

ಕೋಲ್ಕತ್ತಾ: ದೇಶದ ಇತರ ಭಾಗಗಳಲ್ಲಿ, ದೇವಾಲಯದ ಆವರಣದಲ್ಲಿ ಅಥವಾ ದೇವಸ್ಥಾನದಲ್ಲಿ ಮಾಂಸಾಹಾರ ಸೇವಿಸುವುದು ಧಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗಬಹುದು. ಆದರೆ ಪಶ್ಚಿಮ ಬಂಗಾಳದ ಕೆಲವು ದೇವಾಲಯಗಳಲ್ಲಿ, ಇದು ಅತ್ಯಂತ ಸಾಮಾನ್ಯವಾದ ವಿಷಯವಾಗಿದೆ.
ಕೋಲ್ಕತ್ತಾದ ಶತಮಾನಗಳಷ್ಟು ಹಳೆಯದಾದ ಕಾಳಿಘಾಟ್ ದೇವಾಲಯದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮೀನಿನ ಪ್ರಸಾದ(ಊಟ) ಸವಿದಾಗ, ಎಲ್ಲರ ಗಮನ ಅವರ ತಟ್ಟೆಯ ಮೇಲಿರಲಿಲ್ಲ; ಬದಲಾಗಿ, ಕಳೆದ ಒಂದು ವಾರದಿಂದ ನಗರದಲ್ಲಿ ಕೇಳಿಬರುತ್ತಿರುವ ಹೇಳಿಕೆಗಳತ್ತ ಇತ್ತು.
ಹೌದು, ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವ ಬಂಗಾಳಿ ಹಿಂದೂಗಳನ್ನು ಹಿಂದೂ ಅರ್ಚಕರೊಬ್ಬರು ಈ ಹಿಂದೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಇತ್ತೀಚಿಗೆ ದುರ್ಗಾಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವುದನ್ನು ವಿರೋಧಿಸಿ ಬಾಗೇಶ್ವರ್ ಬಾಬಾ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಸುವೇಂದು ಅಧಿಕಾರಿ ಅವರು, ಶಾಕ್ತ ಪಂಥದ ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುವ 'ಕೌಶಿಕಿ ಅಮಾವಾಸ್ಯೆ'ಯ ಸಂದರ್ಭದಲ್ಲಿ ನಿನ್ನೆ ಸಂಜೆ ಕಾಳಿಘಾಟ್‌ಗೆ ಭೇಟಿ ನೀಡಿ, ಕಾಳಿಘಾಟ್ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ದೇವಿಗೆ ಅರ್ಪಿಸಲಾಗಿದ್ದ ಸಾಂಪ್ರದಾಯಿಕ ಮೀನಿನ ಪ್ರಸಾದ ಸೇವಿಸಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ 'ಭೋಗ' (ನೈವೇದ್ಯದ ಊಟ) ಸೇವಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಭೋಗದ ತಟ್ಟೆಯಲ್ಲಿ ಕಾಳಿಘಾಟ್‌ನ ವಿಶೇಷತೆಯಾದ ದೊಡ್ಡ ಮೀನಿನ ತಲೆ ಪ್ರಮುಖವಾಗಿತ್ತು. ಇದರೊಂದಿಗೆ ಕರಿದ ಮೀನು ಮತ್ತು ಬಸಂತಿ ಪುಲಾವ್(ಹಳದಿ ಬಣ್ಣದ ಅನ್ನ) ಕೂಡ ಸುವೇಂದು ಅಧಿಕಾರಿ ಸೇವಿಸಿದ್ದಾರೆ.
ಕಾಳಿಘಾಟ್‌ನಲ್ಲಿ, ಅಲ್ಲಿನ ಆರಾಧ್ಯ ದೇವತೆಯಾದ ಕಾಳಿಗೆ ಮೀನು ಮತ್ತು ಮೇಕೆಯ ಮಾಂಸವನ್ನು ಅರ್ಪಿಸುವ ಸಂಪ್ರದಾಯ. ನಂತರ ಭಕ್ತರು ಅದರ ಪ್ರಸಾದವನ್ನು ಸೇವಿಸುತ್ತಾರೆ.
ಮುಖ್ಯವಾಗಿ ಮಾಂಸಾಹಾರ ಸೇವಿಸುವ ಸಂಸ್ಕೃತಿಯನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ, ಉತ್ತರ ಭಾರತದ ರಾಜ್ಯಗಳಿಂದ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ ಎಂಬ ಟೀಕೆಗಳನ್ನು ಬಿಜೆಪಿ ಪದೇ ಪದೇ ತಳ್ಳಿಹಾಕಿದೆ.
ಸುವೇಂದು ಅಧಿಕಾರಿ ಅವರ ವೀಡಿಯೊವನ್ನು ಉಲ್ಲೇಖಿಸಿ, ಸಸ್ಯಾಹಾರ ಮತ್ತು ಮಾಂಸಾಹಾರದ ಕುರಿತಾದ ಈ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಆಡಳಿತಾರೂಢ ಪಕ್ಷ ಅಭಿಪ್ರಾಯಪಟ್ಟಿದೆ.
"ಈ ವಿವಾದವು ಸೂಕ್ತ ಹಂತದಲ್ಲೇ ಕೊನೆಗೊಳ್ಳಲಿ. ಕಾಳಿಘಾಟ್‌ನಲ್ಲಿ, ಬಂಗಾಳದ ನಂಬಿಕೆ, ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ಗೌರವಿಸುವ ನಿಟ್ಟಿನಲ್ಲಿ, ಮುಖ್ಯಮಂತ್ರಿ (ಅಧಿಕಾರಿ)ಗಳು ತಾಯಿ ಕಾಳಿಯ ಸಾಂಪ್ರದಾಯಿಕ 'ಮೀನಿನ ಭೋಗ್' (ಮೀನಿನ ನೈವೇದ್ಯ) ಸೇವಿಸಿದ್ದಾರೆ. ಅವರ ನೇತೃತ್ವದಲ್ಲಿ, ಬಿಜೆಪಿ ಯಾವಾಗಲೂ ಬಂಗಾಳದ ಹಿತಾಸಕ್ತಿ, ಸಂಪ್ರದಾಯ ಮತ್ತು ಬಂಗಾಳಕ್ಕೆ ಯಾವುದು ಸರಿಯೋ ಅದರ ಪರವಾಗಿ ದೃಢವಾಗಿ ನಿಲ್ಲುತ್ತದೆ" ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ವಿವಾದದ ಹಿನ್ನೆಲೆ
ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರವನ್ನು ತ್ಯಜಿಸುವಂತೆ ಬಂಗಾಳಿ ಹಿಂದೂಗಳಿಗೆ ಬಾಗೇಶ್ವರ್ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಶಾಸ್ತ್ರಿ (ಬಾಗೇಶ್ವರ್ ಬಾಬಾ) ನೀಡಿದ ಕರೆ ಈ ವಿವಾದಕ್ಕೆ ಮೂಲ ಕಾರಣವಾಗಿದೆ. ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವ ಬಂಗಾಳಿ ಹಿಂದೂಗಳನ್ನು ಅವರು 'ಪಾಖಂಡಿ' (ಢೋಂಗಿ) ಎಂದು ಟೀಕಿಸಿದ್ದರು.