

ನವದೆಹಲಿ: ಈಗಾಗಲೇ ವಿಶ್ವದ ಹಲವು ದೇಶಗಳು 18 ವರ್ಷದೊಳಗಿನ ಅಪ್ರಾಪ್ತರಿಗೆ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹೊಂದುವುದನ್ನು ನಿರ್ಬಂಧಿಸಲಾಗಿದೆ. ಈಗ ಇದೇ ಮಾದರಿಯನ್ನ ಕೇಂದ್ರ ಸರ್ಕಾರವು ಭಾರತದಲ್ಲಿ ಜಾರಿ ಮಾಡಬಹುದು ಎನ್ನಲಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಸುಪ್ರೀಂ ಕೋರ್ಟ್!
ಹೌದು, 18 ವರ್ಷದೊಳಗಿನ ಅಪ್ರಾಪ್ತರು ಸ್ವತಂತ್ರವಾಗಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹೊಂದುವುದನ್ನು ನಿರ್ಬಂಧಿಸಲು ಕಠಿಣ ಶಾಸನಬದ್ಧ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಪ್ರಕರಣವೊಂದರ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಅಪ್ರಾಪ್ತರು ಸೋಷಿಯಲ್ ಮೀಡಿಯಾ ಖಾತೆ ತೆರೆಯುವುದನ್ನು ತಡೆಯಲು ಕೇವಲ ಮಾರ್ಗಸೂಚಿಗಳಲ್ಲ, ಬದಲಿಗೆ ಕಡ್ಡಾಯವಾಗಿ ಪಾಲಿಸಲೇಬೇಕಾದ ಶಾಸನಬದ್ಧ ನಿಯಮಗಳನ್ನು ರೂಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜೊತೆಗೆ, ಭಾರತೀಯ ಒಪ್ಪಂದ ಕಾಯ್ದೆಯ ಪ್ರಕಾರ, 18 ವರ್ಷದೊಳಗಿನ ಅಪ್ರಾಪ್ತರು ಯಾವುದೇ ಕಾನೂನುಬದ್ಧ ಒಪ್ಪಂದಗಳಿಗೆ ಸಹಿ ಹಾಕಲು ಅಥವಾ ಒಪ್ಪಿಗೆ ನೀಡಲು ಅರ್ಹರಲ್ಲ ಎಂದು ಅಭಿಪ್ರಾಯಪಟ್ಟ ಪಿಠವು, ಯಾವುದೇ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ (Instagram, Facebook, X ಇತ್ಯಾದಿ) ಬಳಸಲು ಸೈನ್-ಅಪ್ ಆಗುವಾಗ ಅಲ್ಲಿನ ನಿಯಮ ಮತ್ತು ನಿಬಂಧನೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಇದು ಒಂದು ರೀತಿಯ ಕಾನೂನು ಒಪ್ಪಂದವಾಗಿದೆ. ಆದರೆ, ಅಪ್ರಾಪ್ತರು ಇಂತಹ ಒಪ್ಪಂದಗಳನ್ನು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವೇ ಇಲ್ಲದಿರುವಾಗ, 12 ರಿಂದ 15 ವರ್ಷದ ಮಕ್ಕಳು ಸ್ವತಂತ್ರವಾಗಿ ಖಾತೆಗಳನ್ನು ತೆರೆಯಲು ಸಾಮಾಜಿಕ ಜಾಲತಾಣ ಕಂಪನಿಗಳು ಹೇಗೆ ಅವಕಾಶ ನೀಡುತ್ತಿವೆ? ಇದು ದೇಶದ ಕಾನೂನಿಗೆ ವಿರುದ್ಧವಾಗಿದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಮುಂದುವರೆದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ಕಾರದ ಪರವಾಗಿ ಮಾತನಾಡಿ, ಐಟಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು, ಸಾಮಾಜಿಕ ಜಾಲತಾಣಗಳಲ್ಲಿ ಸದಸ್ಯತ್ವ ಪಡೆಯಲು 18 ವರ್ಷ ಕಡ್ಡಾಯಗೊಳಿಸುವ ಶಾಸನಬದ್ಧ ನಿಯಮ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ. ಅದರಂತೆ, ಹೊಸ ನಿಯಮಗಳ ಪ್ರಕಾರ, 18 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸಬೇಕಾದರೆ ಪೋಷಕರ ಕಡ್ಡಾಯ ಅನುಮತಿ ಮತ್ತು ಗುರುತಿನ ದೃಢೀಕರಣ ಅಗತ್ಯವಾಗಬಹುದು. ಆದರೆ, ಶಿಕ್ಷಣಕ್ಕೆ ಸಂಬಂಧಿಸಿದ ಆನ್‌ಲೈನ್ ಕಂಟೆಂಟ್‌ಗಳನ್ನು ಪೋಷಕರ ನಿಯಂತ್ರಣದಲ್ಲಿರುವ ಖಾತೆಗಳ ಮೂಲಕ ವೀಕ್ಷಿಸಲು ವಿನಾಯಿತಿ ನೀಡುವ ಸಾಧ್ಯತೆ ಇದೆ.
ಏನಿದು ಪ್ರಕರಣ?
ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಎಂಬ ಸಂಸ್ಥೆಯು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದ ಮೇಲೆ ಈ ವಿಚಾರಣೆ ನಡೆದಿದೆ. ಅಪ್ರಾಪ್ತರು ಸೋಷಿಯಲ್ ಮೀಡಿಯಾಗೆ ದಾಸರಾಗುತ್ತಿರುವುದು, ಆನ್‌ಲೈನ್ ವಂಚನೆಗಳು, ಸೈಬರ್ ಬುಲ್ಲಿಂಗ್, ಲೈಂಗಿಕ ಶೋಷಣೆ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದನ್ನು ತಡೆಯಲು ಇಂತಹ ಕಠಿಣ ಕಾನೂನಿನ ಚೌಕಟ್ಟು ಅಗತ್ಯ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.