ಅಕ್ರಮದಲ್ಲಿ ಸರ್ಕಾರದ ಪ್ರಭಾವಿಗಳೇ ಶಾಮೀಲು

ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಮರಳು ಗಣಿಗಾರಿಕೆ ಒಂದೇ ಕಾರಣ. ಎರಡೂ ಅಕ್ರಮದಲ್ಲಿಯೂ ಆಡಳಿತ ಪಕ್ಷದ ಪ್ರಭಾವಿಗಳೇ ಭಾಗಿಯಾಗಿದ್ದಾರೆ..
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ (ಸಂಗ್ರಹ ಚಿತ್ರ)
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ (ಸಂಗ್ರಹ ಚಿತ್ರ)
Updated on

-ರಾಜೀವ್ ಹೆಗಡೆ
ಬೆಳಗಾವಿ:
ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಮರಳು ಗಣಿಗಾರಿಕೆ ಒಂದೇ ಕಾರಣ. ಎರಡೂ ಅಕ್ರಮದಲ್ಲಿಯೂ ಆಡಳಿತ ಪಕ್ಷದ ಪ್ರಭಾವಿಗಳೇ ಭಾಗಿಯಾಗಿದ್ದಾರೆ. ಪರಿಣಾಮವಾಗಿ ಈ ಸಮಸ್ಯೆಗೆ ಸಿದ್ದರಾಮಯ್ಯ ಸರ್ಕಾರ ಪರಿಹಾರ ನೀಡಲು ವಿಫಲವಾಗಿದೆ.

ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕಠಿಣ ಕ್ರಮ ಜರುಗಿಸಿ ಒತ್ತಡ ಹೇರುವ ಬದಲು ರಾಜ್ಯ ಸರ್ಕಾರ ಅವರಿಗೆ ತೆರಿಗೆ ವಿನಾಯಿತಿ ಮಾಡಲು ಮುಂದಾಗಿದೆ. ಕಾನೂನು ಇರಿಸಿಕೊಂಡು ಇಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದರೆ ಸಕ್ಕರೆ ಕಾರ್ಖಾನೆ ಮಾಲೀಕರ ಹಾರಾಟ ಇನ್ನೂ ಹೆಚ್ಚಾಗುತ್ತದೆ.  ಸಕ್ಕರೆ ಲಾಭಿಗೆ ಸರ್ಕಾರ ಸಂಪೂರ್ಣ ಮಣಿದಿದೆ. ಹಾಗೆಯೇ ಮರಳು ಗಣಿಗಾರಿಕೆ ಪರಿಣಾಮವಾಗಿ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ನಿಂತುಹೋಗಿದೆ.

ಸುಲಭವಾಗಿ ಲಂಚದ ಹಣ ಬರುವ ಲಾಬಿಗಳಿಗೆ ಸರ್ಕಾರ ಕೈ ಹಾಕುವುದಿಲ್ಲ ಎನ್ನುವುದು ಸಾಬೀತಾಗಿದೆ. ಪಾರದರ್ಶಕ ಆಡಳಿತ ಎಂದರೆ ಏನು ಅಂತಾ ಪ್ರಶ್ನಿಸುವ ಹಂತಕ್ಕೆ ಸರ್ಕಾರ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಬುಧವಾರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಪ್ರಶ್ನಿಸಿದ್ದಾರೆ. ಸಕ್ಕರೆ, ಮರಳು ಅಕ್ರಮದಲ್ಲಿ ಸರ್ಕಾರ ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ತೀವ್ರ ಗೊಳಿಸುತ್ತೇವೆ ಎಂದು ಶೆಟ್ಟರ್ ಎಚ್ಚರಿಸಿದ್ದಾರೆ.

ಸಕ್ಕರೆ ಲಾಬಿಯಲ್ಲಿ ಬಿದ್ದಿರುವ ಸಿಎಂ
ಬಿಜೆಪಿ ಸರ್ಕಾರ ಅಧಿಕಾರಗದಲ್ಲಿದ್ದಾಗ ಕಬ್ಬು ಬೆಳೆಗಾರರ ಸಮಸ್ಯೆ ಇರಲಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಒತ್ತಡ ತರುವ ಮೂಲಕ ರೈತರ ಬೇಡಿಕೆ ಈಡೇರಿಸಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ಈ ಕೆಲಸ ಮಾಡಲು ವಿಫಲವಾಗಿದೆ. ಕಾರ್ಖಾನೆ ಮಾಲೀಕರಿಗೆ ರೈತರಿಗೆ ಸರ್ಕಾರ ನಿಗದಿ ಮಾಡಿದ ಹಣ ಬಿಡುಗಡೆ ಮಾಡುತ್ತಾರೆ. ಆದರೆ ಸರ್ಕಾರವೇ ಅವರ ಮುಂದೆ ಮಂಡಿಯೂರಿ ಕುಳಿತರೆ ಅವರು ಇನ್ನಷ್ಟು ಆಟವಾಡಿಸುತ್ತಾರೆ. ಆದರೆ ಈ ಸರ್ಕಾರಕ್ಕೆ ಬುದ್ದಿ ಬರಲ್ಲ.

ಲಕ್ಷ್ಮಣ ಸವದಿ ಅವರ ಮುಂದಾಳತ್ವದ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ 2650 ದರ ನೀಡಲು ಸಾಧ್ಯವಿರುವಾಗ ಇತರರಿಗೆ ಏಕೆ ಸಾಧ್ಯವಿಲ್ಲ. ನಷ್ಟವೇ ಇಲ್ಲದಿರುವಾಗ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿ ಇನ್ನಷ್ಟು ಲಾಭ ಮಾಡುತ್ತಿದೆ ಎಂದಾದರೆ ಸರ್ಕಾರ ರೈತರ ಪರವಿದೆಯೋ ಅಥವಾ ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿದೆಯೋ ಎನ್ನುವುದಕ್ಕೆ ಈ ವಿಚಾರ ಸಾಕು.

ಮರಳು ಗಣಿಗಾರಿಕೆಯಲ್ಲಿ ಕಾಂಗ್ರೆಸ್ ಮುಖಂಡರು
ಮರಳು ಗಣಿಗಾರಿಕೆಯಲ್ಲಿ ಕಾಂಗ್ರೆಸ್ ಮುಖಂಡರೇ ಭಾಗಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಬಿಜೆಪಿ ಸದಸ್ಯರು ಸದನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಮರಳು ದರ ಹತ್ತು ಹದಿನೈದು ಪಟ್ಟು ಹೆಚ್ಚಾಗಿದೆ. ಇದರಿಂದ ಅಭಿವೃದ್ಧಿ ಚಟುವಟಿಕೆ ಸಂಪೂರ್ಣವಾಗಿ ನಿಂತಿವೆ. ಆದರೆ ಇದರ ಜವಾಬ್ದಾರಿ ಹೊತ್ತ ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಮೌನವಹಿಸಿರುವುದನ್ನು ನೋಡಿದರೆ ಮತ್ತಷ್ಟು ಸಂದೇಹ ಬರುತ್ತದೆ. ಮತ್ತೊಂದೆಡೆ ಮುಖ್ಯಮಂತ್ರಿಯೂ ಮಧ್ಯ ಪ್ರವೇಶಿಸಿ ಪರಿಹಾರ ನೀಡುತ್ತಿಲ್ಲ. ಅಕ್ರಮ ಮರಳು ಗಣಿಗಾರಿಕೆಯಿಂದ 6 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆಯುತ್ತಿದೆ. ಸುಲಭವಾಗಿ ಹಣ ಬರುತ್ತಿರುವಾಗ ಮುಖ್ಯಮಂತ್ರಿಗಳ ಕ್ರಮ ತೆಗೆದುಕೊಳ್ಳದಿರುವುದು ಸಾಮಾನ್ಯ.

ಬಿಜೆಪಿ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ
ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಧಿವೇಶನ ನಡೆಸುತ್ತಿರಬಹುದು. ಆದರೆ ಬಿಜೆಪಿಯು ಕಾಂಗ್ರೆಸ್‌ನ ದುರಾಡಳಿತ ಹಾಗೂ ಭ್ರಷ್ಟಾಚಾರದ ಬಗ್ಗೆ ಮೃದು ಧೋರಣೆ ತಳೆದಿಲ್ಲ. ನಾಲ್ವರು ಸಚಿವರಿಗೆ ಅಸಹಕಾರ ತೋರುತ್ತೇವೆ ಎಂದು ನಾವೇ ಮೊದಲು ಹೇಳಿದ್ದು, ನಿಜ. ಆದರೆ ಕೆಲವರು ಪ್ರಮುಖ ಖಾತೆ ಹೊಂದಿರುವಾಗ ಅಸಹಾಕಾರ ತೋರುವುದರಿಂದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಪಟ್ಟಿಯಲ್ಲಿ ಸಕ್ಕರೆ ಸಚಿವರೂ ಇದ್ದಾರೆ. ಆಗ ಕಬ್ಬಿನ ಸಮಸ್ಯೆಗೂ ಪರಿಹಾರ ದೊರೆಯುವುದಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂಬ ಕಾಳಜಿಯಿಂದ  ಸುಮ್ಮನಾಗಿದ್ದೇವೆ. ಆದರೆ ಸಚಿವರ ಭೂ ಅಕ್ರಮವನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡ
ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕು ಎನ್ನುವವರ ಪರ ನಮ್ಮ ಪಕ್ಷ ಅಥವಾ ನಾನು ವೈಯುಕ್ತಿಕವಾಗಿ ಇಲ್ಲ. ಇಂತಹ ಹೇಳಿಕೆ ಹಾಗೂ ಹೊರಾಟದ ಹಿಂದೆ ಬಿಜೆಪಿಯ ಕೈವಾಡವಿದೆ ಎನ್ನುವುದು ಆಧಾರರಹಿತ ಆರೋಪ. ತೆಲಂಗಾಣ ಹಾಗೂ ವಿದರ್ಭ ರಾಜ್ಯ ರಚನೆಗೆ ಬಿಜೆಪಿ ಬಹಿರಂಗವಾಗಿಯೇ ಬೆಂಬಲ ಸೂಚಿಸಿದೆ. ಒಂದೊಮ್ಮೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕಿದ್ದರೆ ಬಿಜೆಪಿ ಬಹಿರಂಗವಾಗಿಯೇ ಹೇಳುತ್ತದೆ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಬದಲಾಗಿ ಅಭಿವೃದ್ಧಿ ಕೆಲಸಕ್ಕೆ ಎಲ್ಲ ಪಕ್ಷಗಳು ಸಹಕಾರ ನೀಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com