ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡಲು ಆಕ್ಷೇಪಿಸುವವರ ವಿರುದ್ಧ ದಂಡನಾತ್ಮಕ ಕ್ರಮ ಇಲ್ಲ: ಸುಪ್ರೀಂ ಕೋರ್ಟ್

ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಮುರಳೀಧರ್, ಆರು ಚರಣಗಳ ಪೈಕಿ ನಾಲ್ಕು ಚರಣಗಳಲ್ಲಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಅವುಗಳನ್ನು ಕಡ್ಡಾಯವಾಗಿ ಹಾಡುವಂತೆ ಮಾಡುವುದು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗುತ್ತದೆ ಎಂದು ವಾದಿಸಿದರು.
Vande Mataram row
ವಂದೇ ಮಾತರಂ ವಿವಾದ
Updated on

ನವದೆಹಲಿ: ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯಾಗಿಯೇ ಉಳಿಯುತ್ತದೆ. ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ನಿಜವಾದ ಧಾರ್ಮಿಕ ಆಕ್ಷೇಪಣೆಗಳನ್ನು ಹೊಂದಿರುವ ವ್ಯಕ್ತಿಯೊಬ್ಬರು ವಿವಾದಿತ ಚರಣಗಳನ್ನು ಹಾಡದಿದ್ದಕ್ಕಾಗಿ ಯಾವುದೇ ದಂಡನಾತ್ಮಕ ಕ್ರಮ ಎದುರಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ರಾಷ್ಟ್ರ ಗೀತೆಗೆ ಸಮಾನ ಸ್ಥಾನಮಾನ ನೀಡುವಂತೆ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಗೆ ಮಾಡಿರುವ ತಿದ್ದುಪಡಿಯನ್ನು ಪ್ರಶ್ನಿಸಿ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿತು.

ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಮುರಳೀಧರ್, ಆರು ಚರಣಗಳ ಪೈಕಿ ನಾಲ್ಕು ಚರಣಗಳಲ್ಲಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಅವುಗಳನ್ನು ಕಡ್ಡಾಯವಾಗಿ ಹಾಡುವಂತೆ ಮಾಡುವುದು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗುತ್ತದೆ ಎಂದು ವಾದಿಸಿದರು.

Vande Mataram row
ವಂದೇ ಮಾತರಂ ಗೀತೆ ವಿವಾದ: 2 ಚರಣಕ್ಕೆ ಸೀಮಿತಗೊಳಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲ ಗರಂ; CM ಡಿ.ಕೆ.ಶಿವಕುಮಾರ್'ಗೆ ಪತ್ರ, ಆದೇಶ ಮರುಪರಿಶೀಲನೆಗೆ ಸೂಚನೆ..!

ತಿದ್ದುಪಡಿಯು ಅನಿಯಂತ್ರಿತವಾಗಿದ್ದು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಹಾಗೂ ಬಹುಸಂಖ್ಯಾತ ಧಾರ್ಮಿಕ ಸಂದೇಶವನ್ನು ಮುಂದಿಡುತ್ತದೆ ಎಂದು ವಾದಿಸಿದರು.

'ರಾಷ್ಟ್ರೀಯ ಗೀತೆ’ ಎಂಬ ಪದವನ್ನು ಅವರು ಪರಿಚಯಿಸಿದ್ದಾರೆ. ಆದರೆ ರಾಷ್ಟ್ರೀಯ ಗೀತೆ ಎಂದರೇನು ಎಂಬುದನ್ನು ಕಾಯ್ದೆ ವ್ಯಾಖ್ಯಾನಿಸುವುದಿಲ್ಲ. ಕಚೇರಿ ಜ್ಞಾಪಕಪತ್ರವನ್ನು (Office Memorandum) ಅಧಿಕೃತ ಗೆಜೆಟ್‌ನಲ್ಲೂ ಪ್ರಕಟಿಸಲಾಗಿಲ್ಲ. ಯಾವುದೇ ಕಾನೂನು ವಿಧಿಯನ್ನೂ ಅವರು ಉಲ್ಲೇಖಿಸಿಲ್ಲ ಎಂದು ಮುರಳೀಧರ್ ವಾದಿಸಿದರು.

ಅಸ್ಪಷ್ಟತೆಯ ಆಧಾರದ ಮೇಲೆ ದಂಡನಾತ್ಮಕ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಅವರು, ಸಾರ್ವಜನಿಕ ಅಭಿಪ್ರಾಯ ರೂಪಿಸದೆ ಸರ್ಕಾರ ಇಷ್ಟೊಂದು ಆತುರದಲ್ಲಿ ಕ್ರಮ ಕೈಗೊಂಡಿದೆ ಎಂದರು.

ಯಾವುದನ್ನೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ, ಅದಕ್ಕೆ ದಂಡನಾತ್ಮಕ ಪರಿಣಾಮಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಮೂಲ ಕಾಯ್ದೆಯಲ್ಲಿ ರಾಷ್ಟ್ರೀಯ ಗೀತೆಯ ಯಾವುದೇ ಉಲ್ಲೇಖವಿರಲಿಲ್ಲ. ಆದರೆ ಈಗ ಸರ್ಕಾರ ‘ವಂದೇ ಮಾತರಂ’ ನ್ನು ಸಾಮಾನ್ಯವಾಗಿ ಹಾಡಲಾಗುವ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ ಎಂದು ಒತ್ತಾಯಿಸುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, “‘ರಾಷ್ಟ್ರೀಯ ಗೀತೆ’ ಎಂದರೆ ವಂದೇ ಮಾತರಂ ಎಂಬುದೇ ಸದಾ ಅರ್ಥೈಸಿಕೊಂಡು ಬರಲಾಗಿದೆ” ಎಂದು ಹೇಳಿದರು. ರಾಷ್ಟ್ರೀಯ ಆಶಯಗಳನ್ನು ನ್ಯಾಯಾಲಯಗಳು ಪ್ರಶ್ನಿಸಲು ಸಾಧ್ಯವಿಲ್ಲ ಎಂದ ಅವರು, ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವ್ಯಕ್ತಿ ಒಂದು ಅಥವಾ ನಾಲ್ಕು ಚರಣಗಳನ್ನು ಹಾಡಬೇಕೇ ಎಂಬುದನ್ನು ತಾನೇ ನಿರ್ಧರಿಸಬಹುದು. ಆದರೆ ದಂಡನಾತ್ಮಕ ಪರಿಣಾಮಗಳು ಇರಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೋಯ್ ಇಮ್ಯಾನುಯೆಲ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬಾಗ್ಚಿ, ದೇಶದ ಕಾನೂನು ಅನ್ವಯವಾಗುತ್ತದೆ ಎಂದರು. 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ತಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಭಾವಿಸುವ ಯಾರೊಬ್ಬರ ಮೇಲೂ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದರು.

ಜಾತ್ಯತೀತತೆಯ ವಾದಕ್ಕೆ ಸಂಬಂಧಿಸಿದಂತೆ, ಅಮೆರಿಕದ ರಾಷ್ಟ್ರೀಯ ಗೀತೆಯಲ್ಲಿ ‘ದೇವರು’ ಎಂಬ ಪದ ಬಳಕೆಯಾಗಿರುವುದನ್ನು ನ್ಯಾಯಮೂರ್ತಿ ಬಾಗ್ಚಿ ಪ್ರಸ್ತಾಪಿಸಿದರು. ಧಾರ್ಮಿಕ ಅಂಶವಿರುವುದರಿಂದ ಸಂವಿಧಾನದ ಜಾತ್ಯತೀತ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ರಾಷ್ಟ್ರೀಯ ಗೀತೆ ಯಾವುದೆಂಬುದನ್ನು ಇತಿಹಾಸ ಓದಿರುವ ಯಾರಿಗಾದರೂ ತಿಳಿದಿರುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಸಾಂವಿಧಾನಿಕತೆಯನ್ನು ಇಷ್ಟು ಸಂಕುಚಿತವಾಗಿ ನೋಡಲು ಸಾಧ್ಯವಿಲ್ಲ” ಎಂದು ಹೇಳಿ, ಕಾನೂನು ರೂಪಿಸುವ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು.

ಈ ವೇಳೆ ವಿಚಾರಣೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮೆಹ್ತಾ ಅವರು “ಕಾನೂನು ರೂಪಿಸುವಿಕೆ ನಕ್ಸಲೀಯರ ಪ್ರಕಾರ ಇರಬಾರದು” ಎಂದು ಹೇಳಿದಾಗ ಮುರಳೀಧರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಹೇಳಿಕೆ ಅನಗತ್ಯವಾಗಿದ್ದು, ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಕಾನೂನು ಅಧಿಕಾರಿಗಳಿಂದ ಶಿಷ್ಟಾಚಾರವನ್ನು ನಿರೀಕ್ಷಿಸಲಾಗುತ್ತದೆ ಎಂದು ಮುರಳೀಧರ್ ಹೇಳಿದರು. “ಅವರು ಈ ಹೇಳಿಕೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು. ಬಳಿಕ ಮೆಹ್ತಾ ಅವರು ಕ್ಷಮೆ ಕೇಳುವುದಿಲ್ಲ ಎಂದು ಪುನರುಚ್ಚರಿಸಿದಾಗ, ಮುರಳೀಧರ್ “ಬಲವಾದ ಪ್ರತಿಭಟನೆ” ದಾಖಲಿಸಿದರು.

ತಮ್ಮ ಹೇಳಿಕೆಯ ಉದ್ದೇಶ ಕಾನೂನು ರೂಪಿಸುವ ಪ್ರಕ್ರಿಯೆಯು ಸಂವಿಧಾನಬದ್ಧವಾಗಿರಬೇಕು ಮತ್ತು ಶಸ್ತ್ರಾಸ್ತ್ರ ಅಥವಾ ಸಂವಿಧಾನೇತರ ಮಾರ್ಗಗಳಿಂದ ಅದನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂಬುದಷ್ಟೇ ಎಂದು ಮೆಹ್ತಾ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್ ಪೀಠ, ‘ವಂದೇ ಮಾತರಂ’ ರಾಷ್ಟ್ರೀಯ ಗೀತೆ ಎಂಬ ಘೋಷಣೆಯನ್ನು ನ್ಯಾಯಾಲಯಗಳು ಪ್ರಶ್ನಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. ಆದರೆ ಅದನ್ನು ಹಾಡದಿದ್ದಕ್ಕಾಗಿ ದಂಡನಾತ್ಮಕ ಪರಿಣಾಮಗಳನ್ನು ವಿಧಿಸಬಹುದೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ತಿಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com