ಜಮುಯಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರ ಗುಂಡು! ಬಂಧಿತರ ಸಂಖ್ಯೆ 3ಕ್ಕೇರಿಕೆ

ಮಂಗಳವಾರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ಪ್ರಮುಖ ಆರೋಪಿ ನಂದನ್ ಯಾದವ್ ಕಾಲಿಗೆ ಗುಂಡು ತಗುಲಿದೆ ಎಂದು ಮೂಲಗಳು ತಿಳಿಸಿವೆ.
Nandan Yadav, the main accused suffered a gunshot wound to his leg.
ಮುಖ್ಯ ಆರೋಪಿ ನಂದನ್ ಯಾದವ್ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.Photo | X
Updated on

ಪಾಟ್ನಾ: ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಪುರುಷ ಸ್ನೇಹಿತನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದ ಜಮೂಯಿಯಲ್ಲಿ ಪ್ರಮುಖ ಆರೋಪಿ ಪೊಲೀಸರ ಗುಂಡೇಟಿಗೆ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳವಾರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ಪ್ರಮುಖ ಆರೋಪಿ ನಂದನ್ ಯಾದವ್ ಕಾಲಿಗೆ ಗುಂಡು ತಗುಲಿದೆ ಎಂದು ಮೂಲಗಳು ತಿಳಿಸಿವೆ.

ಜಮೂಯಿಯಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಪುರುಷ ಸ್ನೇಹಿತನಿಗೆ ಕೆಲ ಯುವಕರು ಕಿರುಕುಳ ನೀಡುತ್ತಿರುವುದಾಗಿ ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಗಮನ ಸೆಳೆದ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದರು. ತಪ್ಪಿತಸ್ಥರೆಂದು ಸಾಬೀತಾದವರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

Nandan Yadav, the main accused suffered a gunshot wound to his leg.
Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ; ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!

ವಿಡಿಯೋ ಹಂಚಿಕೊಳ್ಳಬೇಡಿ ಎಂದ ಚೌದರಿ

ಇದೇ ವೇಳೆ ಘಟನೆಯ ವಿಡಿಯೋ ಚಿತ್ರೀಕರಿಸಿದವರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರು ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚೌಧರಿ ಹೇಳಿದರು.

ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಪ್ರಮುಖ ಆರೋಪಿ ನಂದನ್ ಯಾದವ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾನೆ ಎಂಬ ವರದಿಗಳ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ಸದ್ಯ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದರು.

‘ಯಾರನ್ನೂ ಬಿಡುವುದಿಲ್ಲ’

ಬಿಹಾರ ಸಚಿವ ಶ್ರವಣ್ ಕುಮಾರ್ ಮಾತನಾಡಿ, ರಾಜ್ಯ ಪೊಲೀಸರು ಪ್ರಕರಣದ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರೆಂದು ಕಂಡುಬರುವ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.

“ಇದು ಅತ್ಯಂತ ದುಃಖಕರ ಹಾಗೂ ನಾಚಿಕೆಗೇಡಿನ ಘಟನೆ. ಎಷ್ಟು ಖಂಡಿಸಿದರೂ ಸಾಲದು. ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಯಾರನ್ನೂ ಬಿಡುವುದಿಲ್ಲ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ” ಎಂದು ಅವರು ಹೇಳಿದರು.

120 ಮಂದಿ ವಿರುದ್ಧ FIR

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಅಶ್ವಮೇಧ್ ದೇವಿ ಮಾತನಾಡಿ, ಪ್ರಕರಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿ ಸೇರಿದಂತೆ 120 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಇನ್ನಷ್ಟು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಸರ್ಕಾರ ಬಿಡುವುದಿಲ್ಲ ಎಂದು ಅವರು ಹೇಳಿದರು.

ಮೂವರ ಬಂಧನ

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಜಮುಯಿ ಎಸ್‌ಪಿ ವಿಶ್ವಜೀತ್ ದಯಾಳ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ಮಾಹಿತಿ ಸೆಪ್ಟೆಂಬರ್ 21ರಂದು ಪೊಲೀಸರಿಗೆ ಲಭ್ಯವಾಗಿತ್ತು. ಬಳಿಕ ಸಂತ್ರಸ್ತೆಯನ್ನು ಗುರುತಿಸಿ, ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಯಿತು. ಎಸ್‌ಐಟಿ ನಿರಂತರವಾಗಿ ಮಾಹಿತಿ ಸಂಗ್ರಹಿಸಿ, ವಿವಿಧೆಡೆ ದಾಳಿ ನಡೆಸಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯ ವೇಳೆ ಸೋಮವಾರ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ರಾತ್ರಿಯಿಡೀ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಮಂಗಳವಾರ ಪ್ರತಾಪುರ ಗ್ರಾಮದ ಹೊರಭಾಗದಲ್ಲಿರುವ ನದಿ ಸಮೀಪ ಇಬ್ಬರು ಪ್ರಮುಖ ಆರೋಪಿಗಳು ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು.

ಮಾಹಿತಿ ಆಧರಿಸಿ ಬೆಳಗ್ಗೆ ಎಸ್‌ಐಟಿ ತಂಡ ಹಲವು ಗುಂಪುಗಳಾಗಿ ವಿಭಜನೆಗೊಂಡು ಪ್ರದೇಶವನ್ನು ಸುತ್ತುವರಿದಿತ್ತು. ಈ ವೇಳೆ ಓಡಿಹೋಗಲು ಯತ್ನಿಸಿದ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಆತನನ್ನು ವಶಕ್ಕೆ ಪಡೆದಾಗ ತನ್ನ ಹೆಸರು ಹರೇರಾಮ್ ಯಾದವ್ ಎಂದು ತಿಳಿಸಿದ್ದಾನೆ ಎಂದು ಎಸ್‌ಪಿ ಹೇಳಿದ್ದಾರೆ.

ಹರೇರಾಮ್ ಯಾದವ್ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ವಿಶ್ವಜೀತ್ ದಯಾಳ್ ತಿಳಿಸಿದ್ದಾರೆ.

ಸೆ.19ರಂದು ಘಟನೆ

ಈ ಘಟನೆ ಸೆಪ್ಟೆಂಬರ್‌ 19ರಂದು ನಡೆದಿದ್ದು, ಬಂಧನಕ್ಕೂ ಮುನ್ನ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಕೆ.ಎಸ್. ಅನುಪಮ್ ತಿಳಿಸಿದ್ದಾರೆ.

“ಸೆಪ್ಟೆಂಬರ್‌ 19ರಂದು ಅಪ್ರಾಪ್ತ ಬಾಲಕಿ ತನ್ನ ಸ್ನೇಹಿತನೊಂದಿಗೆ ಜಮೂಯಿಯಲ್ಲಿ ಫೋಟೊ ತೆಗೆದುಕೊಳ್ಳಲು ತೆರಳಿದ್ದಳು. ಈ ವೇಳೆ ಕೆಲವು ಅಪ್ರಾಪ್ತ ವಿದ್ಯಾರ್ಥಿಗಳು ಹಾಗೂ ಯುವಕರು ಅಲ್ಲಿಗೆ ಬಂದು ಬಾಲಕಿಗೆ ಕಿರುಕುಳ ನೀಡಿದರು. ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಬಾಲಕಿಯ ಮನೆಗೆ ತೆರಳಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡರು” ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳನ್ನು ಗುರುತಿಸಿ ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Nandan Yadav, the main accused suffered a gunshot wound to his leg.
Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಅಂಧಭಕ್ತರೇ ಹೊಣೆ- ರಾಹುಲ್ ಗಾಂಧಿ

ವೈರಲ್ ವಿಡಿಯೋ ಮೂಲಕ ಪೊಲೀಸರಿಗೆ ಮಾಹಿತಿ

ಸಂತ್ರಸ್ತೆಯ ಕುಟುಂಬಸ್ಥರು ಆರಂಭದಲ್ಲಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿರಲಿಲ್ಲ. ವೈರಲ್ ಆಗಿದ್ದ ವಿಡಿಯೋ ಮೂಲಕ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಪೊಲೀಸರು ಸಂತ್ರಸ್ತೆಯನ್ನು ಸಂಪರ್ಕಿಸಿ, ಆಕೆಯ ಹೇಳಿಕೆ ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಘಟನೆಯ ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನೂ ಪೊಲೀಸರು ನಡೆಸಿದ್ದಾರೆ. ಗಮ್ಛಾ ಧರಿಸಿರುವ ವ್ಯಕ್ತಿ ನಂದನ್ ಯಾದವ್ ಎಂದು ಎಸ್‌ಪಿ ಹೇಳಿದ್ದಾರೆ.

ರಾಮಾಶಿಶ್ ಚೌಧರಿ ಎಂಬಾತನನ್ನು ಬಂಧಿಸಲಾಗಿದೆ. ಆತ ತನ್ನ ಸಾಮಾಜಿಕ ಜಾಲತಾಣದ ಪ್ರೊಫೈಲ್‌ನಿಂದ ಇಂತಹ ಹಲವು ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಪ್ರಸಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಎಸ್‌ಪಿ ವಿಶ್ವಜೀತ್ ದಯಾಳ್ ತಿಳಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳಿಗಾಗಿ ಕಾರ್ಯಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com