ಅತ್ತ ಅಧಿನಾಯಕಿ ಭೀತಿ, ಇತ್ತ ಅಧಿವೇಶನ ಫಜೀತಿ

ಶಾಸಕ ಪ್ರಭು ಚೌಹ್ವಾಣ್ ಪ್ರಕರಣ ಕಾಂಗ್ರೆಸ್ಸನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದು, ಮುಳುಗಲೂ ಆಗದೆ ತೇಲಲೂ ಆಗದ ಸ್ಥಿತಿಗೆ ದೂಡಿದೆ.
ಅಧಿವೇಶನದಲ್ಲಿ ಪರಸ್ಪರ ವಾಗ್ವಾದಕ್ಕಿಳಿದಿರುವ ಸಿಎಂ ಸಿದ್ದರಾಮಯ್ಯ ಮತ್ತು ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ
ಅಧಿವೇಶನದಲ್ಲಿ ಪರಸ್ಪರ ವಾಗ್ವಾದಕ್ಕಿಳಿದಿರುವ ಸಿಎಂ ಸಿದ್ದರಾಮಯ್ಯ ಮತ್ತು ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ

-ರಾಘವೇಂದ್ರ ಭಟ್
ಬೆಳಗಾವಿ:
ಶಾಸಕ ಪ್ರಭು ಚೌಹ್ವಾಣ್ ಮೊಬೈಲ್‌ನಲ್ಲಿ ಪ್ರಿಯಾಂಕಾ ಗಾಂಧಿ ಭಾವಚಿತ್ರ ವೀಕ್ಷಿಸಿದ ಪ್ರಕರಣ, ಆಡಳಿತಾರೂಢ ಕಾಂಗ್ರೆಸ್ಸನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದು, ಮುಳುಗಲೂ ಆಗದೆ ತೇಲಲೂ ಆಗದ ಸ್ಥಿತಿಗೆ ದೂಡಿದೆ.

ಪ್ರಭು ಚೌಹ್ವಾಣ್ ಆಕಸ್ಮಿಕವಾಗಿ ಪ್ರಿಯಾಂಕಾ ಭಾವಚಿತ್ರ ಮಾಡಿ ನೋಡಿದ್ದಾರೆ ಎಂಬುದು ಬಹುತೇಕ ಶಾಸಕರಿಗೆ ಮನದಟ್ಟಾಗಿದೆ. ಆದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಮಗಳ ಚಿತ್ರವನ್ನೇ ಆಕ್ಷೇಪಾರ್ಹ ರೀತಿಯಲ್ಲಿ ನೋಡಿರುವುದರಿಂದ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಸೇರಿದಂತೆ ಎಲ್ಲ ಮುಖಂಡರು ಈ ವಿಚಾರದಲ್ಲಿ ರಕ್ಷಣಾತ್ಮಕ ಆಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪ್ರಕರಣವನ್ನು ದಿನವಿಡೀ ಜೀವಂತವಾಗಿಡುವ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರು ಮತ್ತು ಸಚಿವರೇ ಈ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ನಡೆಸಬೇಕಾದ ನಾವು, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದಿತ್ತು. ಆದರೆ, ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಬಹುಮತವಿರುವ ಸರ್ಕಾರವಿದ್ದರೂ ಏನು ಮಾಡುತ್ತಿದ್ದೀರಿ ಎಂದು ವರಿಷ್ಠರು ಪ್ರಶ್ನೆ ಮಾಡುವ ಸಾಧ್ಯತೆ ಇರುವುದರಿಂದ ಸದನದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಹೇಳುತ್ತಿದ್ದಾರೆ.

ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಸಭಾಧ್ಯಕ್ಷರ ಪೀಠದ ಎದುರಿನ ಆವರಣಕ್ಕೆ ತೆರಳಿ ಧರಣಿ ನಡೆಸಿದರು. ಇದಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆರೋಪ-ಪ್ರತ್ಯಾರೋಪಗಳಿಂದ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗದ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಸಂಧಾನ ಸೂತ್ರ ಹೆಣೆಯಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಕೊಠಡಿಯಲ್ಲಿ ನಡೆದ ಸಭೆ ಸಿಎಂ ಸಿದ್ದರಾಮಯ್ಯನವರು ಹಿಡಿದ ಹಠದಿಂದ ವ್ಯರ್ಥವಾಯಿತು. ಪ್ರಭು ಚೌಹ್ವಾಣ್ ಅವರನ್ನು ಸದನಕ್ಕೆ ಕರೆಸಿ ಅವರಿಂದ ಬೇಷರತ್ ಕ್ಷಮೆ ಕೇಳಿಸುವುದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ನಿರ್ಧರಿಸಿದ್ದರು.

ಇದಕ್ಕೆ ಬಿಜೆಪಿ ಸದಸ್ಯರು ಮಾತ್ರವಲ್ಲ, ಖುದ್ದು ಪ್ರಭು ಚೌಹ್ವಾಣ್ ಒಪ್ಪಿದ್ದರು. ಆದರೆ ಸಭೆ ಆರಂಭಗೊಂಡ ಕೆಲವು ಹೊತ್ತಿನ ನಂತರ ಬಂದ ಸಿದ್ದರಾಮಯ್ಯ, ಪ್ರಭುಚೌಹ್ವಾಣ್ ಅವರನ್ನು ಎರಡು ದಿನದ ಮಟ್ಟಿಗಾದರೂ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಇದು ಬಿಜೆಪಿ ಶಾಸಕರನ್ನು ಕೆರಳಿಸಿತು. ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು. ಆಗಿರುವ ಅಚಾತುರ್ಯದ ಬಗ್ಗೆ ಚೌಹ್ವಾಣ್ ಕ್ಷಮೆ ಯಾಚಿಸಿದ್ದಾರೆ. ಆದರೆ ನೀವು ಹೀಗೆ ಹಠ ಹಿಡಿದರೆ ನಾವು ಅದೇ ರೀತಿ ವರ್ತಿಸಬೇಕಾಗುತ್ತದೆ. ಸಚಿವ ಅಂಬರೀಷ್ ಹಾಗೂ ಶಾಸಕ ಎಸ್‌ಎಸ್ ಮಲ್ಲಿಕಾರ್ಜುನ ಅವರೂ ಸದನದಲ್ಲಿ ಮೊಬೈಲ್ ವೀಕ್ಷಿಸಿರುವುದು ಟಿವಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದೆ.

ಹೀಗಾಗಿ ಅವರನ್ನೂ ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸಚಿವೆ ಉಮಾಶ್ರೀ ಅವರು ಹೇಳಿದ ಮಾತು ಇನ್ನಷ್ಟು ವಿವಾದಕ್ಕೆ ಕಾರಣವಾಯ್ತು. ಏನು ಆಕಸ್ಮಿಕವಾಗಿ ನೋಡಿದ್ದಾರೆಯೇ? ಎದೆಯ ಮೇಲೆ ಕೈ ಇಟ್ಟು ಝೂಮ್ ಮಾಡಿದ್ದಾರೆ ಎಂದಿದ್ದಕ್ಕೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಸಭೆ ಯಾವುದೇ ನಿರ್ಣಯ ಇಲ್ಲದೇ ಅಂತ್ಯ ಕಂಡಿದ್ದರಿಂದ ಸ್ಪೀಕರ್ ಮತ್ತೆ ಕಲಾಪವನ್ನು ಕರೆದರು. ಮತ್ತೆ ಗಲಾಟೆ ಪ್ರತಿಭಟನೆ ನಡೆದು, ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಲಾಯಿತು.

ಉಭಯ ಸದನಗಳ ಸಭೆ: ಆದರೆ ಇದೇ ಪರಿಸ್ಥಿತಿ ಮೇಲ್ಮನೆಯಲ್ಲೂ ಸೃಷ್ಟಿಯಾದ್ದರಿಂದ ಮಧ್ಯಾಹ್ನ 3 ಗಂಟೆ ನಂತರ ಉಭಯ ಸದನಗಳ ಸಭಾನಾಯಕರನ್ನು ಒಳಗೊಂಡ ಸರ್ವಪಕ್ಷಗಳ ಸಭೆಯನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಕಚೇರಿಯಲ್ಲಿ ಕರೆಯಲಾಯಿತು. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಈ ಸಭೆಯಲ್ಲೂ ಚೌಹ್ವಾಣ್ ಅಮಾನತಿಗೆ ಆಗ್ರಹಿಸಿದರು. ಆದರೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಅಂಬರೀಷ್ ರಾಜಿನಾಮೆಗೆ ಪಟ್ಟು ಹಿಡಿದರು.

ಶಾಸಕರು ತಪ್ಪು ಮಾಡಿದ್ದಾರೆ. ಅದಕ್ಕೆ ಪಶ್ಚಾತ್ಥಾಪವನ್ನು ಪಟ್ಟಿದ್ದಾರೆ. ಕ್ಷಮೆ ಕೇಳುವುದಕ್ಕೆ ಅವಕಾಶ ಕೊಡಿ ಎಂದರು. ಆದರೆ ಅಂಬರೀಷ್ ರಾಜಿನಾಮೆ ಸಾಧ್ಯವಿಲ್ಲ. ಚೌಹ್ವಾಣ್ ಮಾತ್ರ ಕ್ಷಮೆ ಯಾಚಿಸಲಿ ಎಂದು ಸಿದ್ದರಾಮಯ್ಯ ಮತ್ತೆ ಆಗ್ರಹಿಸಿದರು. ಹೀಗಾಗಿ ಕೆಲ ಹೊತ್ತು ವಾದ-ವಿವಾದ ಮುಂದುವರೆದಿದ್ದು, ಶುಕ್ರವಾರ ಸ್ಪೀಕರ್ ಕೊಡುವ ತೀರ್ಮಾನ ಆಧರಿಸಿ ನಿರ್ಧಾರ ತೆಗೆದುಕೊಳ್ಳಲು ಉಭಯ ಪಕ್ಷಗಳು ತೀರ್ಮಾನಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com