'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಶನಿವಾರ ದೆಹಲಿಯ ನಿರ್ವಾಚನ್ ಸದನ್‌ನಲ್ಲಿ ನಡೆದ ಪೂರ್ಣ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದರು.
Election Commission denies internal rift over SIR
ಚುನಾವಣಾ ಆಯೋಗ ಸುದ್ದಿಗೋಷ್ಠಿ
Updated on: 

ನವದೆಹಲಿ: ಆಯೋಗದಲ್ಲಿ ಯಾವುದೇ ರೀತಿಯ ಬಂಡಾಯ ಅಥವಾ ಭಿನ್ನಾಭಿಪ್ರಾಯಗಳಿಲ್ಲ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಮೂವರು ಚುನಾವಣಾ ಆಯುಕ್ತರೂ ‘ಸರ್ವಾನುಮತದಿಂದ’ ಅನುಮೋದಿಸಿದ್ದಾರೆ ಎಂದು ಚುನಾವಣಾ ಆಯೋಗ ಶನಿವಾರ ಸ್ಪಷ್ಟಪಡಿಸಿದೆ.

ಆಯೋಗದೊಳಗೆ SIR ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಶನಿವಾರ ದೆಹಲಿಯ ನಿರ್ವಾಚನ್ ಸದನ್‌ನಲ್ಲಿ ನಡೆದ ಪೂರ್ಣ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದರು.

ಸೆಪ್ಟೆಂಬರ್ 23ರಂದು ಪ್ರಕಟವಾದ ವರದಿಯಲ್ಲಿ, SIRಗೆ ಸಂಬಂಧಿಸಿದ ಹಲವು ನಿರ್ಧಾರಗಳು ಮತ್ತು ಆದೇಶಗಳ ಬಗ್ಗೆ ಸಂಧು ಹಾಗೂ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗದ ಕಾರ್ಯವೈಖರಿ ಕುರಿತು ರಾಜಕೀಯ ಚರ್ಚೆ ನಡೆದಿತ್ತು.

Election Commission denies internal rift over SIR
ಕಾಕ್ರೋಚ್ ಜನತಾ ಪಾರ್ಟಿಗೆ ಮಾತ್ರ CEC ಜ್ಞಾನೇಶ್ ಕುಮಾರ್‌ರನ್ನು ಕೆಳಗಿಳಿಸಲು ಸಾಧ್ಯ, ಇತರೆ ರಾಜಕೀಯ ಪಕ್ಷಗಳಿಗೆ ಅದು ಅಸಾಧ್ಯ'

ಸರ್ವಾನುಮತದ ಅನುಮೋದನೆ

ಆದರೆ, SIRಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳು ಹಾಗೂ ಆದೇಶಗಳು ಮೂವರು ಆಯುಕ್ತರ ಸರ್ವಾನುಮತದ ಅನುಮೋದನೆಯೊಂದಿಗೆ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.

2025ರ ಜೂನ್ 24ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಹೊರಡಿಸಲಾದ SIR ಆದೇಶವೂ ಸರ್ವಾನುಮತದಿಂದ ಅನುಮೋದನೆಯಾಗಿತ್ತು ಎಂದು ಹೇಳಿದೆ. ಈ ಆದೇಶವನ್ನು 2026ರ ಮೇ 27ರಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಆಯೋಗ ತಿಳಿಸಿದೆ.

2025ರ ಅಕ್ಟೋಬರ್ 27ರಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ 2026ರ ಮೇ 14ರಂದು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊರಡಿಸಲಾದ SIR ವೇಳಾಪಟ್ಟಿಗಳಿಗೂ ಆಯೋಗದ ಸರ್ವಾನುಮತದ ಅನುಮೋದನೆ ಇತ್ತು ಎಂದು ತಿಳಿಸಲಾಗಿದೆ.

ನೋಟಿಸ್ ಪಡೆದವರಿಗೆ ವಿನಾಯಿತಿ, ಮನೆಗೇ ಬರಲಿದ್ದಾರೆ BLOಗಳು

SIR ವೇಳೆ ‘ಅನ್‌ಮ್ಯಾಪ್ಡ್’ ಅಥವಾ ‘ತಾರ್ಕಿಕ ವ್ಯತ್ಯಾಸ’ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಪಡೆದಿರುವ ಮತದಾರರಿಗೆ ಹೊಸ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಮುಂದೆ ಇಂತಹ ಮತದಾರರು ಪ್ರತಿಯೊಂದು ಪ್ರಕರಣದಲ್ಲೂ ಚುನಾವಣಾ ನೋಂದಣಿ ಅಧಿಕಾರಿ (ERO) ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಮುಂದೆ ಖುದ್ದಾಗಿ ಹಾಜರಾಗಬೇಕಾಗಿಲ್ಲ. ಬೂತ್ ಮಟ್ಟದ ಅಧಿಕಾರಿಗಳು (BLO) ಅವರ ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ECINetನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಬಳಿಕ ERO ದಾಖಲೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಅತ್ಯಂತ ಅಗತ್ಯವೆಂದು ERO ಪರಿಗಣಿಸುವ ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಸಲಾಗುತ್ತದೆ. ಸಾಧ್ಯವಾದಷ್ಟು ಆನ್‌ಲೈನ್ ಮೂಲಕ ವಿಚಾರಣೆ ನಡೆಸಲು ಆದ್ಯತೆ ನೀಡಲಾಗುತ್ತದೆ. ಅಗತ್ಯವಿದ್ದರೆ ಮತದಾರರ ಪರವಾಗಿ ಕುಟುಂಬದ ವಯಸ್ಕ ಸದಸ್ಯರೂ ವಿಚಾರಣೆಯಲ್ಲಿ ಭಾಗವಹಿಸಲು ಅನುಮತಿ ನೀಡಬಹುದು. ಆನ್‌ಲೈನ್ ವಿಚಾರಣೆಗಾಗಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಆಯೋಗ ತಿಳಿಸಿದೆ.

ದೆಹಲಿ, ಮಹಾರಾಷ್ಟ್ರದಲ್ಲಿ ಗಡುವು ವಿಸ್ತರಣೆ

ಇದೇ ವೇಳೆ ದೆಹಲಿ ರಾಜ್ಯದಲ್ಲಿ ಹಕ್ಕು-ಆಕ್ಷೇಪಣೆ ಸಲ್ಲಿಸಲು ಇರುವ ಗಡುವನ್ನು ಅಕ್ಟೋಬರ್ 30, 2026ರವರೆಗೆ ವಿಸ್ತರಿಸಲಾಗಿದೆ. ನೋಟಿಸ್, ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಹಕ್ಕು-ಆಕ್ಷೇಪಣೆ ಸಲ್ಲಿಸುವ ಗಡುವನ್ನು ಅಕ್ಟೋಬರ್ 12ರವರೆಗೆ ಹಾಗೂ ಅವುಗಳ ವಿಲೇವಾರಿ ಅವಧಿಯನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ.

SIR ಸಂದರ್ಭದಲ್ಲಿ ಹೆಸರು ಕೈಬಿಟ್ಟಿರುವವರು, ಯುವ ಮತದಾರರು ಹಾಗೂ ಮೊದಲ ಬಾರಿಗೆ ಮತದಾರರಾಗುತ್ತಿರುವವರು ನಿರಂತರ ಪರಿಷ್ಕರಣೆ ಪ್ರಕ್ರಿಯೆಯ ಮೂಲಕ ಸಂಬಂಧಪಟ್ಟ EROಗೆ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದು ಎಂದು ಆಯೋಗ ತಿಳಿಸಿದೆ.

Election Commission denies internal rift over SIR
CEC ಜ್ಞಾನೇಶ್ ಕುಮಾರ್ ದಲಿತ ಎಂಬ ಕಾರಣಕ್ಕೆ ಕಾಂಗ್ರೆಸ್ ಅವಮಾನಿಸುತ್ತಿದೆ: ಗೋವಿಂದ ಕಾರಜೋಳ

ECINet ಪರಿಶೀಲನೆಗೆ ಸಮಿತಿ

ECINet ವ್ಯವಸ್ಥೆಯನ್ನು ಪರಿಶೀಲಿಸಲು ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲು ಆಯೋಗ ನಿರ್ಧರಿಸಿದೆ. IIT ಅಥವಾ IIITನ ಸ್ವತಂತ್ರ ತಜ್ಞರೊಬ್ಬರೂ ಈ ಸಮಿತಿಯಲ್ಲಿ ಇರಲಿದ್ದಾರೆ. ಸಂಬಂಧಿತ ಕಾಯ್ದೆಗಳು ಮತ್ತು ನಿಯಮಗಳಿಗೆ ECINet ವ್ಯವಸ್ಥೆ ಅನುಗುಣವಾಗಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸಿ ವರದಿ ಸಲ್ಲಿಸಲಿದೆ.

ಮುಂದೆ IT ಮಾಡ್ಯೂಲ್‌ಗಳು ಹಾಗೂ ಪೋರ್ಟಲ್‌ಗಳಿಗೆ ಸಂಬಂಧಿಸಿದ ಹೊಸ ಉಪಕ್ರಮಗಳನ್ನು ಆಯೋಗದ ಅನುಮೋದನೆ ಪಡೆಯುವ ಮೊದಲು Committee of Officers (COO)ನಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

ಇದಲ್ಲದೆ, ಆಯೋಗದ ಎಲ್ಲ ಸಭೆಗಳ ಕಾರ್ಯಸೂಚಿಯನ್ನು ಮುಂಚಿತವಾಗಿ ಹಂಚಿಕೊಳ್ಳಲು ಹಾಗೂ ಸಭೆಗಳ ನಡಾವಳಿಯನ್ನು ದಾಖಲಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಗಳನ್ನು ಪ್ರತಿ ವರ್ಷ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅಧಿಕಾರಿಗಳ ವಿದೇಶ ಪ್ರವಾಸಕ್ಕೂ ಆಯೋಗದ ಅನುಮೋದನೆ ಕಡ್ಡಾಯಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com