

ಜಮುಯಿ ಜಿಲ್ಲೆಯಲ್ಲಿ ಓರ್ವ ಯುವಕ ಮತ್ತು ಯುವತಿಗೆ ಕಿರುಕುಳ ನೀಡಿದ ಘಟನೆಯನ್ನು ಖಂಡಿಸುವಾಗ, 'ನೈತಿಕ ಪೊಲೀಸ್‌ಗಿರಿಯನ್ನು (moral policing) ಹೆಚ್ಚು ಸಭ್ಯ ಮತ್ತು ಸುಸಂಸ್ಕೃತ ರೀತಿಯಲ್ಲಿ ಮಾಡಬಹುದು' ಎಂದು ಹೇಳಿಕೆ ನೀಡುವ ಮೂಲಕ ಬಿಹಾರದ ಸಚಿವೆ ಹಾಗೂ ಜಮುಯಿ ಕ್ಷೇತ್ರದ ಶಾಸಕಿ ಶ್ರೇಯಸಿ ಸಿಂಗ್ ಮಂಗಳವಾರ ವಿವಾದ ಸೃಷ್ಟಿಸಿದ್ದಾರೆ.
'ನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯಿಂದ ನಡೆಸಬಹುದು. ಆದರೆ, ಆ ಯುವಕ ಮತ್ತು ಯುವತಿಯನ್ನು ನಡೆಸಿಕೊಂಡ ರೀತಿ ಹಾಗೂ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಬಗೆಯನ್ನು ಖಂಡಿತವಾಗಿಯೂ ಸಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಮಾಜಿ ಶೂಟಿಂಗ್ ಕ್ರೀಡಾಪಟು ಹಾಗೂ ಬಿಜೆಪಿ ನಾಯಕಿ ಸಿಂಗ್ 'ಇಂಡಿಯಾ ಟುಡೇ ಟಿವಿ'ಗೆ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಜಮುಯಿ ಜಿಲ್ಲೆಯ ರಸ್ತೆಬದಿಯಲ್ಲಿ ಹುಡುಗ ಮತ್ತು ಹುಡುಗಿಯನ್ನು ತಡೆದು ಗುಂಪೊಂದು ಕಿರುಕುಳ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ ಅವರ ಈ ಹೇಳಿಕೆ ಹೊರಬಂದಿದೆ.
ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಕೇಳಿದಾಗ, 'ಒಬ್ಬ ವ್ಯಕ್ತಿ ತಮ್ಮ ಜೀವನವನ್ನು ಹೇಗೆ ನಡೆಸಲು ಬಯಸುತ್ತಾರೆ ಮತ್ತು ಅದರೊಂದಿಗೆ ಏನು ಮಾಡಲು ಇಚ್ಛಿಸುತ್ತಾರೆ ಎಂಬುದರ ಕುರಿತು ನೀವು ಅಭಿಪ್ರಾಯವನ್ನು ಹೊಂದಿರಬಹುದು. ಬಹುಶಃ ಅದನ್ನು ಮಾಡಲು ಇನ್ನೂ ಉತ್ತಮ ಮಾರ್ಗವಿರಬಹುದು. ಆದರೆ, ಅವರೊಂದಿಗೆ ನಡೆದುಕೊಂಡಿರುವ ರೀತಿ ಮಾತ್ರ ಖಂಡಿತವಾಗಿಯೂ ಸಹಿಸಲಸಾಧ್ಯವಾದುದು. ಹೊರಬಂದಿರುವ ವಿಡಿಯೋಗಳು ಆಘಾತಕಾರಿಯಾಗಿವೆ' ಎಂದು ಅವರು ಹೇಳಿದರು.
'ನೀವು ವಾಸಿಸುವ ಸಮಾಜದಲ್ಲಿರುವ ಒಬ್ಬ ಹುಡುಗ ಮತ್ತು ಹುಡುಗಿಯೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ? ಆ ಹುಡುಗ ಮತ್ತು ಹುಡುಗಿ ಜಮ್ಮುವಿನಿಂದ ಬಂದ ಮಕ್ಕಳೆಂಬುದು ಅವರಿಗೆ ಖಂಡಿತವಾಗಿಯೂ ತಿಳಿದಿರಬೇಕು. ಸ್ಥಳೀಯರು ಅವರೊಂದಿಗೆ ಇಷ್ಟು ಕೆಟ್ಟದಾಗಿ ನಡೆದುಕೊಂಡರು ಎಂಬುದನ್ನು ನನಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ' ಎಂದು ಸಿಂಗ್ ಹೇಳಿದರು.
'ಈ ರೀತಿಯ ಅಪರಾಧ ತಡೆಗಟ್ಟಲು, ಇದಕ್ಕೆ ಕಾರಣರಾದವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರದಂತೆ ನಾನು ನನ್ನ ಕಡೆಯಿಂದ ಖಚಿತಪಡಿಸಿಕೊಳ್ಳಲಿದ್ದೇನೆ. ಈ ಘಟನೆಯು ಭವಿಷ್ಯಕ್ಕೆ ಒಂದು ಮಾದರಿಯಾಗಬೇಕು," ಎಂದು ಅವರು ಹೇಳಿದರು.