‘ನನ್ನನ್ನು ಬೆನ್ನಟ್ಟಿದರು, ಕೊನೆಗೆ ಡಿಕ್ಕಿ ಹೊಡೆದರು’: Road Rage, ಕಾರು ಚಾಲಕನ ಕರಾಳ ಮುಖ ಬಯಲು ಮಾಡಿದ ಮಹಿಳಾ ಬೈಕ್ ರೈಡರ್! Video

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸಿಯಾ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಡುವುದು ಹಾಗೂ ಬೈಕ್‌ ಹಲವು ಮೀಟರ್‌ಗಳಷ್ಟು ದೂರ ರಸ್ತೆಯಲ್ಲಿ ಜಾರಿಕೊಂಡು ಹೋಗುವುದು ವಿಡಿಯೋದಲ್ಲಿ ದಾಖಲಾಗಿದೆ.
Woman injured after car chases, rams into her bike
ಗುರುಗ್ರಾಮ ರೋಡ್ ರೇಜ್ ಪ್ರಕರಣ
Updated on

ಗುರುಗ್ರಾಮ: ಕ್ಷುಲ್ಲಕ ವಿಚಾರಕ್ಕೆ ನಡೆದ ಸಣ್ಣ ಜಗಳವೊಂದು ಇದೀಗ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಮಹಿಳಾ ಬೈಕ್ ರೈಡರ್ ಅನ್ನು ಕಾರಿನಿಂದ ಗುದ್ದಿದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ರೋಡ್‌ ರೇಜ್‌ ಘಟನೆ ಬಳಿಕ ಕಾರೊಂದು ಮಹಿಳೆ ಚಲಾಯಿಸುತ್ತಿದ್ದ ಬೈಕ್‌ ಅನ್ನು ಬೆನ್ನಟ್ಟಿ ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಸವಾರಿಗೆ ಗಾಯಗಳಾಗಿರುವ ಘಟನೆ ಗುರುಗ್ರಾಮ್‌ನ ಗಾಲ್ಫ್‌ ಕೋರ್ಸ್‌ ರಸ್ತೆಯಲ್ಲಿ ನಡೆದಿದೆ. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ನಡೆದ ಈ ಘಟನೆ, ಸಿಯಾ ಎಂಬ ಮಹಿಳಾ ಬೈಕ್‌ ಚಾಲಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ವಿಡಿಯೋ ಹಂಚಿಕೊಂಡ ಬಳಿಕ ಬೆಳಕಿಗೆ ಬಂದಿದೆ. ಅವರ ಬೈಕ್‌ಗೆ ಅಳವಡಿಸಿದ್ದ ಕ್ಯಾಮೆರಾ ಹಾಗೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಬೈಕ್‌ ಸವಾರರ ಕ್ಯಾಮೆರಾಗಳಲ್ಲಿ ಘಟನೆ ಸೆರೆಯಾಗಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸಿಯಾ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಡುವುದು ಹಾಗೂ ಬೈಕ್‌ ಹಲವು ಮೀಟರ್‌ಗಳಷ್ಟು ದೂರ ರಸ್ತೆಯಲ್ಲಿ ಜಾರಿಕೊಂಡು ಹೋಗುವುದು ವಿಡಿಯೋದಲ್ಲಿ ದಾಖಲಾಗಿದೆ.

Woman injured after car chases, rams into her bike
Rapido ಬೈಕ್‌ಗೆ RTC ಬಸ್‌ ಡಿಕ್ಕಿ: 26 ವರ್ಷದ ಯುವತಿ ಸಾವು, ಇಬ್ಬರಿಗೆ ಗಾಯ; CCTV ದೃಶ್ಯ ವೈರಲ್‌

ಆಗಿದ್ದೇನು?

ಸಿಯಾ ಅವರು ತಮ್ಮ ಬೈಕಿಂಗ್‌ ಗುಂಪಿನ ಸದಸ್ಯರೊಂದಿಗೆ ಏಪ್ರಿಲಿಯಾ ಆರ್‌ಎಸ್‌ 457 ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಸೆಡಾನ್‌ ಕಾರೊಂದು ತಮ್ಮ ಬೈಕ್‌ಗೆ ಅಪಾಯಕಾರಿಯಾಗಿ ಸಮೀಪ ಬಂದಿತ್ತು ಎಂದು ಅವರು ಆರೋಪಿಸಿದ್ದಾರೆ. ಕಾರಿನಲ್ಲಿದ್ದವರು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಪದೇಪದೇ ಬೈಕ್‌ ನಿಲ್ಲಿಸುವಂತೆ ಕೈ ಸನ್ನೆ ಮಾಡುತ್ತಿದ್ದರು ಎಂದು ಸಿಯಾ ಹೇಳಿದ್ದಾರೆ.

“ಅಂತರ ಕಾಯ್ದುಕೊಂಡು ಕಾರು ಚಲಾಯಿಸುವಂತೆ ನಾನು ಚಾಲಕನಿಗೆ ಹೇಳಿದೆ. ಆದರೆ, ಆತ ಬೈಕ್‌ ನಿಲ್ಲಿಸುವಂತೆ ಪದೇಪದೇ ಕೈ ಸನ್ನೆ ಮಾಡುತ್ತಿದ್ದ. ಕಾರಿನಲ್ಲಿದ್ದವರು ಮದ್ಯಪಾನ ಮಾಡಿರುವಂತೆ ಕಂಡುಬಂದಿದ್ದರು. ಈ ವೇಳೆ ತಾವು ಸುರಕ್ಷಿತ ಅಂತರ ಕಾಯ್ದುಕೊಂಡು ಮುಂದೆ ಸಾಗಲು ಪ್ರಯತ್ನಿಸಿದ್ದಾಗಿ ಸಿಯಾ ಹೇಳಿದ್ದಾರೆ.

ಈ ವೇಳೆ ಅವರ ಹಿಂದೆ ಬರುತ್ತಿದ್ದ ಸ್ನೇಹಿತರೊಬ್ಬರು ಕಾರು ತಮ್ಮ ಬೈಕ್‌ ಪಕ್ಕಕ್ಕೆ ಬಾರದಂತೆ ತಡೆಯಲು ಪ್ರಯತ್ನಿಸಿದ್ದರು. ಆದರೂ ಕಾರು ತಮ್ಮನ್ನು ಹಿಂಬಾಲಿಸುತ್ತಲೇ ಬಂದಿತ್ತು. ಬಳಿಕ ಚಾಲಕ ತನ್ನ ಕಾರನ್ನು ಬೈಕ್‌ನ ಮುಂದೆ ತಂದು ತಡೆಯಲು ಯತ್ನಿಸಿದಾಗ ಡಿಕ್ಕಿ ಸಂಭವಿಸಿತು ಎಂದು ಸಿಯಾ ಆರೋಪಿಸಿದ್ದಾರೆ.

ಹಾರಿ ಬಿದ್ದ ಮಹಿಳಾ ರೈಡರ್

ಅಪಘಾತದ ದೃಶ್ಯದಲ್ಲಿ ಡಿಕ್ಕಿಯ ರಭಸಕ್ಕೆ ಸಿಯಾ ಕೆಲವು ಅಡಿ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗುವಂತಾಗಿದ್ದು, ಅವರ ಬೈಕ್‌ ಕೂಡ ರಸ್ತೆಯಲ್ಲಿ ಜಾರಿಕೊಂಡು ಹೋಗಿರುವುದು ಕಂಡುಬಂದಿದೆ.

ಅಪಘಾತದ ಬಳಿಕ ಸಿಯಾ ಅವರ ಸ್ನೇಹಿತರೊಬ್ಬರು ಕಾರನ್ನು ಬೆನ್ನಟ್ಟಿ ಟ್ರಾಫಿಕ್‌ ಸಿಗ್ನಲ್‌ ಬಳಿ ತಡೆದಿದ್ದಾರೆ. ಕಾರು ಚಾಲಕನನ್ನು ಪ್ರಶ್ನಿಸಿ, ಆತನೇ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಆದರೆ ಚಾಲಕ ಆರೋಪವನ್ನು ನಿರಾಕರಿಸಿ ಅಲ್ಲಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಸಿಯಾ ಆರೋಪಿಸಿದ್ದಾರೆ.

ಸಿಯಾ ಅವರು ಕಾರಿನ ನೋಂದಣಿ ಸಂಖ್ಯೆಯ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೋಂದಾಯಿತ ಮಾಲೀಕರ ವಿವರಗಳನ್ನೂ ಉಲ್ಲೇಖಿಸಿದ್ದಾರೆ. ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ, ನೆಟ್ಟಿಗರು ಗುರುಗ್ರಾಮ್‌ ಪೊಲೀಸ್‌, ಗುರುಗ್ರಾಮ್‌ ಸಂಚಾರ ಪೊಲೀಸರು, ದೆಹಲಿ ಪೊಲೀಸರು ಹಾಗೂ ಹರಿಯಾಣ ಪೊಲೀಸರನ್ನು ಟ್ಯಾಗ್‌ ಮಾಡಿ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Woman injured after car chases, rams into her bike
ಸರ್ಕಾರಿ ಸರ್ಕ್ಯೂಟ್‌ ಹೌಸ್‌ನಲ್ಲಿ 'ನೀಲಿ ಚಿತ್ರನಟಿ' ವಾಸ; ರೂರ್ಕೆಲಾದಲ್ಲಿ ಸಂಚಲನ, ಪೊಲೀಸ್ ತನಿಖೆ

ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ ಬಳಿಕವೇ ಘಟನೆ ಪೊಲೀಸರ ಗಮನಕ್ಕೆ ಬಂದಿದೆ ಎಂದು ಗುರುಗ್ರಾಮ್‌ ಪೊಲೀಸರು ತಿಳಿಸಿದ್ದಾರೆ.

ಗುರುಗ್ರಾಮ್‌ ಪೊಲೀಸ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್‌ ತುರಾನ್‌ ಮಾತನಾಡಿ, ಲಭ್ಯವಿರುವ ವಿಡಿಯೋ ದೃಶ್ಯಗಳ ಆಧಾರದ ಮೇಲೆ ಅಪಘಾತ ಸಂಭವಿಸಿದ ನಿಖರ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ. ಯಾವ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಘಟನೆ ಬರುತ್ತದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

“ಅಪಘಾತದ ಬಳಿಕ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಯಾವುದೇ ಮಾಹಿತಿ ಬಂದಿಲ್ಲ. ಸಂತ್ರಸ್ತೆಯಿಂದಲೂ ಯಾವುದೇ ಲಿಖಿತ ದೂರು ದಾಖಲಾಗಿಲ್ಲ,” ಎಂದು ತುರಾನ್‌ ಹೇಳಿದ್ದಾರೆ.

ಸಿಯಾ ಅವರನ್ನು ಸಂಪರ್ಕಿಸಿ ಲಿಖಿತ ದೂರು ಪಡೆಯಲು ಪೊಲೀಸರು ಪ್ರಯತ್ನಿಸಲಿದ್ದಾರೆ. ಬಳಿಕ ಎಫ್‌ಐಆರ್‌ ದಾಖಲಿಸಿ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗುರುಗ್ರಾಮದ ರಸ್ತೆಗಳು ಸುರಕ್ಷಿತವಾಗಿಲ್ಲ

ಈ ಘಟನೆ ಬಳಿಕ ಗುರುಗ್ರಾಮ್‌ ರಸ್ತೆಯಲ್ಲಿ ತಾನು ಸುರಕ್ಷಿತವಾಗಿಲ್ಲ ಎಂಬ ಭಾವನೆ ಮೂಡಿದೆ ಎಂದು ಸಿಯಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. “ನನಗೆ ಹೇಳಲು ಏನೂ ಇಲ್ಲ. ಆದರೆ ಇಂದು ಗುರುಗ್ರಾಮ್‌ ರಸ್ತೆಯಲ್ಲಿ ನಾನು ಸುರಕ್ಷಿತವಾಗಿಲ್ಲ ಎಂಬ ಭಾವನೆ ಮೂಡಿದೆ. ಜನರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗುವ ಭಯವೇ ಇಲ್ಲದವರಿದ್ದಾರೆ,” ಎಂದು ಅವರು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com