ದಿ. ರಾಮಕೃಷ್ಣ ಹೆಗಡೆ ಹಾಗೂ ದಿ. ಎಸ್. ಬಂಗಾರಪ್ಪ ರಾಜಕೀಯದಲ್ಲಿ ಪರಸ್ಪರ ಮಿತ್ರರು. ಕಣದಲ್ಲಿ ಮಾತ್ರ ಬದ್ಧ ಎದುರಾಳಿಗಳು. ಇಬ್ಬರೂ ರಾಜ್ಯದ ಮುಖ್ಯಮಂತ್ರಿಯಾದವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರಿಬ್ಬರ ಪ್ರಭಾವ ಗಾಢವಾಗಿತ್ತು. ಜಿಲ್ಲೆಯಲ್ಲಿ ಯಾವುದೇ ಅಭ್ಯರ್ಥಿ ನಿಲ್ಲಿಸಿದರೂ ಗೆಲ್ಲಿಸುವ ತಾಕತ್ತು ಇವರಿಬ್ಬರಲ್ಲಿತ್ತು. ಅಭ್ಯರ್ಥಿಗಿಂತ ಇವರ ಹೆಸರೇ ಮತ ತರುತ್ತಿತ್ತು!
ಜನತಾ ಪಕ್ಷ ಕಟ್ಟಿದ ರಾಮಕೃಷ್ಣ ಹೆಗಡೆ ಅವರಿಗೆ 1985ರ ಚುನಾವಣೆಯಲ್ಲಿ ಕುಮಟಾ ವಿಧಾನಸಭೆ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸುವುದು ಎಂಬ ಪ್ರಶ್ನೆ ಎದುರಾಯಿತು. ಹಲವು ಹೆಸರುಗಳ ಪಟ್ಟಿ ಹೆಗಡೆ ಅವರ ಕೈ ಸೇರಿತ್ತು. ಆದರೆ, ಆ ಪಟ್ಟಿಯನ್ನು ಬಿಟ್ಟು ತಾಲೂಕಿನ ಬಹುತೇಕ ಕಡೆಗಳಲ್ಲಿ ಅಪರಿಚಿತರಾಗಿದ್ದ ಬಂಕಿಕೊಡ್ಲ ಪ್ರೌಢಶಾಲೆಯ ಶಿಕ್ಷಕ ಎನ್.ಎಚ್. ಗೌಡ ಅಭ್ಯರ್ಥಿ ಎಂದು ಹೆಗಡೆ ಘೋಷಿಸಿದಾಗ ಅಲ್ಲಿದ್ದ ಬಹುತೇಕರು ಕಕ್ಕಾಬಿಕ್ಕಿಯಾಗಿದ್ದರು. ಹಾಲಕ್ಕಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವ ಕಾಳಜಿ ಈ ಆಯ್ಕೆ ಹಿಂದಿತ್ತು. ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಎನ್.ಎಚ್. ಗೌಡ 8 ಸಾವಿರಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಿದ್ದರು.
ಬಂಗಾರಪ್ಪ ಕೂಡ ಇದೇ ರೀತಿಯ ವರ್ಚಸ್ಸು ಹೊಂದಿದ್ದರು. 1983ರಲ್ಲಿ ಶಿರಸಿಯಲ್ಲಿ ಅಭ್ಯರ್ಥಿ ಹುಡುಕಾಟ ನಡೆದಿತ್ತು. ಆಗ ಶಿರಸಿಯಲ್ಲೇ ಬಹುತೇಕರಿಗೆ ಅಪರಿಚಿತರಾಗಿದ್ದ ಗೋಪಾಲ ಕಾನಡೆ ಅವರ ಕೈಗೆ ಬಂಗಾರಪ್ಪ ಟಿಕೆಟ್ ಇತ್ತರು. 7 ಸಾವಿರ ಮತಗಳ ಅಂತರದಿಂದ ಕಾನಡೆ ಗೆದ್ದಾಗ ಬಂಗಾರಪ್ಪ ಪ್ರಭಾವ ಎಷ್ಟು ಎನ್ನುವುದು ಸಾಬೀತಾಯಿತು. ಮುಂದೆ ಇದೇ ಕಾನಡೆ ಅವರಿಗೆ ಬಂಗಾರಪ್ಪ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸಿ ಗೆಲ್ಲಿಸಿದರು. ಹೆಗಡೆ ಹಾಗೂ ಬಂಗಾರಪ್ಪ ಅವರ ಹೆಸರು ಇಂದಿಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತಗಳನ್ನು ತರುವ ಶಕ್ತಿಯನ್ನು ಹೊಂದಿದೆ.
- ವಸಂತಕುಮಾರ್ ಕತಗಾಲ