

ನವದೆಹಲಿ: ಐದು 5 ಕೋಟಿ ರೂ. ಚೆಕ್ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಾಟಕ ಮಾಡುವುದರಲ್ಲಿ ನೀವು ಪರಿಪೂರ್ಣ ಎಂದು ಟೀಕಿಸಿದೆ.
ಮುರಳಿ ಪ್ರೊಡಕ್ಷನ್ಸ್ ಮಾಲೀಕರಿಗೆ 5 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಚೆಕ್ಬೌನ್ಸ್ ಪ್ರಕರಣದಲ್ಲಿ ರಾಜ್ ಪಾಲ್ ಯಾದವ್ ಅವರು ಕಾನೂನು ಸಂಕಷ್ಟ ಎದುರಿಸುತ್ತಿದ್ದು ಜಾಮೀನಿನ ಮೇಲೆ ಹೊರಗಿದ್ದಾರೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಪೀಠ, ರಾಜ್‌ಪಾಲ್ ಯಾದವ್ ಅವರಿಗೆ ಎರಡು ವಾರಗಳಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಕನಿಷ್ಠ 2 ಕೋಟಿ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ.
ಯಾದವ್ ಅವರು 2010ರಲ್ಲಿ ಸಿನಿಮಾವೊಂದಕ್ಕಾಗಿ ಪಡೆದಿದ್ದ 5 ಕೋಟಿ ರೂ. ಮರುಪಾವತಿಸಲು 2013ರಲ್ಲಿ ತಲಾ 1.05 ಕೋಟಿ ರೂ. ಮೌಲ್ಯದ ಏಳು ಚೆಕ್‌ಗಳನ್ನು ನೀಡಿದ್ದರು. ಆದರೆ ಅವು ಬೌನ್ಸ್ ಆಗಿವೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೂರುದಾರರ ಪ್ರಕಾರ, 2012ರಲ್ಲಿ ಇಬ್ಬರ ನಡುವೆ ನಡೆದ ಒಪ್ಪಂದದಂತೆ, ಯಾದವ್, ಅವರ ಪತ್ನಿ ಮತ್ತು ಅವರ ಕಂಪನಿಯು ಬಡ್ಡಿ ಸೇರಿದಂತೆ ಸುಮಾರು 11 ಕೋಟಿ ರೂ.ಗಳನ್ನು ಮರುಪಾವತಿಸಲು ಒಪ್ಪಿಕೊಂಡಿದ್ದರು. ಆದರೆ ಅವರು ನೀಡಿದ್ದ ಚೆಕ್ ಗಳು ಬೌನ್ಸ್ ಆದ ನಂತರ ಮುರಳಿ ಪ್ರೊಡಕ್ಷನ್ಸ್ ಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದಲ್ಲಿ ನಟನ ನಡವಳಿಕೆಯು ಆತ್ಮವಿಶ್ವಾಸವನ್ನು ಪ್ರೇರೇಪಿಸುವುದಿಲ್ಲ ಎಂದು ಗಮನಿಸಿದ ಪೀಠ, ಅವರ ಹಿಂದಿನ ನಡವಳಿಕೆಯನ್ನು ನೋಡಿದರೆ.. ಯಾರಾದರೂ ಅವರನ್ನು ಹೇಗೆ ನಂಬಲು ಸಾಧ್ಯ? ಅವರು ಬಾಲಿವುಡ್‌ನಲ್ಲಿ ನಾಟಕ ಮತ್ತು ನಟನೆಯಲ್ಲಿ ಪರಿಪೂರ್ಣರು, ನ್ಯಾಯಾಲಯದಲ್ಲೂ ಅದೇ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.
ಈ ವೇಳೆ ಗಡುವಿನೊಳಗೆ ರಾಜ್‌ಪಾಲ್ ಕನಿಷ್ಠ 2 ಕೋಟಿ ರೂ. ಠೇವಣಿ ಇಡುವುದಾಗಿ ಮತ್ತು ಉಳಿದ ಮೊತ್ತಕ್ಕೆ ಶ್ಯೂರಿಟಿ ನೀಡುವುದಾಗಿ ಅವರ ವಕೀಲರು ಪೀಠಕ್ಕೆ ಭರವಸೆ ನೀಡಿದ ನಂತರ ಕೋರ್ಟ್ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿತು. ಮತ್ತು ಅಕ್ಟೋಬರ್ 05ಕ್ಕೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರಗೆ ನಟನಿಗೆ ಬಂಧನದಿಂದ ಮುಕ್ತಿ ನೀಡಿದೆ.