-Legislature-Party-mee.jpg?w=480&auto=format%2Ccompress&fit=max)
ಬೆಂಗಳೂರು: ಜಾತ್ಯತೀತ ಜನತಾದಳದ ಶಾಸಕರಿಗೆ ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ಮೇಲೆ ವಿಶ್ವಾಸ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆ ತಾಜಾ ಉದಾಹರಣೆ.
ಬೆಳಗಾವಿ ಅಧಿವೇಶನದಲ್ಲಿ ಜೆಡಿಎಸ್ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ 52 ಶಾಸಕರ ಪೈಕಿ ಹಾಜರಾಗಿದ್ದು 23 ಶಾಸಕರಷ್ಟೆ.
22 ಶಾಸಕರು ಹಾಗೂ 9 ವಿಧಾನಪರಿಷತ್ ಸದಸ್ಯರು ಹಾಜರಿದ್ದರು ಎಂದು ಶಾಸಕಾಂಗ ಪಕ್ಷದ ನಾಯಕರು ಹೇಳಿದರೂ, ಜೆಡಿಎಸ್ ಬಿಡುಗಡೆ ಮಾಡಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇವಲ 23 ಜನರಿದ್ದುದು ಸ್ಪಷ್ಟ ವಾಗಿದೆ. ಕೋರ್ ಸಮಿತಿ ಸದಸ್ಯ(ಅಧ್ಯಕ್ಷ?) ಬಸವಾರಜ ಹೊರಟ್ಟಿ ಸೇರಿದಂತೆ ಭಿನ್ನರಾಗವನ್ನೇ ಹಾಡುತ್ತಿರುವ ಚಲುವರಾಯ ಸ್ವಾಮಿ, ಜಮೀರ್ ಅಹಮದ್, ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ಖುಬಾ, ಬಾಲಕೃಷ್ಣ ಸೇರಿದಂತೆ 20 ಶಾಸಕರು ಹಾಜರಿರಲಿಲ್ಲ.
ಸಿದ್ದರಾಮಯ್ಯ ಜತೆ ಕುಮಾರಸ್ವಾಮಿ ಕೈ ಜೋಡಿಸಿದ್ದಾರೆ. ಸಭೆಗೆ ಹೋದರೆ ಏನೂ ಪ್ರಯೋಜನವಿಲ್ಲ. ಅಧಿವೇಶನದಲ್ಲಿ ಕುಮಾರಸ್ವಾಮಿ ನಡೆದುಕೊಳ್ಳುವ ರೀತಿಯೇ ಬೇರೆ. ಯಾವ ಹೋರಾಟವನ್ನೂ ಮಾಡುವುದಿಲ್ಲ. ಹೀಗಾಗಿ ಶಾಸಕಾಂಗ ಪಕ್ಷದಿಂದ ಹೊರಗುಳಿಯುವುದೇ ಲೇಸು ಎಂದು ಹಲವು ಶಾಸಕರು ನಿರ್ಧರಿಸಿಯೇ ಸಭೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಅಧಿವೇಶನವನ್ನು ಹಾಳು ಮಾಡುವುದು ಬೇಡ. ಸಕಾರಾತ್ಮಕವಾಗಿ ಅಧಿವೇಶನ ನಡೆಸಲು ಅವಕಾಶ ನೀಡೋಣ ಎಂದು ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆಯುತ್ತೇನೆ ಎಂದಿರುವ ಕುಮಾರಸ್ವಾಮಿ ಮತ್ತೊಂದೆಡೆ ಕಬ್ಬು ಬೆಲೆ ಸೇರಿದಂತೆ ರೈತರ ಸಂಕಷ್ಟ ಹಾಗೂ ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತದೆ ಎಂದೂ ಹೇಳಿದ್ದಾರೆ.
ಇದೆಲ್ಲ ತೋರ್ಪಡಿಕೆ ಎಷ್ಟೇ ಎಂದು ಜೆಡಿಎಸ್ ಶಾಸಕರೇ ಲೇವಡಿ ಮಾಡಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಮರು ಪ್ರವೇಶದಿಂದ ಎಲ್ಲವೂ ಸರಿಹೋಗುತ್ತದೆ. ಮುನಿಸಿಕೊಂಡಿರುವ ತಮ್ಮ ಸ್ನೇಹಿತರನ್ನು ಸಮಾಧಾನಪಡಿಸಿ ಒಂದು ಗೂಡಿಸುತ್ತಾರೆ ಎಂಬ ನಿರೀಕ್ಷೆಯನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಹುಸಿಗೊಳಿಸಿದೆ.
Advertisement