

ನವದೆಹಲಿ: 1994ರ ಡಬಲ್ ಮರ್ಡರ್, ಡಕಾಯಿತಿ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದು, ಆ ಮೂಲಕ 32 ವರ್ಷಗಳ ಪೊಲೀಸರ ಮ್ಯಾರಥಾನ್ ಶೋಧ ಅಂತ್ಯವಾದಂತಾಗಿದೆ.
ಹೌದು.. 1994ರಲ್ಲಿ ಪೂರ್ವ ದೆಹಲಿಯ ಆಧ್ಯಾತ್ಮಿಕ ಆಶ್ರಮವೊಂದರಲ್ಲಿ ಇಬ್ಬರು ಸಾಧ್ವಿಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ಹಣ-ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ ಪ್ರಕರಣದಲ್ಲಿ ಸುಮಾರು 32 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತನ್ನಿಸಿ ಪರಾರಿಯಾಗಿದ್ದ 48 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಶುಕ್ರವಾರ ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಬಂಧಿತ ಆರೋಪಿಯನ್ನು 48 ವರ್ಷದ ಲಲಿತ್ ಎಂದು ಗುರುತಿಸಲಾಗಿದೆ.
ಬಂಧನವೇ ರೋಚಕ
ದೆಹಲಿಯ ಮಂಗೋಲ್‌ಪುರಿ ಫೇಸ್-2ರ ಕಾರ್ಖಾನೆಯೊಂದರಲ್ಲಿ ಪ್ಯಾಕೇಜಿಂಗ್ ಕಾರ್ಮಿಕನಾಗಿ ನಕಲಿ ಗುರುತಿನೊಂದಿಗೆ ಕೆಲಸ ಮಾಡುತ್ತಿದ್ದ ಲಲಿತ್‌ನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಆತನ ಆಧಾರ್ ಕಾರ್ಡ್ ಮೂಲಕ ಗುರುತು ದೃಢಪಡಿಸಿದ ಬಳಿಕ ಬಂಧಿಸಿ, ಶಕರ್‌ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. 1994ರಲ್ಲಿ ನಡೆದ ಈ ದ್ವಿ ಕೊಲೆ ಮತ್ತು ದರೋಡೆಗೆ ಸಂಬಂಧಿಸಿದಂತೆ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಏನಿದು ಪ್ರಕರಣ?
ಪೊಲೀಸರ ಪ್ರಕಾರ, ಆಶ್ರಮದಲ್ಲಿದ್ದ ಇಬ್ಬರು ಸಾಧ್ವಿಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಬಳಿಕ ಆರೋಪಿಗಳು ಆಶ್ರಮದಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು.
ಲಲಿತ್ ಪ್ರಮುಖ ಆರೋಪಿಗಳಲ್ಲೊಬ್ಬನಾಗಿದ್ದು, ಮೃತರಲ್ಲಿ ಒಬ್ಬ ಸಾಧ್ವಿಯನ್ನು ಕತ್ತು ಹಿಸುಕುವಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧದ ಬಳಿಕ ದೋಚಿದ ಹಣ ಮತ್ತು ಆಭರಣಗಳಲ್ಲಿ ಆತನಿಗೂ ಪಾಲು ಸಿಕ್ಕಿತ್ತು ಎನ್ನಲಾಗಿದೆ.
ಪ್ರಕರಣದ ಆರಂಭಿಕ ತನಿಖೆಯ ವೇಳೆ ಸಹ ಆರೋಪಿಗಳಾದ ಸುನಿಲ್ ಕುಮಾರ್, ದಿಲೀಪ್ ರಾಮ್ ಮತ್ತು ಸುಶೀಲ್ ಎಂಬುವರನ್ನು ಬಂಧಿಸಲಾಗಿತ್ತು. ಆದರೆ ಲಲಿತ್ ತಲೆಮರೆಸಿಕೊಂಡಿದ್ದ. 1995ರ ಅಕ್ಟೋಬರ್ 26ರಂದು ಪೊಲೀಸರು ಆತನನ್ನು ಘೋಷಿತ ಅಪರಾಧಿ ಎಂದು ಘೋಷಿಸಿದ್ದರು.
ತನಿಖಾಧಿಕಾರಿಗಳ ಪ್ರಕಾರ, ಲಲಿತ್ ಆರಂಭದಲ್ಲಿ ಗೃಹ ಸಹಾಯಕನಾಗಿ ಕೆಲಸ ಮಾಡಲು ದೆಹಲಿಗೆ ಬಂದಿದ್ದ. ಈ ವೇಳೆ ಸಹ ಆರೋಪಿಗಳಾದ ಕುಮಾರ್ ಮತ್ತು ರಾಮ್ ಸಂಪರ್ಕಕ್ಕೆ ಬಂದಿದ್ದ.
ಅಪರಾಧದ ಬಳಿಕ 2000ರವರೆಗೆ ಬಿಹಾರದಲ್ಲೇ ಉಳಿದು ವಿವಿಧೆಡೆ ಕೆಲಸ ಮಾಡಿದ್ದ. ನಂತರ ದೆಹಲಿಗೆ ಮರಳಿದ ಆತ, ವಿವಿಧ ಉತ್ಪಾದನಾ ಘಟಕಗಳಲ್ಲಿ ಪ್ಯಾಕೇಜಿಂಗ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ತನ್ನ ಹಿಂದಿನ ಅಪರಾಧದ ವಿವರಗಳನ್ನು ಮರೆಮಾಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಸಮಸ್ತಿಪುರ ಮೂಲದ ಲಲಿತ್ 8ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. 2017ರ ಮೇ ತಿಂಗಳಲ್ಲಿ ವಿವಾಹವಾಗಿದ್ದು, ಪತ್ನಿ ಹಾಗೂ ಐದು ವರ್ಷದ ಮಗನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.