ಮತ್ತೆ ಮೊ'ಬೈಲಾಯ್ತು' ಮರ್ಯಾದೆ

ಮೊಬೈಲ್‌ಗೂ ವಿಧಾನ ಮಂಡಲಕ್ಕೂ ಆಗಿಬರದೇನೋ? ಕಳೆದ ಬಿಜೆಪಿ ಸರಕಾರದ ಅವಧಿಯಲ್ಲೂ ಮೂವರು ಸಚಿವರು ...
ವಿಧಾನಸಭೆಯಲ್ಲಿ ಕುಳಿತು ಮೊಬೈಲ್‌ ನಲ್ಲಿ ಚಿತ್ರ ವೀಕ್ಷಿಸುತ್ತಿರುವ ಶಾಸಕರು
ವಿಧಾನಸಭೆಯಲ್ಲಿ ಕುಳಿತು ಮೊಬೈಲ್‌ ನಲ್ಲಿ ಚಿತ್ರ ವೀಕ್ಷಿಸುತ್ತಿರುವ ಶಾಸಕರು

ವಿಧಾನಸಭೆ: ಮೊಬೈಲ್‌ಗೂ ವಿಧಾನ ಮಂಡಲಕ್ಕೂ ಆಗಿಬರದೇನೋ?
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲೂ  ಮೂವರು ಸಚಿವರು ಅಧಿವೇಶನ ಸಂದರ್ಭದಲ್ಲೇ ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿ ದೇಶಾದ್ಯಂತ ಸುದ್ದಿಯಾಗಿ ಅಧಿಕಾರ ಕಳೆದುಕೊಂಡಿದ್ದರು. ಇದೀಗ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕಬ್ಬು ಬೆಲೆ ನಿಗದಿ ವಿಚಾರ ಸಂಬಂಧ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಬಿಜೆಪಿ ಶಾಸಕ ಪ್ರಭು ಚೌಹಾಣ್ ಮಾತ್ರ ತನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರವನ್ನು ಆಕ್ಷೇಪಾರ್ಹ ರೀತಿಯಲ್ಲಿ ವೀಕ್ಷಿಸಿ ಬುಧವಾರ ವಿವಾದ ಸೃಷ್ಟಿಸಿದ್ದಾರೆ.

ಮೊಬೈಲ್ ಅವಾಂತರ ಇಷ್ಟಕ್ಕೇ ನಿಂತಿಲ್ಲ. ಕಲಾಪ ಸಮಯದಲ್ಲೇ ಬಿಜೆಪಿ ಇನ್ನೆಬ್ಬ ಶಾಸಕ ಯು.ಬಿ ಬಣಕಾರ್ ಮೊಬೈಲ್‌ನಲ್ಲಿ ಕ್ಯಾಂಡಿಕ್ರಶ್ ಆಡುತ್ತಿದ್ದರು. ಇನ್ನೊಂದೆಡೆ ಸಚಿವ ಅಂಬರೀಷ್ ಮೊಬೈಲ್‌ನಲ್ಲಿ ಚಿತ್ರ ವೀಕ್ಷಿಸುತ್ತಾ ಕುಳಿತು ಬಿಜೆಪಿಯವರ ಜತೆ ಸ್ಥಾನ ಹಂಚಿಕೊಂಡಿದ್ದಾರೆ. ಹಿಂದಿನ ಘಟನೆಗಳಿಂದಲೂ ಪಾಠ ಕಲಿಯದ ಬಿಜೆಪಿ ಶಾಸಕರು ಈಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದನದಲ್ಲಿ ಮೊಬೈಲ್ ನಿಷೇಧದ ಬಗ್ಗೆ ಚಿಂತನೆ ನಡೆಸಲಾಗುವುದೆಂದು ಸ್ಪೀಕರ್, ಕಾಗೋಡು ಹೇಳಿದ್ದಾರೆ.

ರವಿ ಸುಬ್ರಮಣ್ಯ ಅವರು ಟಿವಿ ಕ್ಯಾಮೆರಾಗಳು ಇದನ್ನು ಸೆರೆ ಹಿಡಿದು ಸುದೇದಿ ಮಾಡುತ್ತವೆ. ಮೊಬೈಲ್ ಬಂದ್ ಮಾಡಿ ಎಂದು ಹೇಳಿದ್ದಾರೆ. ಅದರ ನಂತರ ಪ್ರಭು ಚೌಹಾಣ್ ಅವರು ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರವನ್ನು ಬ್ಲೋ ಅಪ್ ಮಾಡಿದ್ದಾರೆ. ಅದು ಅವರ ಎದೆಗೆ ಫೋಕಸ್ ಆಗಿದ್ದು, ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆದರೆ ಆ ಆರೋಪವನ್ನು ಪ್ರಭು ಚೌಹಾಣ್ ನಿಕಾಕರಿಸಿದ್ದಾರೆ. ನಾನು ಕೆಟ್ಟ ದೃಷ್ಟಿಯಿಂದ ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರವನ್ನು ವೀಕ್ಷಿಸಿಲ್ಲ. ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ನೋಡುವಾಗ ಆಕಸ್ಮಿಕವಾಗಿ ಅವರ ಚಿತ್ರವೂ ಬಂದಿದೆ. ಚಿತ್ರದ ಜತೆಯಲ್ಲಿ ಬರೆಯಲಾಗಿದ್ದ ಒಕ್ಕಣೆ ಓದಲೆಂದು ಜೂಮ್ ಮಾಡಿದೆ ಅಷ್ಟೇ ಎಂದಿದ್ದಾರೆ.

ಬಿಜೆಪಿ ಕಳವಳ: ಟಿವಿಯಲ್ಲಿ ಚಿತ್ರ ವೀಕ್ಷಣೆ ದೃಶ್ಯ ಪ್ರಸಾರವಾಗುತ್ತಿದ್ದಂತೆ ಕಂಗೆಟ್ಟ  ಪ್ರಭು ಚೌಹಾಣ್ ಅದಕ್ಕೆ ಸ್ಪಷ್ಟೀಕರಣ ನೀಡಲಾರಂಭಿಸಿದರು. ವಿವಾದ ಸ್ಫೋಟಗೊಳ್ಳುತ್ತಿದ್ದಂತೆ ಬಿಜೆಪಿ ಮುಖಂಡರೂ ಕಳವಳದ ಮಡುವಿನಲ್ಲಿ ಬಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಪ್ರಭು ಚೌಹಾಣ್ ಅವರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ವಿವರಣೆ ಕೇಳಿದರು. ನಂತರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲೂ ಇದು ಪ್ರಸ್ತಾಪವಾಗಿದ್ದು , ಸದಸ್ಯರು ಸದನದಲ್ಲಿ ಗಂಭೀರವಾಗಿ ನಡೆದುಕೊಳ್ಳಬೇಕು. ಇಂಥ ವಿವಾದಾತ್ಮಕ ಸುದ್ದಿಗಳಿಂದ ಪಕ್ಷಕ್ಕೆ ಕೆಟ್ಟ ಹೆಸರು ತರಬಾರದು. ಮೊಬೈಲ್ ನಿರ್ವಹಿಸಲು ಬಾರದಿದ್ದರೆ, ಸದನದೊಳಗೆ ಮೊಬೈಲ್‌ನ್ನು ತರಬೇಡಿ. ಅನವಶ್ಯಕ ಕಾರಣಕ್ಕೆ ಮೊಬೈಲ್ ಬಳಸಬೇಡಿ ಎಂದು ಸೂಚನೆ ನೀಡಲಾಗಿದೆ.


ಚಿಗುರಿದ ಟಿವಿ ಚಿಂತನೆ: ಈ ಹಿಂದೆ ಬಿಜೆಪಿ ಸಚಿವರು ಅಶ್ಲೀಲ  ಚಿತ್ರ ನೋಡಿ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಖಾಸಗಿ ವಾಹಿನಿಗಳಿಗೆ ಪ್ರವೇಶ ನಿಷೇಧಿಸಲು ಚಿಂತನೆ ನಡೆದಿತ್ತು. ಮಾತ್ರವಲ್ಲ ಕಲಾಪ ದೃಶ್ಯ ಚಿತ್ರೀಕರಿಸುವುದಕ್ಕೆ ಸಂಸತ್ ಮಾದರಿಯಲ್ಲಿ ಸರ್ಕಾರದ ವತಿಯಿಂದಲೇ ಪ್ರತ್ಯೇಕ ಟಿವಿ ವಾಹಿನಿ ಆರಂಭಿಸುವ ಬಗ್ಗೆ ಚರ್ಚೆ ನಡೆದಿತ್ತು. ಈಗ ಮತ್ತೆ ಆ ಪ್ರಸ್ತಾಪಕ್ಕೆ ಚಾಲನೆ ದೊರೆತಿದೆ.

ಪರಮೇಶ್ವರ ಖಂಡನೆ:
ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಸಂಸ್ಕೃತಿ , ಲಕ್ಷ್ಮಣರೇಖೆ , ಶಿಸ್ತಿನ ಪಕ್ಷ ಎಂದು ಹೇಳುತ್ತಿದ್ದ ಬಿಜೆಪಿಯವರ ಮುಖವಾಡ ಕಳಚಿ ಬಿದ್ದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಆಕ್ರೋಶ  ವ್ಯಕ್ತ ಪಡಿಸಿದ್ದಾರೆ. ಸದನದಲ್ಲಿ ಗಂಭೀರ ಚರ್ಚೆ ನಡೆಯುವ ಸಂದರ್ಭದಲ್ಲಿ  ಅಸಭ್ಯ ವರ್ತನೆ ಖಂಡನೀಯ. ಬಿಜೆಪಿ ಸಂಸ್ಕೃತಿ ಏನು ಎಂಬುದು ಇದರಿಂದ ಜಗಜ್ಜಾಹೀರಾಗಿದೆ. ಹಿಂದೆ ಇದೇ ಪಕ್ಷದ ಸಚಿವರು ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದಿದ್ದರು. ಈಗ ಸುವರ್ಣಸೌಧಕ್ಕೂ ಕೆಟ್ಟ ಸಂಪ್ರದಾಯ ಕಾಲಿಟ್ಟಿದೆ ಎಂದು ಟೀಕಿಸಿದ್ದಾರೆ.


ಮಗಳ ಮದುವೆಯ ಭಾವಚಿತ್ರವನ್ನು ಶಾಸಕ ಮಿತ್ರರಿಗೆ ತೋರಿಸುತ್ತಿದ್ದೆ. ಆಗ ರಾಷ್ಟ್ರೀಯ ನಾಯಕರಾದ ಮೋದಿ, ಅಮಿತ್ ಷಾ ಮೊದಲಾದವರ ಭಾವಚಿತ್ರ ಆ ಫೋಲ್ಡರ್‌ನಲ್ಲಿತ್ತು. ಅದನ್ನು ತೋರಿಸುತ್ತಿದ್ದಾಗ ಪ್ರಿಯಾಂಕಾ ಗಾಂಧಿ ಅವರ ಫೋಟೋದ ಪಕ್ಕ ಯಾವುದೋ ಬರಹವಿತ್ತು, ಅದನ್ನು ನೋಡುವುದಕ್ಕಾಗಿ ಫೋಟೋವನ್ನು ಹಿಗ್ಗಿಸಿದೆ. ಇದನ್ನು ಬಿಟ್ಟರೆ ಬೇರೆ ಉದ್ದೇಶವಿರಲಿಲ್ಲ.

-ಪ್ರಭು ಚೌಹಾಣ್, ಬಿಜೆಪಿ  ಶಾಸಕ


ವಿಧಾನಸಭೆಯಲ್ಲಿ  ಫೋಟೋ ವೀಕ್ಷಿಸಿದ ಶಾಸಕ ಪ್ರಭು ಚೌವ್ಹಾಣ್ ಅವರಿಂದ ವಿವರಣೆ ಪಡೆದು ಬಳಿಕ ಮುಂದಿನ ಕ್ರಮದ ನಿರ್ಧಾರ ಕೈಗೊಳ್ಳುವೆ. ಈ ಹಿಂದೆ ವಿಧಾನಸಭೆಯಲ್ಲಿ ಬ್ಲೂಫಿಲಂ ನೋಡಿದವರ ಮೇಲೂ ಕಠಿಣ ಕ್ರಮ ಕೈಗೊಂಡಿದ್ದೆವು. ಮುಖ್ಯಮಂತ್ರಿ ಇದು ಬಿಜೆಪಿಯವರ ಹಳೆ ಚಾಳಿ ಇದು ಎಂದಿರುವುದು ಸರಿಯಲ್ಲ. ಪಕ್ಷಗಳಿಗೂ ಇಂತಹ ಘಟನೆಗಳಿಗೂ ಸಂಬಂಧವಿಲ್ಲ. ಕಾಂಗ್ರೆಸ್‌ನವರ  ಕರ್ಮಕಾಂಡಗಳು ಸಾಕಷ್ಟಿವೆ. ಅವರೇನೂ ಸಾಚಾಗಳಲ್ಲ. ಇಂತಹ ವಿದ್ಯಮಾನಗಳನ್ನು ಪಕ್ಷದಿಂದ ಹ1ರತಾಗಿ ನೋಡಬೇಕು.

-ಪ್ರಹ್ಲಾದ ಜೋಶಿ
ಬಿಜೆಪಿ ರಾಜ್ಯಾಧ್ಯಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com