

ಪಾಟ್ನಾ: ಕೇಂದ್ರ ಮತ್ತು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಸರ್ಕಾರದ ಭಾಗವಾಗಿರುವ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಹದಗೆಡುತ್ತಿರುವ ಕಾನೂನು-ಸುವ್ಯವಸ್ಥೆಯನ್ನು ಪ್ರಶ್ನಿಸಿದ ಚಿರಾಗ್ ಪಾಸ್ವಾನ್ ಅವರು, ಈ ಸರ್ಕಾರಕ್ಕೆ ಬೆಂಬಲ ನೀಡಲು ನಾಚಿಕೆಯಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇತ್ತೀಚಿಗೆ ಬಿಹಾರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪಾಸ್ವಾನ್ ಅವರು, ಅಪರಾಧಗಳು ಸಂಪೂರ್ಣವಾಗಿ ಹದ್ದುಮೀರಿ ಹೋಗಿರುವ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಪೊಲೀಸ್ ಮತ್ತು ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ರಾಜ್ಯದ ಜನರನ್ನು ಸುರಕ್ಷಿತವಾಗಿಡುವುದು ಈಗ ಅವರ ಸಾಮರ್ಥ್ಯಕ್ಕೆ ಮೀರಿದ ಮಾತಾಗಿದೆ ಎಂದು ಚಿರಾಗ್ ಪಾಸ್ವಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಹಾರ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸಿದ ಕೇಂದ್ರ ಸಚಿವ, ಇಂತಹ ಘಟನೆಗಳು ನಿರಂತರವಾಗಿ ಮುಂದುವರಿದರೆ ರಾಜ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಮತ್ತು ಸರ್ಕಾರ ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗಿದೆ ಎಂದು ಎಚ್ಚರಿಸಿದರು. ಇಲ್ಲದಿದ್ದರೆ, ಬಿಹಾರ ಮತ್ತು ಅಲ್ಲಿನ ಜನರ ಜೀವದ ಜೊತೆ ಈ ರೀತಿ ಚೆಲ್ಲಾಟವಾಡುವುದು ರಾಜ್ಯವನ್ನು ತೀರಾ ಕೆಟ್ಟ ಪರಿಣಾಮದತ್ತ ಕೊಂಡೊಯ್ಯಬಹುದು ಎಂದು ಅವರು ಎಚ್ಚರಿಸಿದರು.