'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ತೀವ್ರ ಧ್ರುವೀಕರಣಗೊಂಡ ಜಗತ್ತು ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಕುರಿತಾದ ತೀವ್ರ ಭಿನ್ನಾಭಿಪ್ರಾಯಗಳ ನಡುವೆಯೂ ಸದಸ್ಯ ರಾಷ್ಟ್ರಗಳು ಒಮ್ಮತವನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ ಎಂದು ಅವರು ಹೇಳಿದರು.
External Affairs Minister S. Jaishankar
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್
Updated on

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯು ಯಶಸ್ವಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಹೇಳಿದ್ದಾರೆ. ತೀವ್ರ ಧ್ರುವೀಕರಣಗೊಂಡ ಜಗತ್ತು ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಕುರಿತಾದ ತೀವ್ರ ಭಿನ್ನಾಭಿಪ್ರಾಯಗಳ ನಡುವೆಯೂ ಸದಸ್ಯ ರಾಷ್ಟ್ರಗಳು ಒಮ್ಮತವನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ ಎಂದು ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್, ಪಶ್ಚಿಮ ಏಷ್ಯಾ ಸಂಘರ್ಷವು "ಪ್ರಸ್ತುತದ ಅತ್ಯಂತ ಕಠಿಣ ವಿಷಯ"ವಾಗಿದ್ದರೂ, ಈ ಕುರಿತು ಒಮ್ಮತದ ಹೇಳಿಕೆಯನ್ನು ಅಂಗೀಕರಿಸಲು ಬ್ರಿಕ್ಸ್ ಗುಂಪು ಸಮರ್ಥವಾಯಿತು ಎಂದು ತಿಳಿಸಿದರು. ಬ್ರಿಕ್ಸ್ ಶೃಂಗಸಭೆಯಲ್ಲಿ ಎರಡು ಪ್ರಮುಖ ಸಂಘರ್ಷಗಳು, ದೊಡ್ಡ ವಿಭಜನೆಗಳು ಹಾಗೂ ಬಲವಾದ ಅಭಿಪ್ರಾಯಗಳು ಮತ್ತು ಹಿತಾಸಕ್ತಿಗಳಿದ್ದವು. ಈ ಧ್ರುವೀಕರಣದ ನಡುವೆಯೂ ನಾವು ಒಮ್ಮತವನ್ನು ಸಾಧಿಸಿದೆವು ಎಂದು ಅವರು ಹೇಳಿದರು.

ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಯುಎಇ (UAE) ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡ ನಂತರ, ಬ್ರಿಕ್ಸ್ ಸದಸ್ಯರು ಶನಿವಾರ 'ನವದೆಹಲಿ ಘೋಷಣೆ'ಯನ್ನು ಅಂಗೀಕರಿಸಿದರು. ಗಮನಾರ್ಹವೆಂದರೆ, ಇರಾನ್ ಮೇಲಿನ ದಾಳಿಗಳ ವಿಷಯದಲ್ಲಿ ಈ ಘೋಷಣೆಯು ಅಮೆರಿಕವನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ. ಆರಂಭದಲ್ಲಿ ಇರಾನ್ ಮತ್ತು ಯುಎಇ ತಮ್ಮ ನಿಲುವುಗಳನ್ನು ಬಿಗಿಗೊಳಿಸಿದ್ದರಿಂದ, ಈ ಘೋಷಣೆಯ ಕುರಿತಾದ ಮಾತುಕತೆಗಳು ಅಂತಿಮ ಕ್ಷಣದವರೆಗೂ ನಡೆದವು.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಅಬುಧಾಬಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಗುಂಪಿನ ಇತರ ನಾಯಕರ ಸಮ್ಮುಖದಲ್ಲಿ, ಮೊದಲ ದಿನದ ಚರ್ಚೆಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆಯ ಅಂಗೀಕಾರವನ್ನು ಪ್ರಕಟಿಸಿದರು.

ಶಾಂತಿ, ಭದ್ರತೆ, ಸ್ಥಿರತೆ ಮತ್ತು ದೀರ್ಘಕಾಲೀನ ಒಪ್ಪಂದಗಳಿಗೆ ಈ ಘೋಷಣೆಯು ಕರೆ ನೀಡಿದೆ. ಜೊತೆಗೆ, ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ರಕ್ಷಣೆಯೊಂದಿಗೆ ಜಾಗತಿಕ ವ್ಯಾಪಾರ, ಪೂರೈಕೆ ಸರಪಳಿಗಳು ಮತ್ತು ಇಂಧನದ ಸುಗಮ ಹರಿವಿನ ಅಗತ್ಯವನ್ನೂ ಇದು ಒತ್ತಿಹೇಳಿದೆ ಎಂದು ಜೈಶಂಕರ್ ಹೇಳಿದರು.

External Affairs Minister S. Jaishankar
ಬ್ರಿಕ್ಸ್ ಶೃಂಗಸಭೆ ಔತಣಕೂಟದ ಮೆನು ವಿವಾದ: ಎಪಿಜೆ ಅಬ್ದುಲ್ ಕಲಾಂಗೆ ಸಸ್ಯಾಹಾರಿ ಆಹಾರ ಬಡಿಸಿದ್ದೆವು ಎಂದ ಐಸ್ಲ್ಯಾಂಡ್ ಮಾಜಿ ಅಧ್ಯಕ್ಷ!

ಭಾನುವಾರ ಮುಕ್ತಾಯಗೊಂಡ ಶೃಂಗಸಭೆಯ ಒಟ್ಟಾರೆ ವಾತಾವರಣ ಮತ್ತು ಮನೋಭಾವವು "ಅತ್ಯಂತ ಮುಕ್ತ ಮತ್ತು ಸೌಹಾರ್ದಯುತ ಮಾತುಕತೆಗಳಿಂದ ಕೂಡಿತ್ತು ಎಂದು ಅವರು ಹೇಳಿದರು.

ಬೇರೆ ಸಂದರ್ಭಗಳಲ್ಲಿ ಭೇಟಿಯಾಗಲು ಸಾಧ್ಯವಾಗದಿದ್ದ ನಾಯಕರು ಈ ಶೃಂಗಸಭೆಯ ನೆಪದಲ್ಲಿ ಚರ್ಚೆ ನಡೆಸಲು ಮತ್ತು ಪ್ರಮುಖ ವಿಷಯಗಳ ಕುರಿತಾದ ಜಾಗತಿಕ ಸಂವಾದಕ್ಕೆ ಕೊಡುಗೆ ನೀಡಲು ಸಾಧ್ಯವಾಯಿತು.

ಹಲವಾರು ದ್ವಿಪಕ್ಷೀಯ ಸಭೆಗಳು ನಡೆದವು. ಇದರಲ್ಲಿ ಅಬುಧಾಬಿ ಕ್ರೌನ್ ಪ್ರಿನ್ಸ್ ಮತ್ತು ಇರಾನ್ ಅಧ್ಯಕ್ಷರ ನಡುವಿನ ಸಭೆಯೂ ಸೇರಿದೆ. ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಭೆಯನ್ನು ಕಾರ್ಯತಂತ್ರದ ವಿಷಯಗಳ ತಜ್ಞರು ಮಹತ್ವದ್ದೆಂದು ಬಣ್ಣಿಸಿದ್ದಾರೆ. "ನಿನ್ನೆ ನಡೆದ ಬ್ರಿಕ್ಸ್ (BRICS) ಭಾರತ ಶೃಂಗಸಭೆಯ ಯಶಸ್ಸನ್ನು ಇಡೀ ರಾಷ್ಟ್ರ ಮತ್ತು ವಾಸ್ತವವಾಗಿ ಇಡೀ ಜಗತ್ತೇ ಕಂಡಿದೆ ಎಂದು ಜೈಶಂಕರ್ ಹೇಳಿದರು.

ಈ ಶೃಂಗಸಭೆಯಲ್ಲಿ ಒಟ್ಟು 32 ನಿಯೋಗಗಳು ಭಾಗವಹಿಸಿದ್ದವು. ಇದರಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಂದ 11, ಪಾಲುದಾರ ದೇಶಗಳಿಂದ 10, ಪ್ರಾದೇಶಿಕ ಸಂಸ್ಥೆಗಳಿಂದ ನಾಲ್ಕು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಏಳು ನಿಯೋಗಗಳು ಸೇರಿವೆ ಎಂದು ಅವರು ತಿಳಿಸಿದರು.

ಯಾವುದೇ ಭಯೋತ್ಪಾದಕ ಕೃತ್ಯವು ಅಪರಾಧವಾಗಿದೆ ಎಂಬ ವಿಷಯದಲ್ಲಿ ಬ್ರಿಕ್ಸ್ ಬಹಳ ಸ್ಪಷ್ಟವಾಗಿತ್ತು ಮತ್ತು ಏಪ್ರಿಲ್ 2025ರ ಪಹಲ್ಗಾಮ್ ದಾಳಿಯು ಸ್ವೀಕಾರಾರ್ಹವಲ್ಲ ಎಂಬುದನ್ನು ಅದು ಸ್ಪಷ್ಟವಾಗಿ ಗುರುತಿಸಿತು. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಬ್ರಿಕ್ಸ್ (BRICS) ನಾಯಕರು ಖಂಡಿಸಿದ್ದಾರೆ. ಜೊತೆಗೆ, ಭಯೋತ್ಪಾದನೆಯನ್ನು ಎದುರಿಸುವಲ್ಲಿ 'ಶೂನ್ಯ ಸಹಿಷ್ಣುತೆ'ಯ (zero-tolerance) ನಿಲುವನ್ನು ಪ್ರತಿಪಾದಿಸಿ, ದ್ವಂದ್ವ ನೀತಿಯನ್ನು ತಿರಸ್ಕರಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಸಂವಾದ, ರಾಜತಾಂತ್ರಿಕತೆ ಮತ್ತು ಅಭಿವೃದ್ಧಿಯ ಕುರಿತಾದ ಪ್ರಧಾನ ಮಂತ್ರಿಯವರ ಸಂದೇಶವು ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು ಎಂದು ಜೈಶಂಕರ್ ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com