ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ಮತ್ತೊಂದು ಸಂಕಟ? ಚುನಾವಣಾ ಆಯೋಗದಲ್ಲಿ ಬಿಕ್ಕಟ್ಟಿನ ಬೆನ್ನಲ್ಲೇ 20 ವರ್ಷಗಳ ಹಿಂದಿನ ಆತ್ಮಹತ್ಯೆ ಕೇಸ್ ಕೆದಕಿದ ಮಾಜಿ ಸಚಿವ

ಚುನಾವಣಾ ಆಯೋಗದಲ್ಲಿ ಬಿಕ್ಕಟ್ಟಿನ ನಡುವೆಯೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಈ ಹಿಂದೆ ಕೇರಳಂನಲ್ಲಿ ಐಎಎಸ್ ಅಧಿಕಾರಿಯಾಗಿದ್ದಾಗ, ನಡೆದಿದ್ದ ಹಳೆಯ ಆತ್ಮಹತ್ಯೆ ಪ್ರಕರಣವೊಂದರ ಆರೋಪಗಳು ಈಗ ಮತ್ತೆ ಮುಂಚೂಣಿಗೆ ಬಂದಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Chief Election Commissioner Gyanesh Kumar
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್Express
Updated on: 

ತಿರುವನಂತಪುರಂ (ಕೇರಳಂ): ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಭಿನ್ನಮತದ ಟಿಪ್ಪಣಿ ಬರೆದಿದ್ದಾರೆ ಎಂಬ ವರದಿಗಳು ದೇಶದಲ್ಲಿ ಕೋಲಾಹಲ ಸೃಷ್ಟಿಸಿರುವ ನಡುವೆಯೇ, ಜ್ಞಾನೇಶ್ ಕುಮಾರ್ ಅವರ ವಿರುದ್ಧ 2006ರಲ್ಲಿ ನಡೆದಿದ್ದ ಹಳೆಯ ಆತ್ಮಹತ್ಯೆ ಪ್ರಕರಣವೊಂದರ ಆರೋಪಗಳು ಈಗ ಮತ್ತೆ ಮುಂಚೂಣಿಗೆ ಬಂದಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು, ಚುನಾವಣಾ ಆಯೋಗದ ನಿರ್ಧಾರಗಳ ಕುರಿತು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಸಿಪಿಐ(ಎಂ) ಹಿರಿಯ ನಾಯಕ ಹಾಗೂ ಕೇರಳಂನ ಮಾಜಿ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಅವರು, 2006 ರಲ್ಲಿ ಕೇರಳಂನಲ್ಲಿ ವಿಶ್ವಬ್ಯಾಂಕ್ ಅನುದಾನಿತ ರಸ್ತೆ ಯೋಜನೆಯೊಂದರ ಉಸ್ತುವಾರಿ ವಹಿಸಿದ್ದ ಮಲೇಷ್ಯಾ ಮೂಲದ ಚೀಫ್ ಪ್ರಾಜೆಕ್ಟ್ ಆಫೀಸರ್ ಲೀ ಸೀ ಬೆನ್ ಎಂಬುವವರು ಕೌಲಾಲಂಪುರಕ್ಕೆ ಮರಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ ಹಳೆಯ ಪ್ರಕರಣವನ್ನು ಉಲ್ಲೇಖಿಸಿ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ಆ ಕುರಿತ ವರದಿ ಇಲ್ಲಿದೆ:

ಏನದು ಪ್ರಕರಣ?

ಜ್ಞಾನೇಶ್ ಕುಮಾರ್ ಅವರು 1988ರ ಬ್ಯಾಚ್‌ನ ಕೇರಳಂ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, 2006ರಲ್ಲಿ ಕೇರಳಂ ಸರ್ಕಾರದ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಆ ವೇಳೆ, ಕೇರಳಂನಲ್ಲಿ ಮಲೇಷ್ಯಾ ಮೂಲದ ಪ್ಯಾಟಿ ಕಂಪನಿ ಮತ್ತು ಭಾಗೀರಥ ಕನ್‌ಸ್ಟ್ರಕ್ಷನ್ಸ್ ನಡುವೆ ಪ್ಯಾಟಿ-ಬಿಇಎಲ್ ಅವರು ಜಂಟಿಯಾಗಿ ವಿಶ್ವಬ್ಯಾಂಕ್ ನೆರವಿನ ರಸ್ತೆ ಯೋಜನೆ ಮಾಡುತಿತ್ತು. ಆದರೆ, ಈ ಯೋಜನೆಯ ಮೇಲ್ವಿಚಾರಣೆಯನ್ನು ಮಲೇಷ್ಯಾದ ಪ್ರಜೆ ಲೀ ಬೀನ್ ಸೀನ್ ವಹಿಸಿಕೊಂಡಿದ್ದರು. 2006ರ ನವೆಂಬರ್‌ನಲ್ಲಿ ಕೇರಳಂನಿಂದ ಕೌಲಾಲಂಪುರಕ್ಕೆ ಮರಳಿದ ನಂತರ ಲೀ ಆತ್ಮಹತ್ಯೆ ಮಾಡಿಕೊಂಡರು.

Chief Election Commissioner Gyanesh Kumar
ಚುನಾವಣಾ ಆಯೋಗದಲ್ಲಿ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ಮುಂದುವರೆದು, ಲೀ ಅವರು ಬರೆದಿದ್ದ ಡೆತ್‌ನೋಟ್‌ನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ನಿರಂತರ ಕಿರುಕುಳವನ್ನು ಎಳೆಎಳೆಯಾಗಿ ವಿವರಿಸಲಾಗಿತ್ತು. ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಹಾಗೂ ಪಾವತಿಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದರು ಎಂಬ ಗಂಭೀರ ಆರೋಪಗಳಿದ್ದವು. ಜೊತೆಗೆ, ಈ ಪತ್ರದಲ್ಲಿ ಅಂದಿನ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಪ್ರಮುಖವಾಗಿ ನಮೂದಿಸಲಾಗಿತ್ತು. ಜೊತೆಗೆ, 216 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದ ಈ ಯೋಜನೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಭೂಸ್ವಾಧೀನದ ಸಮಸ್ಯೆಗಳಿಂದಾಗಿ ತೀವ್ರ ವಿಳಂಬ ಕಂಡಿತು. ಇದರಿಂದಾಗಿ ಯೋಜನೆ ಪೂರ್ಣಗೊಳ್ಳಲು ವೆಚ್ಚವು 330 ಕೋಟಿ ರೂಪಾಯಿಗೆ ಏರಿಕೆಯಾಯಿತು. ಈ ಸಂಪೂರ್ಣ ಆರ್ಥಿಕ ಹೊರೆ ಮತ್ತು ಕಿರುಕುಳವೇ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಯ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.

ಈ ಪ್ರಕರಣದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ ಥಾಮಸ್ ಐಸಾಕ್, "ಇಲಾಖೆಯ ನಿರ್ಲಕ್ಷ್ಯದಿಂದ ಸಂಪೂರ್ಣ ಜವಾಬ್ದಾರಿ ಕೇರಳಂ ಸರ್ಕಾರದ ಮೇಲೇ ಬಿದ್ದಿದೆ. ಹಳೆಯ ಕಡತಗಳನ್ನು ಸಾಮಾನ್ಯವಾಗಿ ನಾಶಪಡಿಸುವುದರಿಂದ, ಆ ತನಿಖೆಗೆ ಸಂಬಂಧಿಸಿದ ದಾಖಲೆಗಳು ವಿಜಿಲೆನ್ಸ್ ಇಲಾಖೆಯಲ್ಲಿ ಇನ್ನೂ ಉಳಿದಿವೆಯೇ ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಈ ಘಟನೆಗೆ ಈಗ ಸುಮಾರು 20 ವರ್ಷಗಳಾಗಿವೆ. ಬಹುಶಃ ಮಲೇಷ್ಯಾದ ಕಂಪನಿಯೂ ಈ ಪ್ರಕರಣವನ್ನು ಮುಂದುವರಿಸದೇ ಇರಬಹುದು," ಎಂದು ಹೇಳಿದರು.

ಹಾಗಾದ್ರೆ, ತನಿಖೆ ಏನಾಯಿತು?

ಈ ಆತ್ಮಹತ್ಯೆ ಪತ್ರವು ಆಗಿನ ಕೇರಳಂ ಎಲ್‌ಡಿಎಫ್ ಸರ್ಕಾರಕ್ಕೆ ಭಾರಿ ಮುಜುಗರ ಉಂಟುಮಾಡಿತ್ತು. ಇದರ ಬೆನ್ನಲ್ಲೇ ಸರ್ಕಾರ, ತಕ್ಷಣವೇ ಜ್ಞಾನೇಶ್ ಕುಮಾರ್ ಅವರನ್ನು ಪಿಡಬ್ಲ್ಯೂಡಿ ಇಲಾಖೆಯಿಂದ ವರ್ಗಾವಣೆ ಮಾಡಲಾಗಿತ್ತು ಮತ್ತು ಅವರ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶಿಸಲಾಗಿತ್ತು. ಆದರೆ, ನ್ಯಾಯವ್ಯಾಪ್ತಿಯ ಸಮಸ್ಯೆಗಳು ಮತ್ತು ಇಲಾಖಾ ಆಸಕ್ತಿಯ ಕೊರತೆಯಿಂದಾಗಿ ಆ ತನಿಖೆ ಯಾವುದೇ ಅಂತಿಮ ತಾರ್ಕಿಕ ಅಂತ್ಯ ಕಾಣದೆ ಹಾಗೇ ಉಳಿದುಕೊಂಡಿತ್ತು. ಜೊತೆಗೆ, ಅವರ ಮೇಲೆ ಯಾವುದೇ ಕ್ರಿಮಿನಲ್ ಕಾನೂನು ಕ್ರಮ ಕೂಡ ಜರುಗಿರಲಿಲ್ಲ. ತದನಂತರ ಅವರು ಕೇಂದ್ರ ಸೇವೆಗೆ ನಿಯೋಜನೆಗೊಂಡು ರಕ್ಷಣಾ ಸಚಿವಾಲಯ ಸೇರಿದ್ದರು.

Chief Election Commissioner Gyanesh Kumar
ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ; SIR ಪ್ರಕ್ರಿಯೆ ರದ್ದುಪಡಿಸಿ, ಹೊಸದಾಗಿ ಪಟ್ಟಿ ಪರಿಷ್ಕರಿಸಿ: ಸಿಎಂ

ಮತ್ಯಾಕೆ ಈ ವಿಷಯ ಈಗ ಮುನ್ನೆಲೆಗೆ ಬಂತು?

ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳ ಕುರಿತು ಸಿಇಸಿ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಭಿನ್ನಮತದ ಟಿಪ್ಪಣಿ ಬರೆದಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಜ್ಞಾನೇಶ್ ಕುಮಾರ್ ಅವರ ಮೇಲೆ ಮುಗಿಬಿದ್ದಿದ್ದು, ಅವರ ಹಳೆಯ ವಿವಾದಾತ್ಮಕ ಆಡಳಿತ ದಾಖಲೆಗಳನ್ನು ಮುಂದಿಟ್ಟುಕೊಂಡು ಅವರನ್ನು ಸಿಇಸಿ ಹುದ್ದೆಯಿಂದ ತೆಗೆದುಹಾಕಬೇಕೆಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com