

ಲಕ್ನೋ (ಉತ್ತರ ಪ್ರದೇಶ): ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಿಮಿಕ್ರಿ ಮಾಡಿ ವಿವಾದಕ್ಕೆ ಸಿಲುಕಿದ್ದ ಸ್ಟ್ಯಾಂಡ್-ಅಪ್ ಹಾಸ್ಯನಟ ಪುಲ್ಕಿತ್ ಮಣಿ, ಉತ್ತರ ಪ್ರದೇಶದ ಮೂರು ಪ್ರಮುಖ ನಗರಗಳಲ್ಲಿ ಆಯೋಜಿಸಿದ್ದ ತನ್ನ ಶೋಗಳನ್ನು ರದ್ದುಗೊಳಿಸಿದ್ದಾನೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಬಳಿಕ ತಮಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿ ಈ ನಿರ್ಧಾರ ಕೈಗೊಂಡಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
ಎಲ್ಲೆಲ್ಲಿ ಕಾರ್ಯಕ್ರಮಗಳು ರದ್ದು?
ನೋಯ್ಡಾ: ಮೊದಲಿಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅನಿವಾರ್ಯ ಕಾರಣಗಳಿಂದ ನೋಯ್ಡಾ ಶೋ ರದ್ದುಗೊಳಿಸುತ್ತಿರುವುದಾಗಿ ತಿಳಿಸಿ ಕ್ಷಮೆಯಾಚಿಸಿದ್ದರು.
ಲಕ್ನೋ ಮತ್ತು ಕಾನ್ಪುರ: ಆ ಬಳಿಕ ಮತ್ತೊಂದು ಪೋಸ್ಟ್ ಹಂಚಿಕೊಂಡ ಅವರು, ಗೂಂಡಾ ಪ್ರವೃತ್ತಿಯ ಕಾರ್ಯಕರ್ತರಿಂದ ಸತತವಾಗಿ ಬೆದರಿಕೆಗಳು ಬರುತ್ತಿರುವ ಕಾರಣ ಲಕ್ನೋ ಮತ್ತು ಕಾನ್ಪುರದ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ.
ವಿವಾದದ ಹಿನ್ನೆಲೆ ಏನು?
ಮಧ್ಯಪ್ರದೇಶದ ಇಂದೋರ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ಕಾಂಗ್ರೆಸ್ ಆಯೋಜಿಸಿದ್ದ ಛಾತ್ರೋನ್ ಕಿ ಗೂಂಜ್ ಕಾರ್ಯಕ್ರಮದ ವೇದಿಕೆಯಲ್ಲಿ ಪುಲ್ಕಿತ್ ಮಣಿ ಪ್ರದರ್ಶನ ನೀಡಿದ್ದರು. ಈ ವೇಳೆ ಆತ ಪ್ರಧಾನಿ ಮೋದಿ ಅವರ ಸಾರ್ವಜನಿಕ ಭಾಷಣದ ಶೈಲಿ, ವಿದೇಶಿ ನಾಯಕರನ್ನು ಭೇಟಿ ಮಾಡುವ ಹಾವಭಾವ ಹಾಗೂ ಇತ್ತೀಚಿನ ರ‍್ಯಾಲಿಯೊಂದರ ಸಂದರ್ಭವನ್ನು ಅನುಕರಿಸಿದ್ದರು. ವೇದಿಕೆಯಲ್ಲಿದ್ದ ರಾಹುಲ್ ಗಾಂಧಿ ಅವರು ನಟನಿಗೆ ಸಾಥ್ ನೀಡಿ, ನಕ್ಕು ಪ್ರೋತ್ಸಾಹಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಮುಂದುವರೆದು, ಸಾರ್ವಜನಿಕ ವೇದಿಕೆಯಲ್ಲಿ ದೇಶದ ಪ್ರಧಾನಿ ಹಾಗೂ ಅವರ ದಿವಂಗತ ತಾಯಿಯನ್ನು ಲೇವಡಿ ಮಾಡುವ ಮೂಲಕ ರಾಹುಲ್ ಗಾಂಧಿ ತಮಗೆ ರಾಜಕೀಯ ಸಭ್ಯತೆ ಮತ್ತು ಕನಿಷ್ಠ ಮಾನವೀಯ ಸಂವೇದನೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ. ಆದರೆ, ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಇದೊಂದು ಕೇವಲ ತಿಳಿಹಾಸ್ಯ ಮತ್ತು ರಾಜಕೀಯ ವ್ಯಂಗ್ಯವಷ್ಟೇ ಆಗಿತ್ತೇ ಹೊರತು ಪ್ರಧಾನಿಯವರ ತಾಯಿಯನ್ನು ಅಪಹಾಸ್ಯ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.