

ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ನಡುವೆಯೇ, ಚುನಾವಣಾ ಆಯೋಗ (ECI) ಬುಧವಾರ ತನ್ನ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದೆ. ಬಹುಸದಸ್ಯ ಸಾಂವಿಧಾನಿಕ ಸಂಸ್ಥೆಯೊಂದರಲ್ಲಿ ಆಂತರಿಕ ಚರ್ಚೆಗಳ ವೇಳೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುವುದು ಸಹಜ ಪ್ರಕ್ರಿಯೆಯ ಭಾಗ ಎಂದು ಆಯೋಗ ಹೇಳಿದೆ.
ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ತಮ್ಮ ಗಮನಕ್ಕೆ ತರದೆ ಕೈಗೊಂಡ ನಿರ್ಧಾರಗಳು ಮತ್ತು ಹೊರಡಿಸಿದ ಆದೇಶಗಳ ಕುರಿತು 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಔಪಚಾರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿ ಪ್ರಕಟವಾದ ಬಳಿಕ ಆಯೋಗದ ಈ ಸ್ಪಷ್ಟನೆ ಬಂದಿದೆ.
ಈ ವರದಿಯ ಬೆನ್ನಲ್ಲೇ ಹಲವು ಪ್ರತಿಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ.
ಇಂತಹ ಆಕ್ಷೇಪಗಳು ಆಯೋಗದ ಕಾರ್ಯನಿರ್ವಹಣೆಯಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂಬುದನ್ನು ಸೂಚಿಸುತ್ತವೆ ಎಂಬ ವಾದವನ್ನು ತಳ್ಳಿಹಾಕಿರುವ ಇಸಿಐ, ಲಿಖಿತ ಟಿಪ್ಪಣಿಗಳು, ಅಭಿಪ್ರಾಯಗಳು ಮತ್ತು ತಾಂತ್ರಿಕ ಸಲಹೆಗಳು ತನ್ನ ಸಾಮಾನ್ಯ, ನಿರಂತರ ಕಾರ್ಯವಿಧಾನದ ಭಾಗವಾಗಿವೆ ಎಂದು ಹೇಳಿದೆ. ಕಾನೂನು ಪಾಲನೆ ಖಚಿತಪಡಿಸಿಕೊಳ್ಳುವುದು ಹಾಗೂ ಮತದಾರರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಇವು ಆಂತರಿಕ ಪರಿಶೀಲನೆ ಮತ್ತು ಸಮತೋಲನ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಆಯೋಗ ತಿಳಿಸಿದೆ.
ಕರಡು ಹಂತದಲ್ಲಿ ಆಯೋಗದ ಸದಸ್ಯರು ಎತ್ತುವ ಯಾವುದೇ ಕಾರ್ಯಾಚರಣಾತ್ಮಕ ಪ್ರಶ್ನೆಗಳು ಅಥವಾ ಸಲಹೆಗಳು ಮತದಾರರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿವೆ ಎಂದು ಆಯೋಗ ಹೇಳಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಭಿನ್ನಾಭಿಪ್ರಾಯದ ಅಭಿಪ್ರಾಯಗಳು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಸಹಜ ಭಾಗವಾಗಿವೆ ಎಂದು ಅದು ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023ರ ಅಡಿಯಲ್ಲಿ ಶಾಸನಬದ್ಧ ಪ್ರಕ್ರಿಯೆಗಳನ್ನು ಅನುಸರಿಸಿಯೇ ಆಯೋಗ ಹೊರಡಿಸುವ ಎಲ್ಲ ಅಧಿಕೃತ ಆದೇಶಗಳು, ನಿರ್ಧಾರಗಳು ಮತ್ತು ಆಡಳಿತಾತ್ಮಕ ನಿರ್ದೇಶನಗಳಿಗೆ ಕಾನೂನು ಮಾನ್ಯತೆ ಇದೆ ಎಂದು ಹೇಳಿದೆ.
10 ತಿಂಗಳ ಅವಧಿಯ ಆಯ್ದ ಆಂತರಿಕ ಟಿಪ್ಪಣಿಗಳನ್ನಷ್ಟೇ ಉಲ್ಲೇಖಿಸಿ ವರದಿ ಮಾಡುವುದು, ಆಯೋಗ ಕೈಗೊಂಡಿರುವ ಇತರ ಪ್ರಮುಖ ನಿರ್ಧಾರಗಳು ಮತ್ತು ಉಪಕ್ರಮಗಳನ್ನು ಪರಿಗಣಿಸದೆ ಚಿತ್ರದ ಒಂದು ಭಾಗವನ್ನು ಮಾತ್ರ ತೋರಿಸುತ್ತದೆ ಎಂದು ಆಯೋಗ ಆಕ್ಷೇಪಿಸಿದೆ.
ಕಳೆದ ಒಂದು ವರ್ಷದಲ್ಲಿ ಪೂರ್ಣ ಆಯೋಗವು ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದು, ನಿರ್ದೇಶನಗಳನ್ನು ಹೊರಡಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ಸೇರಿದಂತೆ ಸುಮಾರು 40 ಹೊಸ ಉಪಕ್ರಮಗಳು ಹಾಗೂ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ಎಲ್ಲ ನಿರ್ಧಾರಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಈ ಅವಧಿಯಲ್ಲಿ ಬಿಹಾರ, ಕೇರಳ, ತಮಿಳುನಾಡು, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಸಿದ ಚುನಾವಣೆಗಳನ್ನೂ ಇಸಿಐ ಉಲ್ಲೇಖಿಸಿದೆ. ಈ ಚುನಾವಣೆಗಳ ಪ್ರಮಾಣ ಮತ್ತು ವ್ಯಾಪಕತೆಯನ್ನು ವಿವರಿಸಿದ ಆಯೋಗ, ಇವುಗಳಲ್ಲಿ ದೊಡ್ಡ ಪ್ರಮಾಣದ ಆಡಳಿತಾತ್ಮಕ ವ್ಯವಸ್ಥೆ, ಹಲವು ಹಂತಗಳ ಅನುಮೋದನೆ ಮತ್ತು ನಿರ್ದೇಶನ ಒಳಗೊಂಡಿದ್ದವು ಎಂದು ಹೇಳಿದೆ.
ಮತದಾರರ ಪಟ್ಟಿಯ ದತ್ತಾಂಶದ ಭದ್ರತೆ ಕುರಿತು ವ್ಯಕ್ತವಾಗಿರುವ ಆತಂಕಗಳ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಗ, ECINet ಸೇರಿದಂತೆ ತನ್ನ ಡಿಜಿಟಲ್ ವೇದಿಕೆಗಳು ಕಟ್ಟುನಿಟ್ಟಾದ ದತ್ತಾಂಶ ಭದ್ರತಾ ನಿಯಮಗಳು ಮತ್ತು ಪರಿಶೀಲನಾ ನಿಯಂತ್ರಣಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಅನಧಿಕೃತವಾಗಿ ದತ್ತಾಂಶದಲ್ಲಿ ಬದಲಾವಣೆ ಅಥವಾ ತಿರುಚಾಟ ನಡೆಸುವುದನ್ನು ತಡೆಯಲು ಈ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಹೇಳಿದೆ.
ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಕುರಿತು ಚುನಾವಣಾ ನೋಂದಣಿ ಅಧಿಕಾರಿಗಳು (ERO) ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳು (DEO) ಕಾನೂನಿನ ಅಡಿಯಲ್ಲಿ ತಮಗೆ ನೀಡಲಾಗಿರುವ ಶಾಸನಬದ್ಧ ಅಧಿಕಾರಗಳನ್ನು ಚಲಾಯಿಸುತ್ತಾರೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವಲ್ಲಿ ಚುನಾವಣಾ ಆಯೋಗದ ಮಹತ್ವದ ಪಾತ್ರವನ್ನು ಗುರುತಿಸಿಕೊಂಡು, ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ನಿರ್ವಹಿಸಲು ಭಾರತ ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಆಯೋಗ ಹೇಳಿದೆ.