಿ ಬಿರುಕುಗಳು ಅಗಲವಾಗುತ್ತಿರುವುದು, ಮಣ್ಣು ಕುಸಿಯುತ್ತಿರುವುದು, ಕೆಸರಿನ ನೀರು ಹೊರಹೊಮ್ಮುತ್ತಿರುವುದು ಹಾಗೂ ಮಣ್ಣಿನೊಳಗೆ ಪೊಟರೆಗಳು ನಿರ್ಮಾಣವಾಗುತ್ತಿರುವುದು ಕಂಡುಬಂದಿತ್ತು.

ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಇಳಿಜಾರಿನ ಎರಡು ರಕ್ಷಣಾ ಹಂತಗಳ ಮಧ್ಯೆ ನೆಲದೊಳಗೆ ನೀರು ಹರಿಯುತ್ತಿರುವ ಶಬ್ದವನ್ನು ಎಂಜಿನಿಯರ್‌ಗಳು ಕೇಳಿದ್ದರು. ಇದು ನೀರು ಸಡಿಲ ಮಣ್ಣಿನೊಳಗೆ ಗುಪ್ತ ಮಾರ್ಗವನ್ನು ನಿರ್ಮಿಸಿಕೊಂಡು ಒಳಗಿನಿಂದಲೇ ಬೆಟ್ಟವನ್ನು ಕೊರೆದು ದುರ್ಬಲಗೊಳಿಸುತ್ತಿದೆ ಎಂಬುದಕ್ಕೆ ಸೂಚನೆಯಾಗಿದೆ. ಹೊರಭಾಗ ಗಟ್ಟಿಯಾಗಿರುವಂತೆ ಕಂಡರೂ ಒಳಭಾಗದಲ್ಲಿ ಇಳಿಜಾರು ವೇಗವಾಗಿ ದುರ್ಬಲಗೊಂಡು ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

ವರದಿಯು ಎರಡೂ ಬದಿಯ ಇಳಿಜಾರುಗಳು ಸಮಾನವಾಗಿ ಸುರಕ್ಷಿತವಲ್ಲ ಎಂದು ಸ್ಪಷ್ಟಪಡಿಸಿದೆ. ವಿಶೇಷವಾಗಿ ಎಡಭಾಗದ ಇಳಿಜಾರು ಬಲಭಾಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಉಲ್ಲೇಖಿಸಿದ್ದು, ಪ್ರಸ್ತುತ ಮಳೆಯ ಪರಿಸ್ಥಿತಿಯಲ್ಲಿ ಅದು "ಯಾವ ಸಮಯದಲ್ಲಾದರೂ ಹಠಾತ್ ಭೂಕುಸಿತಕ್ಕೆ ಕಾರಣವಾಗಬಹುದು" ಎಂದು ನೇರವಾಗಿ ಎಚ್ಚರಿಸಿತ್ತು ಎನ್ನಲಾಗಿದೆ.

ಭೂಕುಸಿತ ತಡೆಯಲು ಅಳವಡಿಸಿದ್ದ ಸುರಕ್ಷತಾ ವ್ಯವಸ್ಥೆಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಮಣ್ಣಿನೊಳಗೆ ಸಂಗ್ರಹವಾಗಿದ್ದ ನೀರಿನ ಒತ್ತಡವನ್ನು ಕಡಿಮೆ ಮಾಡಲು ಇಳಿಜಾರಿನಲ್ಲಿ ಒಳಚರಂಡಿ ರಂಧ್ರಗಳನ್ನು (Drainage Holes) ಕೊರೆದಿದ್ದರೂ, ಅಪಾಯ ಹೆಚ್ಚಿದ್ದ ಎಡಭಾಗದಲ್ಲಿ ಅವುಗಳಲ್ಲಿ ಅತ್ಯಲ್ಪ ಸಂಖ್ಯೆಯವು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು ಎಂದು ವರದಿ ತಿಳಿಸಿದೆ. ನೆಲದೊಳಗಿನ ನೀರಿನ ಒತ್ತಡವನ್ನು ಅಳೆಯುವ ಪೈಝೋಮೀಟರ್‌ಗಳಂತಹ (Piezometers) ಮುನ್ನೆಚ್ಚರಿಕೆ ಸಾಧನಗಳನ್ನು ಇನ್ನೂ ಅಳವಡಿಸಿರಲಿಲ್ಲ. ಬಳಸುತ್ತಿದ್ದ ಏಕೈಕ ಮೇಲ್ವಿಚಾರಣಾ ಸಾಧನವೂ ಸ್ಥಳದಲ್ಲಿ ಕಂಡುಬಂದ ಅಪಾಯದ ನೈಜ ಸ್ಥಿತಿಯನ್ನು ಸಮರ್ಪಕವಾಗಿ ತೋರಿಸುತ್ತಿರಲಿಲ್ಲ ಎಂದು ಎಂಜಿನಿಯರ್‌ಗಳೇ ಒಪ್ಪಿಕೊಂಡಿದ್ದಾರೆ.

Contractors Report Warned Wayanad Tunnel Slope Could Collapse Any Time
ಕೋಲ್ಕತ್ತಾದಲ್ಲಿ 5.4 ತೀವ್ರತೆಯ ಭೂಕಂಪ: ವೇದಿಕೆಯಲ್ಲಿ ಭಾಷಣ ಮಾತನಾಡುತ್ತಿದ್ದಾಗ ಅಲುಗಾಡಿದ ಕೇಂದ್ರ ಸಚಿವರು! Video

ಬಿರುಕಿಗೆ ಮಳೆಯೇ ಕಾರಣ, ಸ್ಫೋಟವಲ್ಲ

ಇಳಿಜಾರು ಈಗಾಗಲೇ ದುರ್ಬಲಗೊಂಡಿದ್ದರೂ ಜೂನ್ 5, 6 ಮತ್ತು 11ರಂದು ಮೂರು ಹಂತಗಳಲ್ಲಿ ಸುರಂಗ ಕಾಮಗಾರಿಗಾಗಿ ಪ್ರಾಯೋಗಿಕ ಸ್ಫೋಟ ನಡೆಸಲಾಗಿತ್ತು. ಆದರೆ ವರದಿಯ ಪ್ರಕಾರ, ಸ್ಫೋಟದಿಂದ ಉಂಟಾದ ಕಂಪನಗಳು ಸುರಕ್ಷಿತ ಮಿತಿಯಲ್ಲೇ ಇದ್ದವು. ಬಿರುಕುಗಳು ಉಂಟಾಗಲು ಮುಖ್ಯ ಕಾರಣ ಭಾರೀ ಮಳೆಯೇ ಹೊರತು ಸ್ಫೋಟವಲ್ಲ ಎಂದು ವರದಿ ತಿಳಿಸಿದೆ.

ಅಪಾಯವನ್ನು ತಡೆಯಲು ವರದಿ ಹಲವು ಶಿಫಾರಸುಗಳನ್ನು ಮಾಡಿತ್ತು. ಎಡಭಾಗದ ಇಳಿಜಾರಿನಲ್ಲಿ ಕಲ್ಲು ಹಾಗೂ ಉಕ್ಕಿನ ಜಾಲರಿಯಿಂದ ನಿರ್ಮಿಸುವ ಗ್ಯಾಬಿಯನ್ ಗೋಡೆಗಳನ್ನು (Gabion Walls) ನಿರ್ಮಿಸಿ ಮಣ್ಣಿಗೆ ಆಸರೆ ಒದಗಿಸುವುದು, ಇಳಿಜಾರನ್ನು ಸಂಪೂರ್ಣವಾಗಿ ರಕ್ಷಣಾತ್ಮಕ ಮ್ಯಾಟಿಂಗ್ ಹಾಗೂ ಟಾರ್ಪಾಲಿನ್‌ನಿಂದ ಮುಚ್ಚುವುದು ಮತ್ತು ಮಳೆನೀರನ್ನು ನೇರವಾಗಿ ಇಳಿಜಾರಿನೊಳಗೆ ಸೇರದಂತೆ ಸುರಕ್ಷಿತ ಕಾಲುವೆಗಳ ಮೂಲಕ ಹರಿಸುವಂತೆ ಸಲಹೆ ನೀಡಿತ್ತು.

ಇದಲ್ಲದೆ, ಈಗಾಗಲೇ ಅಳವಡಿಸಿರುವ ಸಾಯಿಲ್ ನೇಲ್ಸ್ ಹಾಗೂ ಡ್ರೈನೇಜ್ ರಂಧ್ರಗಳು ನೀರಿನಿಂದ ಸಂಪೂರ್ಣ ತೇವಗೊಂಡ ಪರಿಸ್ಥಿತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರೀಕ್ಷಿಸಲು ಸ್ಥಳದಲ್ಲೇ ಪರೀಕ್ಷೆ ನಡೆಸುವಂತೆ ವರದಿ ಶಿಫಾರಸು ಮಾಡಿತ್ತು. ಮತ್ತೊಂದು ಅಪಾಯವನ್ನೂ ಅದು ಗುರುತಿಸಿತ್ತು. ಅಪಾಯದಲ್ಲಿದ್ದ ಇಳಿಜಾರಿನ ಸಮೀಪದಲ್ಲೇ ಇದ್ದ ಕಾಂಕ್ರೀಟ್ ಮಿಶ್ರಣ ಘಟಕ (Concrete Mixing Plant), ಅದರ ಭಾರ ಹಾಗೂ ಭಾರೀ ವಾಹನಗಳ ಸಂಚಾರದಿಂದ ಇಳಿಜಾರಿನ ಸ್ಥಿರತೆಗೆ ಧಕ್ಕೆಯಾಗಬಹುದು ಎಂದು ಎಚ್ಚರಿಸಿ, ಅದನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com