

ಕಾನ್ಫುರ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾನ್ಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಳವಾರ ಘೋಷಿಸಿದ್ದಾರೆ. ಕಾನ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ ಈ ಘೋಷಣೆ ಮಾಡಿದರು.
ಎಐಎಂಐಎಂ ಅಭ್ಯರ್ಥಿಗಾಗಿ ಪ್ರಚಾರ ಮಾಡುತ್ತೇನೆ ಕ್ಷೇತ್ರಕ್ಕೆ ಹಲವು ಬಾರಿ ಭೇಟಿ ನೀಡುವುದಾಗಿ ಅವರು ಹೇಳಿದ್ದಾರೆ. ಕಾನ್ಪುರದಲ್ಲಿ ಮಜ್ಲಿಸ್‌ನ ಅಭ್ಯರ್ಥಿ ಇರುತ್ತಾರೆ ಎಂಬ ಭರವಸೆ ನೀಡುತ್ತೇನೆ. ಕಳೆದ ಬಾರಿ ನನಗೆ ಕಾನ್ಪುರಕ್ಕೆ ಬರಲು ಸಾಧ್ಯವಾಗಿರಲಿಲ್ಲ, ಆದರೆ ಈ ಬಾರಿ ಪ್ರಚಾರಕ್ಕಾಗಿ ನಾನು ಖುದ್ದಾಗಿ ಬರುತ್ತೇನೆ ಎಂದು ಓವೈಸಿ ಹೇಳಿದರು.
ಹೈದರಾಬಾದ್ ಲೋಕಸಭಾ ಸಂಸದರೂ ಆಗಿರುವ ಎಐಎಂಐಎಂ ಮುಖ್ಯಸ್ಥರು, ಮಂಗಳವಾರ ತಮ್ಮ ಇತ್ತೀಚಿನ ಕಾನ್ಪುರ ಭೇಟಿಯ ವಿಡಿಯೋವನ್ನು 'ಎಕ್ಸ್' (X) ನಲ್ಲಿ ಹಂಚಿಕೊಂಡಿದ್ದಾರೆ. ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಲು ಕಾನ್ಪುರಕ್ಕೆ ಎರಡು-ಮೂರು ಬಾರಿ ಭೇಟಿ ನೀಡುವುದಾಗಿ ಅವರು ಜನರಿಗೆ ಹೇಳುವುದು ವಿಡಿಯೋದಲ್ಲಿದೆ. ಅಲ್ಪಾವಧಿಗಾದರೂ ಸರಿ, ಕ್ಷೇತ್ರದಲ್ಲಿ ಕಾಲ್ನಡಿಗೆಯಲ್ಲಿ ಪ್ರಚಾರ ನಡೆಸುವುದಾಗಿ ಓವೈಸಿ ತಿಳಿಸಿದ್ದಾರೆ.
"ಕೇವಲ 10 ನಿಮಿಷಗಳಿಗಾದರೂ ಸರಿ, ನಾನು ಕಾನ್ಪುರದ ನಿಮ್ಮ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತೇನೆ. ಬೀದಿಗಳಲ್ಲಿ ಓಡಾಡುತ್ತೇನೆ ಎಂದು ಹೇಳಿದ ಓವೈಸಿ, ಪ್ರಚಾರದ ಭಾಗವಾಗಿ ಜನರ ಮನೆಗಳಿಗೆ ಭೇಟಿ ನೀಡುವುದಾಗಿ ಹೇಳಿದರು.
"ನಾನು ಬಂದು ನಿಮ್ಮ ಮನೆಯ ಬಾಗಿಲು ತಟ್ಟುತ್ತೇನೆ. ನಾನು ನಿಮ್ಮ ಮನೆಯಲ್ಲಿ ಕುಳಿತುಕೊಳ್ಳಲೂಬಹುದು, ಏಕೆಂದರೆ ಅದು ನಿಮ್ಮ ಮನೆಯಷ್ಟೇ ನನ್ನ ಮನೆಯೂ ಹೌದು. ನನ್ನ ಸ್ವಂತ ಮನೆಗೆ ನಾನು ಹೋಗದಿದ್ದರೆ, ಬೇರೆಯವರ ಮನೆಗೆ ಹೋಗುತ್ತೇನೆಯೇ? ಎಂದು ಅವರು ಪ್ರಶ್ನಿಸಿದರು.
2027ರ ವಿಧಾನಸಭಾ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಎಐಎಂಐಎಂ ತನ್ನ ರಾಜಕೀಯ ಚಟುವಟಿಕೆಗಳನ್ನು ತೀವ್ರಗೊಳಿಸುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ. ಓವೈಸಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಅಕ್ಟೋಬರ್ 2ರೊಳಗೆ ಪಕ್ಷವು ತನ್ನ ಮೈತ್ರಿ ಯೋಜನೆಗಳನ್ನು ಪ್ರಕಟಿಸಲಿದೆ ಎಂದು ಅವರು ಹೇಳಿದ್ದಾರೆ.
ಕಾನ್ಫುರ ಸಭೆಯಲ್ಲಿ, ಎಐಎಂಐಎಂ ಅನ್ನು ಬೆಂಬಲಿಸುವಂತೆ ಮತ್ತು ಬಲಪಡಿಸುವಂತೆ ಓವೈಸಿ ಜನರಿಗೆ ಕರೆ ನೀಡಿದರು. ನಿಮ್ಮ ಮಜ್ಲಿಸ್ ಮತಗಳನ್ನು ಚಲಾಯಿಸುವ ಮೂಲಕ ನಮ್ಮ ಪಕ್ಷವನ್ನು ಬಲಪಡಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.